Advertisement

ಸಚಿವ ನಾರಾಯಣಗೌಡ ವಿರುದ್ಧ ಪ್ರತಿಭಟನೆ

04:48 PM Feb 29, 2020 | Suhan S |

ಹಾವೇರಿ: ಸಚಿವ ನಾರಾಯಣಗೌಡ “ಜೈ ಮಹಾರಾಷ್ಟ್ರ’ ಎಂದು ಜೈಕಾರ ಕೂಗಿ ಕನ್ನಡಿಗರ ಸ್ವಾಭಿಮಾನಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

Advertisement

ನಗರದ ವೀರಭದ್ರೇಶ್ವರ ದೇವಸ್ಥಾನದಿಂದ ಕೆಇಬಿ ಹತ್ತಿರದ ಶ್ರೀ ಸಂಗೂರ ಕರಿಯಪ್ಪ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು, ತಹಶೀಲ್ದಾರ್‌ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಮಹಾರಾಷ್ಟ್ರಕ್ಕೆ ಜೈಕಾರ ಕೂಗಿರುವ ನಾರಾಯಣಗೌಡ ಸಚಿವರಾಗಲು ಅರ್ಹರಲ್ಲ. ಮುಖ್ಯಮಂತ್ರಿಯವರು ಕೂಡಲೇ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದರು.

ನಾರಾಯಣಗೌಡರಿಗೆ ಮಹಾರಾಷ್ಟ್ರ ಬಗ್ಗೆ ಅಷ್ಟೊಂದು ಮಮಕಾರವಿದ್ದರೆ ಅಲ್ಲಿಗೆ ಹೋಗಿ ರಾಜಕಾರಣ ಮಾಡಲಿ. ಅಲ್ಲೇ ಶಾಸಕರಾಗಿ ಗೆದ್ದು ಮಂತ್ರಿ ಆಗಲಿ. ಕರ್ನಾಟಕಕ್ಕೆ ಇಂಥ ಕೃತಘ್ನ ರಾಜಕಾರಣಿಗಳು ಬೇಕಿಲ್ಲ. ನಾರಾಯಣಗೌಡ ಅವರನ್ನು ಗೆಲ್ಲಿಸಿರುವುದು ಕರ್ನಾಟಕದ ಜನತೆಯೇ ವಿನಃ ಮರಾಠಿಗರಲ್ಲ. ಕನ್ನಡಿಗರಿಗೆ ಅವರು ನಿಷ್ಠರಾಗಿರಬೇಕು. ಕನ್ನಡಿಗರನ್ನು ಕೆರಳಿಸುವ ಧೋರಣೆ ಪ್ರದರ್ಶಿಸಿದರೆ ಜನತೆ ಸುಮ್ಮನಿರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಸುಪ್ರೀಂಕೋರ್ಟ್‌ನಲ್ಲಿದೆ. ಮಹಾರಾಷ್ಟ್ರದ ರಾಜಕಾರಣಿಗಳು ಪದೇ-ಪದೇ ಗಡಿ ವಿವಾದ ಕೆಣಕುತ್ತ ಬೆಳಗಾವಿಯಲ್ಲಿ ಗಲಭೆ ಎಬ್ಬಿಸುವ ಸಂಚು ಮಾಡುತ್ತಲೇ ಇದ್ದಾರೆ. ಇದೆಲ್ಲ ಸರ್ಕಾರದ ಮಂತ್ರಿ ಆದವರಿಗೆ ಗೊತ್ತಿಲ್ಲವೇ?, ಕನ್ನಡಿಗರನ್ನು ಎದುರು ಹಾಕಿಕೊಂಡು ರಾಜಕಾರಣ ಮಾಡುವುದು ಸುಲಭವಲ್ಲ. ಅವರಿಗೆ ಕನ್ನಡಿಗರ ಬಗ್ಗೆ ಸರಿಯಾಗಿ ಅರ್ಥ ಮಾಡಿಸುವ ಕೆಲಸ ಕರ್ನಾಟಕ ರಕ್ಷಣಾ ವೇದಿಕೆ ಮಾಡುತ್ತದೆ ಎಂದು ಕಾರ್ಯಕರ್ತರು ಎಚ್ಚರಿಕೆ ನೀಡಿದರು.

Advertisement

ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಅಧ್ಯಕ್ಷ ಸತೀಶಗೌಡ ಮುದಿಗೌಡ್ರ, ರಾಜ್ಯ ಸಂಘಟನಾ ಕಾರ್ಯದರ್ಶಿ ಕರಬಸಯ್ಯ ಬಸರಿಹಳ್ಳಿಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಶವಂತಗೌಡ ದೊಡ್ಡಗೌಡ್ರ, ಜಿಲ್ಲಾ ಉಪಾಧ್ಯಕ್ಷ ನಂದೀಶ ಗೊಡ್ಡೆಮ್ಮಿ, ಜಹಿರುದ್ದೀನ್‌ ಬೆಂಕಿಪುರ, ಯುಸೂಫ್‌ ಸ್ಯಕಲ್‌ಗಾರ, ಹಸನಸಾಬ ಹತ್ತಿಮತ್ತೂರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next