Advertisement

ನಾಲಿಗೆ ಹರಿಬಿಟ್ಟರೆ ಈಶ್ವರಪ್ಪ ವಿರುದ್ಧ ಪ್ರತಿಭಟನೆ: ಸುಂದರೇಶ್‌

04:19 PM Dec 02, 2021 | Vishnudas Patil |

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೈಯುವುದೇ ಸಚಿವ ಈಶ್ವರಪ್ಪನವರ ಕೆಲಸವಾಗಿದೆ. ಇತ್ತೀಚೆಗೆ ಅವರು ನಾಲಿಗೆ ಹರಿ ಬಿಡುತ್ತಿದ್ದು, ಇದು ಮುಂದುವರೆದರೆ ಈಶ್ವರಪ್ಪ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಚ್‌. ಎಸ್‌. ಸುಂದರೇಶ್‌ ಎಚ್ಚರಿಕೆ ನೀಡಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆ.ಎಸ್‌. ಈಶ್ವರಪ್ಪ ಅವರು ತಾವೊಬ್ಬ ಸಚಿವ ಎಂಬುದನ್ನು ಹಾಗೂ ತಮ್ಮ ಇಲಾಖೆ, ಕ್ಷೇತ್ರದ ಅಭಿವೃದ್ಧಿಯನ್ನೇ ಮರೆತು ಬಿಟ್ಟಿದ್ದಾರೆ. ನಾಲಿಗೆ ಹರಿಬಿಟ್ಟು ಸಿದ್ದರಾಮಯ್ಯ ಅವರನ್ನು ಕುಡುಕ ಎಂದು ಕರೆದಿದ್ದಾರೆ. ಹೀಗೆ ಮಾತನಾಡುವುದನ್ನು ಅವರು ಬಿಡಬೇಕು. ಇದೇ ರೀತಿ ಕಾಂಗ್ರೆಸ್‌ ನಾಯಕರಿಗೆ ಬೈಯುವುದನ್ನು ಮುಂದುವರೆಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ. ನಮಗೂ ಬೈಯಲು ಬರುತ್ತದೆ. ಆದರೆ ಅವರಷ್ಟು ಹೀನ ಸಂಸ್ಕೃತಿಗೆ ನಾವು ಇಳಿಯುವುದಿಲ್ಲ ಎಂದರು.

ಈಶ್ವರಪ್ಪ ಅವರ ಜೊತೆಗೆ ಇನ್ನೂ ಕೆಲವು ಬಿಜೆಪಿ ಮುಖಂಡರು ಬಾಯಿಗೆ ಬಂದಂತೆ ಮಾತನಾಡುವುದನ್ನು ಕಲಿತಿದ್ದಾರೆ. ಸಿಟಿ ರವಿ, ಶೋಭಾ ಕರಂದ್ಲಾಜೆ, ರೇಣುಕಾಚಾರ್ಯ ಸೇರಿದಂತೆ ಹಲವರಿಗೆ ಮೇದುಳೇ ಇಲ್ಲ. ಒಟ್ಟಾರೆ ಬಿಜೆಪಿಯ ಅನೇಕರಿಗೆ ಸಂಸ್ಕಾರ-ಸಂಸ್ಕೃತಿ ಮರೆತುಹೋಗಿದೆ ಎಂದು ಟೀಕಿಸಿದರು. ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಆರ್‌.ಪ್ರಸನ್ನಕುಮಾರ್‌ ಅವರಿಗೆ ಎಲ್ಲ ಕಡೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಅವರು ಈ ಬಾರಿ ಗೆಲ್ಲುವುದು ಖಚಿತ. ಕಾಂಗ್ರೆಸ್‌ ಬೆಂಬಲಿತ ಗ್ರಾಪಂ ಸದಸ್ಯರೇ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಗೆಲುವು ಸುಲಭವಾಗಲಿದೆ. ಕಾಂಗ್ರೆಸ್‌ ತಂಡವೇ ಅವರ ಪರವಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ಮಧ್ಯೆ ನೇರ ಪೈಪೋಟಿ ಇದ್ದು, ಜೆಡಿಎಸ್‌ ಕೂಡ ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲ ನೀಡಲಿದೆ ಎಂದರು.

ಪ್ರಚಾರ ಸಭೆಗೆ ಸಿದ್ದು-ಡಿಕೆಶಿ ಆಗಮನ

ವಿಧಾನ ಪರಿಷತ್‌ ಚುನಾವಣೆ ಪ್ರಚಾರ ಕಾರ್ಯಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಅವರು ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ ಎಂದು ಸುಂದರೇಶ್‌ ಹೇಳಿದರು.

