Advertisement

ರೈತರಿಗೆ ಅನ್ಯಾಯವಾದರೆ ಪ್ರತಿಭಟನೆ

02:47 PM Mar 08, 2018 | Team Udayavani |

ಬಸವಕಲ್ಯಾಣ: ತೊಗರಿ ಮತ್ತು ಕಡಲೆ ಬೇಳೆಯನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡುವ ಕೇಂದ್ರಗಳಲ್ಲಿ ರೈತರಿಗೆ ನ್ಯಾಯ ದೊರೆಯಬೇಕು. ಇಲ್ಲದಿದ್ದರೆ ರೈತ ಸಂಘದಿಂದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ ಜಮಖಂಡಿ ಹೇಳಿದರು.

Advertisement

ನಗರದ ರೈತ ಭವನದಲ್ಲಿ ನಡೆದ ತಾಲೂಕು ರೈತ ಸಂಘದ ಮಾಸಿಕ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರೈತರಿಗೆ ಅನ್ಯಾಯವಾಗುವುದನ್ನು ಸಹಿಸುವುದಿಲ್ಲ. ಕೇಂದ್ರ ಸರ್ಕಾರವು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ತೊಗರಿ ಖರೀದಿಸುವುದಾಗಿ ತಿಳಿಸಿದೆ . ಇದರಿಂದ ಜಿಲ್ಲೆಯ ಬಹಳಷ್ಟು ರೈತರಿಗೆ ಅನುಕೂಲವಾಗುತ್ತದೆ ಎಂದರು.

ಕಬ್ಬಿಗೆ 2, 200 ರೂ. ಮುಂಗಡ ಹಣ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ವಾಗ್ಧಾನ ಮಾಡಿದ್ದರು.
ಆದರೆ, ಇದುವರೆಗೆ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಮುಂಗಡ ಹಣ ನೀಡುವ ಮೂಲಕ ರೈತರ ನೆರವಿಗೆ ಧಾವಿಸಬೇಕು ಎಂಬುದು ರೈತ ಸಂಘದ ಒತ್ತಾಯವಾಗಿದೆ. ಇಲ್ಲದಿದ್ದರೆ ಉಸ್ತುವಾರಿ ಸಚಿವರಿಗೆ ಘೇರಾವ್‌ ಹಾಕಿ ಪ್ರತಿಭಟನೆ ವ್ಯಕ್ತಪಡಿಸಲಾಗುವುದು ಎಂದರು.

ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಭಾರಿ ಕಾರ್ಯದರ್ಶಿ ರವೀಂದ್ರ ಮೇತ್ರೆ ಮಾತನಾಡಿ, ಕೃಷಿ ಉತ್ಪನ್ನ
ಮಾರುಕಟ್ಟೆಯಿಂದ ರೈತರಿಗೆ ಸಿಗುವ ಸಹಾಯ, ಸೌಲಭ್ಯಗಳನ್ನು ಅರ್ಹ ರೈತರಿಗೆ ತಲುಪಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು. ರೈತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಎಪಿಎಂಸಿಯಲ್ಲಿ ಪ್ರಭಾರಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ರವೀಂದ್ರನಾಥ ಅವರಿಗೆ ಪೂರ್ಣ
ಪ್ರಮಾಣದ ಕಾರ್ಯದರ್ಶಿ ಹುದ್ದೆ ಜವಾಬ್ದಾರಿ ನೀಡಬೇಕು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ತಾಲೂಕಿನಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಕಟಾವು ಆಗದೆ ಇರುವುದು ಕಂಡು ಬರುತ್ತಿದ್ದು, ಶೀಘ್ರ ಕಟಾವು ಮಾಡಬೇಕು ಎಂದು ಜಿಲ್ಲೆಯ ಎಲ್ಲಾ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಗೆ ಒತ್ತಾಯಿಸಲಾಯಿತು.

Advertisement

ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸುಭಾಷ ರಗಟೆ, ಎಪಿಎಂಸಿ ಸದಸ್ಯ ರಾಜ ರೆಡ್ಡಿ, ಕೆ.ಎಸ್‌. ಖಾನಸಾಬ್‌, ಸಿದ್ರಾಮಪ್ಪ ಬಾಲಕುಂದೆ, ಗುರುನಾಥ ರೆಡ್ಡಿ, ನಾಗರೆಡ್ಡಿ, ಜಗನ್ನಾಥ ರೆಡ್ಡಿ, ಚಂದ್ರಕಾಂತ ಕೊಹಿನೂರ, ಜಯಪ್ರಕಾಶ ಬಾಲಕುಂದಾ, ರೇವಣಸಿದಪ್ಪ ಯರಬಾಗ, ಮಹಿಳಾ ಘಟಕದ ಅಧ್ಯಕ್ಷೆ ಜೀಜಾಬಾಯಿ, ಲಲಿತಾಬಾಯಿ, ಕಲ್ಲಯ್ಯಸ್ವಾಮಿ ಮಂಠಾಳ, ದಯಾನಂದ ಯರಂಡಗಿ, ವಿಠಲ ಸೋನಾರ, ಚಂದ್ರಕಾಂತ ಧನ್ನೂರ, ಭೀಮರೆಡ್ಡಿ ರಂಗೆ ಇತರರು ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next