ಮೈಸೂರು: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ದುಬಾರಿ ಟೋಲ್ ಶುಲ್ಕ ಹಾಗೂ ಸರ್ವಿಸ್ ರಸ್ತೆ ನಿರ್ಮಿಸದೇ ಟೋಲ್ ಸಂಗ್ರಹ ಮಾಡುತ್ತಿರುವುದನ್ನು ಖಂಡಿಸಿ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹೆದ್ದಾರಿ ಬಳಿ ಪ್ರತಿಭಟನೆ ನಡೆಸಿದರು.
ನಗರದ ಮಣಿಪಾಲ್ ಆಸ್ಪತ್ರೆ ವೃತ್ತದ ಬಳಿ ಇರುವ ದಶಪಥ ಹೆದ್ದಾರಿ ಬಳಿ ಒಂದು ಗಂಟೆ ಕಾಲ ವಿವಿಧ ಸಂಘಟನೆ ಪ್ರಮುಖರೊಂದಿಗೆ ಪ್ರತಿಭಟನೆ ನಡೆಸಿದ ಅವರು, ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು.
ಎಕ್ಸ್‌ಪ್ರೆಸ್‌ವೇ ಹೈವೇ ನಿರ್ಮಾಣ ಹಿನ್ನೆಲೆ ರೈತರ 2600 ಎಕರೆ ಜಮೀನು ಹೋಗಿದೆ. ಮಂಡ್ಯ ಭಾಗದ ನೂರಾರು ಕುಟುಂಬಗಳು ಬೀದಿಗೆ ಬಂದಿದೆ. ಪೂರ್ಣಪ್ರಮಾಣದಲ್ಲಿ ಸರ್ವೀಸ್ ರಸ್ತೆ ನಿರ್ಮಾಣ ಮಾಡಿ ಬಳಿಕ ಟೋಲ್ ಸಂಗ್ರಹಿಸಬೇಕು ಆದರೆ, ಸರ್ಕಾರ ಈಗಾಗಲೇ ಅವೈಜ್ಞಾನಿಕವಾಗಿ ದುಬಾರಿ ಟೋಲ್ ಸಂಗ್ರಹ ಮಾಡುವ ಮೂಲಕ ಹಗಲು ದರೋಡೆಗೆ ಇಳಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಜನ ವಿರೋಧಿ ಯೋಜನೆ ಮಾಡಿ ಟೋಲ್ ಸಂಗ್ರಹ ನೆಪದಲ್ಲಿ ಹಗಲು ದರೋಡೆಗಿಳಿದಿದೆ. ರಸ್ತೆ ಬೇಕು ಎಂದು ಯಾರು ಕೇಳಿದ್ದರು? ನಮಗೆ ನಾಲ್ಕು ಪಥವೇ ಸಾಕಾಗಿತ್ತು. ಹತ್ತು ಪಥದ ರಸ್ತೆ ಮಾಡಿದ್ದೀರಾ ಆದರೆ ಬಡವರು ಓಡಾಡುವ ಸರ್ವಿಸ್ ರಸ್ತೆ ಎಲ್ಲಿದೆ ? ಅಪಘಾತವಾದರೆ ಚಿಕಿತ್ಸೆ ನೀಡಲು ಟ್ರಾಮಾ ಸೆಂಟರ್ ಎಲ್ಲಿದೆ ಎಂದು ಪ್ರಶ್ನಿಸಿದರು.
ಏ ಮೋದಿ ಏನಪ್ಪಾ ನಿಂದು ಅಂಧಾ ದರ್ಬಾರ್? ಚರ್ಚೆ ಇಲ್ಲದೆ ಕಾಯ್ದೆಗಳು ಪಾಸ್ ಆಗುತ್ತಿವೆ. ಸೇವೆಯೇ ಇಲ್ಲದೆ ಟೋಲ್ ಸಂಗ್ರಹ ಮಾಡುತ್ತಿದ್ದೀರ. ನಿಮ್ಮ ಸರ್ಕಾರದಿಂದ ಪ್ರಜಾಪ್ರಭುತ್ವ ಹಾಳಾಗುತ್ತಿದೆ.
-ಎಚ್.ವಿಶ್ವನಾಥ್, ಬಿಜೆಪಿ ಎಂಎಲ್ಸಿ
ರಾಜ್ಯದ ಎಲ್ಲಾ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಗಳು ಟೋಲ್ ಶುಲ್ಕ ವಸೂಲಿ ಮಾಡುತ್ತಿವೆ. ಆದರೆ, ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಹೊಟ್ಟೆಕಿಚ್ಚಿನಿಂದ ಜೆಡಿಎಸ್, ಕಾಂಗ್ರೆಸ್ ಮುಖಂಡರು ಜನರ ದಾರಿ ತಪ್ಪಿಸಲು ಹೋರಾಟ ಮಾಡುವ ನಾಟಕವಾಡುತ್ತಿದ್ದಾರೆ.
-ಆರ್.ಅಶೋಕ್, ಕಂದಾಯ ಸಚಿವ