Advertisement

ಪೌರತ್ವ ಕಾಯ್ದೆ ತಿದ್ದುಪಡಿ ವಿರುದ್ಧ 19 ರಂದು ಪ್ರತಿಭಟನೆ

08:36 PM Dec 16, 2019 | Lakshmi GovindaRaj |

ಹಾಸನ: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಬಿ) ಮತ್ತು ರಾಷ್ಟ್ರೀಯ ಪೌರರ ದಾಖಲಾತಿ(ಎನ್‌ಆರ್‌ಸಿ.) ವಿರುದ್ಧ ಡಿ. 19 ರಂದು ಎಡಪಕ್ಷಗಳು ಹಾಗೂ ಜಾತ್ಯತೀತ ಪ್ರಜಾಸತ್ತಾತ್ಮಕ ಸಂಘಟನೆಗಳು ಹಾಸನದಲ್ಲಿ ಪ್ರತಿಭಟನೆ ನಡೆಸಲಿವೆ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಧರ್ಮೇಶ್‌ ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೌರತ್ವ ಕಾಯ್ದೆ ತಿದ್ದುಪಡಿಯನ್ನು ಸಂಸತ್ತಿನ ಎರಡೂ ಸದನಗಳು ಅಂಗೀಕರಿಸಿವೆ. ಆದರೆ ಈ ಮಸೂದೆಯು ಭಾರತೀಯ ಸಂವಿಧಾನದ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದರು.

Advertisement

ಜಾತ್ಯತೀತತೆ ಪ್ರಜಾಪ್ರಭುತ್ವಕ್ಕೆ ವಿರುದ್ಧ: ಭಾರತೀಯ ಗಣತಂತ್ರದ ಪ್ರಜಾಸತ್ತಾತ್ಮಕ ಬುನಾದಿಯನ್ನು ನಾಶಪಡಿಸುವುದೇ ಅದರ ಉದ್ದೇಶವಾಗಿದೆ. ಎಡಪಕ್ಷಗಳು ಮತ್ತು ಜಾತ್ಯತೀತ ಪ್ರಜಾಸತ್ತಾತ್ಮಕ ಸಂಘಟನೆಗಳು ಇದನ್ನು ಬಲವಾಗಿ ವಿರೋಧಿಸುತ್ತವೆ. ಇದು ಪೌರತ್ವವನ್ನು ಒಬ್ಬ ವ್ಯಕ್ತಿಯ ಧಾರ್ಮಿಕ ನೆಲೆಯೊಂದಿಗೆ ಜೋಡಿಸುತ್ತದೆ. ಇದು ದೇಶದ ಜಾತ್ಯತೀತತೆ ಪ್ರಜಾಪ್ರಭುತ್ವಕ್ಕೆ ತದ್ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದ ಐಕ್ಯತೆಗೆ ಮಾರಕ: ದೇಶದಲ್ಲಿ ಕೋಮು ವಿಭಜನೆ ಮತ್ತು ಸಾಮಾಜಿಕ ಧ್ರುವೀಕರಣವನ್ನು ಇನ್ನಷ್ಟು ತೀಕ್ಷ್ಣಗೊಳಿಸುವುದು ಈ ಮಸೂದೆಯ ಉದ್ದೇಶ. ಇದು ನಮ್ಮ ದೇಶದ ಐಕ್ಯತೆ ಮತ್ತು ಸಮಗ್ರತೆಗೆ ಅಪಾಯಕಾರಿಯಾಗಿದ್ದು, ದೇಶಕ್ಕೆ ಹಾನಿಯುಂಟು ಮಾಡುತ್ತದೆ. ಇಂತಹ ಮಸೂದೆ ಪಾಸಾಗಿರುವುದು, ಮತ್ತು ಎನ್‌.ಆರ್‌.ಸಿ.ಯನ್ನು ಇಡೀ ದೇಶಕ್ಕೆ ವಿಸ್ತರಿಸಲಾಗುವುದು ಎಂದು ಮೋದಿ ಸರ್ಕಾರವು ಸಾರಿರುವುದು ಭಾರತೀಯ ಗಣತಂತ್ರದ ಸ್ವರೂಪವನ್ನೇ ಬದಲಿಸುವ ದುರುದ್ದೇಶ ಹೊಂದಿದೆ.