Advertisement

ಡಿ.3ರಂದು ಶಿವಮೊಗ್ಗಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್‌ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್‌ ಸೇರಿದಂತೆ ಹಲವು ಕಾಂಗ್ರೆಸ್‌ ಮುಖಂಡರು ಬರಲಿದ್ದಾರೆ. ಅಂದು ಮಧ್ಯಾಹ್ನ 3 ಗಂಟೆಗೆ ನಗರದ ಸರ್ಜಿ ಕಲ್ಯಾಣ ಮಂದಿರದಲ್ಲಿ ಅಭ್ಯರ್ಥಿ ಪರವಾಗಿ ಪ್ರಚಾರ ಕಾರ್ಯ ನಡೆಸಲಿದ್ದಾರೆ. ಪ್ರಚಾರ ಸಭೆಯಲ್ಲಿ ಕಾರ್ಯಕರ್ತರು ಮತ್ತು ಜನಪ್ರತಿನಿಧಿ ಗಳು ಭಾಗವಹಿಸಲಿದ್ದಾರೆ. ಜನಪ್ರತಿನಿ ಧಿಗಳು ಹೆಚ್ಚು ಸಂಖ್ಯೆಯಲ್ಲಿ ಬರಬೇಕೆಂದು ಮನವಿ ಮಾಡಿದರು.

ಪರಿಷತ್‌ ಚುನಾವಣೆ ಕಾಂಗ್ರೆಸ್‌ ಅಭ್ಯರ್ಥಿ ಆರ್‌ .ಪ್ರಸನ್ನಕುಮಾರ್‌ ಮಾತನಾಡಿ, ಈಗಾಗಲೇ ಪ್ರಚಾರದ ಮೊದಲ ಸುತ್ತನ್ನು ಮುಗಿಸಿದ್ದೇನೆ. ಶಿವಮೊಗ್ಗ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ದಾವಣೆಗೆರೆ ಜಿಲ್ಲೆಯ ಹೊನ್ನಾಳಿ, ಚನ್ನಗಿರಿ ಮತ್ತು ಭಾಗಶಃ ಕ್ಷೇತ್ರವಾದ ಮಾಯಕೊಂಡದಲ್ಲಿ ಪ್ರಚಾರ ಮಾಡಿದ್ದೇನೆ. ಎಲ್ಲ ಕಡೆ ತಮಗೆ ಅತೀವ ಬೆಂಬಲ ವ್ಯಕ್ತವಾಗುತ್ತಿದೆ. ಈಗ 2ನೇ ಸುತ್ತು ಪ್ರಚಾರ ಇಂದಿನಿಂದಲೇ ಪ್ರಾರಂಭಿಸಿದ್ದೇನೆ. ತಮ್ಮೊಂದಿಗೆ ಕಾರ್ಯಕರ್ತರು ಮುಖಂಡರು ಆಯಾ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್‌ ನಾಯಕರು ತಮ್ಮ ಪರವಾಗಿ ಪ್ರಚಾರ ಕೈಗೊಳ್ಳಲಿದ್ದಾರೆ. ಎಲ್ಲರ ಸಹಕಾರದೊಂದಿಗೆ ತಾವು ಈ ಬಾರಿ ಗೆಲ್ಲುವುದು ಸುಲಭ ಎಂದರು.

ಕಳೆದ ಬಾರಿ ವಿಧಾನ ಪರಿಷತ್‌ ಸದಸ್ಯನಾಗಿದ್ದಾಗ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಗ್ರಾಮೀಣಾಭಿವೃದ್ಧಿಗೆ ಶ್ರಮಿಸಿದ್ದೇನೆ. ಆದರೆ, ಸರ್ಕಾರದ ಅನುದಾನದ ಕೊರತೆಯಿಂದಾಗಿ ಪೂರ್ಣ ಪ್ರಮಾಣದ ಕೆಲಸ ಮಾಡಲು ಆಗಿಲ್ಲ. ಬಿಜೆಪಿ ಸರ್ಕಾರ ಗ್ರಾಮ ಪಂಚಾಯಿತಿಗಳು ಗಟ್ಟಿಗೊಳ್ಳಲು ಯಾವ ಕ್ರಮವನ್ನು ಕೈಗೊಳ್ಳಲಿಲ್ಲ. 2 ಕೋ ರೂ.ಅನುದಾನದಲ್ಲಿ ಕೇವಲ 1 ಕೋ.ರೂ. ಮಾತ್ರ ಬಿಡುಗಡೆ ಮಾಡಿದ್ದರು. ಕೋವೀಡ್‌ ಕೂಡ ಅಭಿವೃದ್ಧಿಗೆ ಹಿನ್ನಡೆಯಾಯಿತು. ಈ ಎಲ್ಲ ಕೆಲಸಗಳನ್ನು ತಾವು ಗೆದ್ದ ಮೇಲೆ ಪೂರ್ಣಗೊಳಿಸುವುದಾಗಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಚ್‌. ಎಸ್‌.ಸುಂದರೇಶ್‌, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್‌ ಮುಖಂಡರಾದ ಎನ್‌.ರಮೇಶ್‌, ಕಲಗೋಡು ರತ್ನಾಕರ್‌, ಎಚ್‌.ಸಿ. ಯೋಗೀಶ್‌, ಎಸ್‌.ಪಿ. ದಿನೇಶ್‌, ಇಕ್ಕೇರಿ ರಮೇಶ್‌, ವಿಜಯಕುಮಾರ್‌, ದೇವಿಕುಮಾರ್‌ ಉಪಸ್ಥಿತರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next