Advertisement
ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ, ಕಾಸರಗೋಡು ಕರ್ನಾಟಕದ ಅವಿಭಾಜ್ಯ ಪ್ರದೇಶ. ಈ ಜಿಲ್ಲೆಗೆ ಸಂವಿಧಾನವೇ ಭಾಷಾ ಅಲ್ಪಸಂಖ್ಯಾಕ ಮಾನ್ಯತೆ ನೀಡಿದೆ. ಹಾಗಿರುವಾಗ ಅಲ್ಲಿನ ಆಡಳಿತ, ಶಿಕ್ಷಣ ಕನ್ನಡದಲ್ಲಿ ಇರಬೇಕು. ಆದರೆ ಮಲಯಾಳಿ ಹೇರಿಕೆಯಿಂದಾಗಿ ಆ ಜಿಲ್ಲೆಯಲ್ಲಿ ಕನ್ನಡಿಗರಿಗೆ ಸಮಸ್ಯೆಯಾಗುತ್ತಿದೆ. ಕಾಸರಗೋಡಿನಲ್ಲಿ ಕನ್ನಡ ಕಲರವಕ್ಕಾಗಿ ದಿಲ್ಲಿಯವರೆಗೆ ಧ್ವನಿ ಪ್ರತಿಧ್ವನಿಸಬೇಕಿದೆ ಎಂದರು.
ಕರ್ನಾಟಕ ಸರಕಾರವು ಸಿಇಟಿ ಮುಂತಾದ ಉನ್ನತ ಶಿಕ್ಷಣದ ಪ್ರವೇಶಾತಿ ಪರೀಕ್ಷೆ ನಡೆಸುವ ಸಂದರ್ಭ ಗಡಿನಾಡು ಕನ್ನಡಿಗರಿಗೆ ಮೀಸಲಾತಿ ನೀಡಿದೆಯಾದರೂ, ಈ ಮೀಸಲಾತಿಯ ದುರ್ಬಳಕೆಯಾಗುತ್ತಿದೆ. ಕನ್ನಡಿಗರಲ್ಲದವರು ಅಕ್ರಮ ಮಾರ್ಗದ ಮೂಲಕ ಪ್ರಮಾಣಪತ್ರ ಹಾಜರುಪಡಿಸಿ ಪ್ರವೇಶಾತಿ ಗಿಟ್ಟಿಸಿಕೊಳ್ಳುತ್ತಿರುವುದರಿಂದ ಅರ್ಹರು ವಂಚಿತರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಒಂದರಿಂದ ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ ಅಥವಾ ಕನ್ನಡವನ್ನು ಒಂದು ಭಾಷೆಯಾಗಿ ತಮ್ಮ ಪ್ರೌಢಶಾಲೆಯವರೆಗಿನ ವಿದ್ಯಾಭ್ಯಾಸದಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಮಾತ್ರವೇ ಈ ಮೀಸಲಾತಿ ಜಾರಿಗೆ ಬರುವಂತೆ ಕ್ರಮ ವಹಿಸಬೇಕು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಹಿರಿಯ ನಾಗರಿಕರಿಗೆ ನೀಡುವ ರಿಯಾಯಿತಿಯು ಸೂಕ್ತ ಪ್ರಮಾಣಪತ್ರಗಳನ್ನು ಹೊಂದಿದ ಕಾಸರಗೋಡಿನ ಕನ್ನಡಿಗ ಹಿರಿಯ ನಾಗರಿಕರಿಗೆ ಕೂಡ ಅನ್ವಯವಾಗುವಂತೆ ಕ್ರಮ ಕೈಗೊಳ್ಳಬೇಕು. ಮಂಗಳೂರು ರೈಲು ನಿಲ್ದಾಣದಲ್ಲಿ ಕನ್ನಡ ಮಾಹಿತಿ, ಸೂಚನೆ ಹಾಗೂ ಮಂಗಳೂರಿನಿಂದ ಕಾಂಞಂಗಾಡಿನವರೆಗಿನ ರೈಲು ನಿಲ್ದಾಣಗಳಲ್ಲಿ ಮಲಯಾಳದೊಂದಿಗೆ ಕನ್ನಡ ಭಾಷೆಯನ್ನೂ ಬಳಸಲು ಸೂಕ್ತ ಆದೇಶ ನೀಡಬೇಕು ಎಂಬುದಾಗಿ ರೈಲ್ವೇ ಅಧಿಕಾರಿಗಳಿಗೆ ಸೂಚಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದ.ಕ. ಜಿಲ್ಲಾಧಿಕಾರಿಯವರಿಗೆ ಈ ವೇಳೆ ಮನವಿ ಸಲ್ಲಿಸಲಾಯಿತು. ಸಮಿತಿ ಅಧ್ಯಕ್ಷ ಮುರಳೀಧರ ಬಳ್ಳಕ್ಕುರಾಯ, ಪ್ರ.ಕಾರ್ಯದರ್ಶಿ ಭಾಸ್ಕರ ಕಾಸರಗೋಡು, ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಕಾಸರಗೋಡು ಕನ್ನಡ ಸಾಹಿತ್ಯ ಪರಿಷತ್ ಅಧಕ್ಷ ಎಸ್.ವಿ. ಭಟ್, ಕಾಸರಗೋಡು ಕನ್ನಡ ಅಧ್ಯಾಪಕರ ಸಂಘದ ವಕ್ತಾರ ಮಹಾಲಿಂಗೇಶ್ವರ ಭಟ್, ಕಾಸರಗೋಡು ಕನ್ನಡ ಜಾಗೃತ ಸಮಿತಿ ಜಿಲ್ಲಾಧ್ಯಕ್ಷ ಸತ್ಯನಾರಾಯಣ, ಕರ್ನಾಟಕ ರಕ್ಷಣಾ ವೇದಿಕೆ ಮುಖಂಡ ಅನಿಲ್‌ದಾಸ್, ತುರವೇ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು, ರವೀಂದ್ರ ಶೆಟ್ಟಿ, ಶಿವರಾಮ ಕಾಸರಗೋಡು ಉಪಸ್ಥಿತರಿದ್ದರು.
Related Articles
ಕಾಸರಗೋಡು ಜಿ.ಪಂ. ಸದಸ್ಯ ಹರ್ಷಾದ್ ವರ್ಕಾಡಿ ಮಾತನಾಡಿ, ಕೇರಳ ಸರಕಾರವು ಕಾಸರಗೋಡಿನ ಕನ್ನಡ ಮಾಧ್ಯಮ ಶಾಲೆಗಳಿಗೆ ಮಲಯಾಳಿ ಅಧ್ಯಾಪಕರನ್ನು ನೇಮಕ ಮಾಡಿ ಕನ್ನಡ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದೆ. ಕಡ್ಡಾಯ ಮಲಯಾಳ ಭಾಷಾ ಹೇರಿಕೆಯಿಂದಾಗಿ ಕನ್ನಡದ ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ. ಭಾಷಾ ಅಲ್ಪಸಂಖ್ಯಾಕರಿಗೆ ಸಿಗಬೇಕಾದ ಸಾಂವಿಧಾನಿಕ ಹಕ್ಕುಗಳನ್ನು ಕೇರಳ ಸರಕಾರವು ಗಡಿನಾಡ ಕನ್ನಡಿಗರಿಗೆ ನೀಡಬೇಕು. ಈ ನಿಟ್ಟಿನಲ್ಲಿ ಕರ್ನಾಟಕ ಸರಕಾರ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
Advertisement