ಇದು ನಮ್ಮ ಜಾತ್ಯತೀತ ಪ್ರಜಾಪ್ರಭುತ್ವ ಗಣತಂತ್ರವನ್ನು ಹಿಂದೂ ರಾಷ್ಟ್ರವಾಗಿ ಪರಿವರ್ತಿಸುವ ಆರ್‌ಎಸ್‌ಎಸ್‌ನ ರಾಜಕೀಯ ಯೋಜನೆಯಾಗಿದೆ ಎಂದು ದೂರಿದರು. 1927ರ ಡಿ. 19ರಂದು ಸ್ವಾತಂತ್ರ ಹೋರಾಟದಲ್ಲಿ ನಮ್ಮ ಶಿರಸ್ಸನ್ನೇ ಅರ್ಪಿಸುವ ಆಕಾಂಕ್ಷೆ ಈಗ ನಮ್ಮ ಮನದಲ್ಲಿದೆ. ಆ ಕಟುಕನ ಕೈಗಳಲ್ಲಿ ಎಷ್ಟು ಬಲವಿದೆಯೋ ನೋಡೋಣ ಎಂಬ ಕವನದ ಮೂಲಕ ಇಡೀ ದೇಶದ ಜನತೆಯನ್ನು ಜಾಗೃತಗೊಳಿಸಿದ ರಾಂ ಪ್ರಸಾದ್‌ ಬಿಸ್ಮಿಲ್ಲಾರನ್ನು ಗೋರಖ್‌ಪುರ ಜೈಲಿನಲ್ಲಿ ಗಲ್ಲಿಗೇರಿಸಲಾಗಿತ್ತು. ಅವರ ಸಹ ಆರೋಪಿ ಅಷಾಖುಲ್ಲಾ ಖಾನ್‌ರನ್ನು ಫೈಝಾಬಾದ್‌ ಜೈಲಿನಲ್ಲಿ ಮತ್ತು ಇನ್ನೊಬ್ಬ ಸಹ ಆರೋಪಿ ರೋಷ‌ನ್‌ ಸಿಂಗ್‌ರನ್ನು ನೈನಿ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು.

ಮತೀಯ ನೆಲೆಗಳನ್ನು ಮೀರಿ ನಿಂತ ಈ ಐಕ್ಯತೆಯಿಂದಲೇ ನಾವು ಬ್ರಿಟಿಷರಿಂದ ನಮ್ಮ ಸ್ವಾತಂತ್ರವನ್ನು ಗೆದ್ದುಕೊಂಡಿದ್ದೇವೆ. ಆರೆಸ್ಸೆಸ್‌ – ಬಿಜೆಪಿ ಅದನ್ನೀಗ ಛಿದ್ರಗೊಳಿಸುತ್ತಿವೆ ಎಂದು ಆರೋಪಿಸಿದರು. ಈ ಹಿನ್ನೆಲೆಯಲ್ಲಿ ಹಾಸನದಲ್ಲಿ ಸಿಪಿಐ, ಸಿಪಿಎಂ, ಹಾಗೂ ರೈತ, ದಲಿತ, ವಿದ್ಯಾರ್ಥಿ, ಯುವಜನ ಮತ್ತು ಅಲ್ಪಸಂಖ್ಯಾತ ಸಮುದಾಯದ ಸಂಘಟನೆಗಳ ನೇತೃತ್ವದಲ್ಲಿಡಿ.19 ರಂದು ಪ್ರತಿಭಟನೆ ನಡೆಯಲಿದೆ. ಈ ದೇಶಪ್ರೇಮಿ ಮತ್ತು ಸಂವಿಧಾನ ಉಳಿಸುವ ಹೋರಾಟಕ್ಕೆ ಜಿಲ್ಲೆಯ ಎಲ್ಲ ನಾಗರಿಕರು ಬೆಂಬಲಿಸಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.

