Advertisement

ವಿದ್ಯುತ್‌ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ

06:14 AM Jun 02, 2020 | Suhan S |

ಗಜೇಂದ್ರಗಡ: 2003ರ ವಿದ್ಯುತ್‌ ಕಾಯ್ದೆ ಪ್ರಸ್ತಾಪಿತ ತಿದ್ದುಪಡಿ, ವಿದ್ಯುತ್‌ ಕ್ಷೇತ್ರದಲ್ಲಿ ಹೊರಗುತ್ತಿಗೆ ಹಾಗೂ ಖಾಸಗೀಕರಣ ವಿರೋಧಿಸಿ ಕರ್ನಾಟಕ ವಿದ್ಯುತ್‌ ಪ್ರಸರಣ ಸಂಘ ಮತ್ತು ಅಸೋಸೀಯೇಷನ್‌ಗಳ ಒಕ್ಕೂಟದದಿಂದ ಸೋಮವಾರ ಪಟ್ಟಣದ ಹೆಸ್ಕಾಂ ಕಚೇರಿ ಮುಂಭಾಗದಲ್ಲಿ ಕಪ್ಪುಪಟ್ಟಿ ಪ್ರದರ್ಶಿಸಿ ಪ್ರತಿಭಟನೆ ನಡೆಸಲಾಯಿತು.

Advertisement

ಕೇಂದ್ರ ಸರ್ಕಾರವು ಕೋವಿಡ್  ಸಂಕಷ್ಟ ಹಾಗೂ ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ ವಿದ್ಯುತ್‌ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವುದು ಸರಿಯಾದ ಕ್ರಮವಲ್ಲ. ದೇಶದ ಜನತೆ ಮಹಾಮಾರಿಯ ಹೊಡೆತಕ್ಕೆ ನಲುಗಿ ಹೋಗಿದ್ದಾರೆ. ಕೇಂದ್ರವು ಪರಿಸ್ಥಿತಿಯ ಗಂಭೀರತೆ ಅರಿಯದೇ ವಿದ್ಯುತ್‌ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ. ಈ ಕಾಯ್ದೆಯಿಂದ ವಿದ್ಯುತ್‌ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಹಲವಾರು ಕಾರ್ಮಿಕರಿಗೆ ತೀವ್ರ ಹೊಡೆತ ಬೀಳಲಿದೆ ಎಂದು ದೂರಿದರು.

ಕಾಯ್ದೆ ತಿದ್ದುಪಡಿ ಮಾಡಿದರೆ ವಿದ್ಯುತ್‌ ಪ್ರಸರಣ ವ್ಯವಸ್ಥೆಯಲ್ಲಿ ಖಾಸಗಿ ಕಂಪನಿಗಳ ಕೈ ಬಲವಾಗಲಿದೆ. ವಿದ್ಯುತ್‌ ಮಾರಾಟ, ಖರೀದಿ, ಪ್ರಸರಣ, ಸಬ್‌ ಲೈಸೆನ್ಸಿಂಗ್‌ ಹಾಗೂ ಪ್ರಾಂಚೈಸಿ ವ್ಯವಸ್ಥೆ ಸಂಪೂರ್ಣವಾಗಿ ಖಾಸಗಿಯವರ ಪಾಲಾಗುತ್ತದೆ. ರೈತರು ಮತ್ತು ಬಡವರಿಗೆ ಉಚಿತವಾಗಿ ನೀಡುತ್ತಿದ್ದ ಸಬ್ಸಿಡಿ ದರದ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ದರ ಹೆಚ್ಚಳದ ಅಧಿಕಾರ ಖಾಸಗಿಯವರ ಪಾಲಾಗಲಿದೆ.

ಈ ಹಿನ್ನೆಲೆಯಲ್ಲಿ ಕಾರ್ಮಿಕ, ರೈತರ, ಬಡವರ ವಿರೋಧಿ ಕಾಯ್ದೆಯನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದರು. ಹೆಸ್ಕಾಂ ಅಧಿಕಾರಿಗಳಾದ ವೀರೇಶ ರಾಜೂರ, ಬಸವರಾಜ ಮಹಾಮನಿ, ಪ್ರಶಾಂತ್‌ ಸೂರ್ಯವಂಶಿ, ಜಿ.ಎನ್‌. ರಂಗ್ರೇಜಿ, ಸಿದ್ದು ಪಾಡಾ, ಬಿ.ವಿ. ಹವಳಪ್ಪನವರ, ಹೀನಾ ಕೌಜಲಗಿ, ಪರಶುರಾಮ ಸವಣೂರ, ಐ.ಬಿ. ಬಡಿಗೇರ, ಆನಂದ ಸೇರಿ ಇತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next