Advertisement

ಪೌರತ್ವ ತಿದ್ದುಪಡಿ ವಿರುದ್ಧ ಧರಣಿ

12:37 AM Dec 12, 2019 | Lakshmi GovindaRaj |

ಬೆಂಗಳೂರು: ಕೇಂದ್ರದ ಪೌರತ್ವ ಕಾಯ್ದೆ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿ ರಾಜ್ಯ ಕಾಂಗ್ರೆಸ್‌ ವತಿಯಿಂದ ಕೇಂದ್ರ ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸಲಾಯಿತು.  ಕೆಪಿಸಿಸಿ ಕಚೇರಿ ಮುಂಭಾಗ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ನೇತೃತ್ವದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕೇಂದ್ರ ಬಿಜೆಪಿ ನಾಯಕರು ಹಾಗೂ ಪ್ರಧಾನಿ ಮೋದಿ ವಿರುದ್ಧ ಧಿಕ್ಕಾರ ಕೂಗಿದರು. ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕರಿಸುವುದನ್ನು ರದ್ದುಪಡಿಸಬೇಕು.

Advertisement

ದೇಶದಲ್ಲಿ ಎಲ್ಲರಿಗೂ ಬದುಕುವ ಹಕ್ಕಿದ್ದು, ಆ ಹಕ್ಕನ್ನು ಕಸಿದುಕೊಳ್ಳಬಾರದು. ಬಿಜೆಪಿ ಮುಸಲ್ಮಾನರನ್ನು ಗುರಿಯಾಗಿಸಿ ಕೊಂಡು ಪೌರತ್ವ ಮಸೂದೆಗೆ ತಿದ್ದಪಡಿ ತಂದಿರುವುದು ಸಂವಿಧಾನ ವಿರೋಧಿ ಕ್ರಮ. ಈ ಕೂಡಲೇ ಈ ಕಾಯ್ದೆಯನ್ನ ವಾಪಸ್‌ ಪಡೆಯುವಂತೆ ಆಗ್ರಹಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಮಾತನಾಡಿ, ಪೌರತ್ವ ಮಸೂದೆ ನಮಗೆ ಬೇಡ.ಅಕ್ರಮ ವಲಸಿಗರ ಹೆಸರಿನಲ್ಲಿ ವಂಚನೆ ನಡೆಯುತ್ತಿದ್ದು, ಬಿಜೆಪಿ ಕಾಯಿದೆ ಹೆಸರಿನಲ್ಲಿ ಮುಸ್ಲಿಮರನ್ನು ಹೊರಹಾಕುವ ಪ್ರಯತ್ನ ಮಾಡು ತ್ತಿದೆ. ಕೇಂದ್ರದ ನಡೆ ಸಂವಿಧಾನದ ಮೇಲೆ ಅಕ್ರಮಣಕಾರಿಯಾಗಿದೆ. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಂವಿಧಾನಕ್ಕೆ ಧಕ್ಕೆ ತರುತ್ತಿದ್ದಾರೆ ಎಂದರು.

ಯಾವುದೇ ಹುದ್ದೆ ನಿಭಾಯಿಸುವೆ-ಖಂಡ್ರೆ: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್‌ ಗುಂಡೂರಾವ್‌ ರಾಜೀನಾಮೆ ಕೊಟ್ಟಿದ್ದಾರೆ. ಮೊದಲು ಅವರ ರಾಜಿನಾಮೆ ಅಂಗೀಕಾರವಾಗಬೇಕು. ರಾಜೀ ನಾಮೆ ಅಂಗೀಕಾರವಾದ ಬಳಿಕ ಮುಂದೆ ಯಾರು ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ನನಗೆ ಹೈಕಮಾಂಡ್‌ ಯಾವುದೇ ಹುದ್ದೆ ಕೊಟ್ಟರೂ ನಿಭಾಯಿಸಲು ನಾನು ಸಿದ್ಧ ಎಂದು ಈಶ್ವರ್‌ ಖಂಡ್ರೆ ಹೇಳಿದರು. ಗುರುವಾರ ಭಾರತ ಬಚಾವೋ ಪ್ರತಿಭಟನೆಗೆ ಎಲ್ಲ ನಾಯಕರು ದೆಹಲಿಗೆ ಹೋಗುತ್ತಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next