Advertisement

ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಂ.ಸಿ. ಡೋಂಗ್ರೆ, ದಸಂಸ ಹಿರಿಯ ಮುಖಂಡ ಎಚ್‌.ಕೆ. ಸಂದೇಶ್‌, ಜಿಲ್ಲಾ ಸಂಚಾಲಕ ಅಬ್ದುಲ್‌ ಸಮದ್‌, ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಕೊಟ್ಟೂರು ಶ್ರೀನಿವಾಸ್‌, ಕರ್ನಾಟಕ ಟಿಪ್ಪು ಸಂಘರ್ಷ ಸಮಿತಿಯ ಸೈಯದ್‌ ಅನ್ಸರ್‌, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಎಚ್‌.ಆರ್‌. ನವೀನ್‌ ಕುಮಾರ್‌, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಎಂ.ಜಿ. ಪೃಥ್ವಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ನಾಳೆ ಹಾಸನ್‌ ಬಂದ್‌ಗೆ ಕರೆ
ಹಾಸನ: ಪೌರತ್ವ ಕಾಯ್ದೆ ತಿದ್ದುಪಡಿಯನ್ನು ಖಂಡಿಸಿ ಬುಧವಾರ ಹಾಸನ ಬಂದ್‌ಗ್‌ ಮುಸ್ಲಿಂ ಹಿತರಕ್ಷಣಾ ಒಕ್ಕೂಟ ಕರೆ ನೀಡಿದ್ದು, ಮುಸಲ್ಮಾನರು ಎಲ್ಲಾ ಅಂಗಡಿಗಳನ್ನು ಮುಚ್ಚುವ ಮೂಲಕ ಬಂದ್‌ ಯಶಸ್ವಿಗೊಳಿಸಬೇಕು ಎಂದು ಒಕ್ಕೂಟದ ಅಧ್ಯಕ್ಷ ನಾಸೀರ್‌ ಹುಸೇನ್‌ ರೆಜ್ವಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬುಧವಾರ ಬೆಳಗ್ಗೆ 9 ರಿಂದ ಮಧ್ಯಾಹ್ನ 1 ಗಂಟೆಯವರೆಗೂ ಮುಸಲ್ಮಾನರು ಎಲ್ಲ ಅಂಗಡಿ ಮುಗ್ಗಟ್ಟುಗಳನ್ನು ಬಂದ್‌ ಮಾಡುವ ಮೂಲಕ ಹಾಸನ ಬಂದ್‌ಗೆ ಸಹಕರಿಸಬೇಕು.

ಪ್ರತಿಭಟನಾ ಮೆರವಣಿಗೆಯನ್ನು ಮಾಡಲಾಗುವುದು. ಕೇಂದ್ರ ಸರ್ಕಾರರು ಸಂವಿಧಾನ ವಿರೋಧಿ ಕಾಯ್ದೆಯನ್ನು ಜಾರಿಗೊಳಿಸಲು ಹೊರಟಿರುವುದರ ವಿರುದ್ಧ ಜಾತ್ಯತೀತ ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.  ಮುಸ್ಲಿಂ ಸಮುದಾಯದ ಸ್ಥಿತಿ-ಗತಿ ಬಗ್ಗೆ ಚರ್ಚೆ ಮಾಡಲು ಬುಧವಾರ ಹಾಸನದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲಾ ಮುಸ್ಲಿಮರು ಮತ್ತು ಸೆಕ್ಯೂಲರ್‌ ಪಾರ್ಟಿ ಒಂದಾಗಿ

ಈ ದೇಶದ ಸ್ಥಿತಿ-ಗತಿ ಬಗ್ಗೆ ಚರ್ಚೆ ಮಾಡುವುದಕ್ಕೆ ಬುಧವಾರ ಹಾಸನ ನಗರದ ವಲ್ಲಭಭಾಯಿ ರಸ್ತೆಯಲ್ಲಿರುವ ಅಮೀರ್‌ ಹುಸೇನ್‌ ಕಟ್ಟಡದ ಆವರಣದಲ್ಲಿ ಬೆಳಗ್ಗೆ 9 ರಿಂದ 1 ಗಂಟೆಯವರೆಗೂ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಮುಸ್ಲಿಂ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳೊಂದಿಗೆ ಇಸ್ಲಾಂ ಧಾರ್ಮಿಕ ಗುರುಗಳಾದ ಮುಫ್ತಿ ಜುಬೇರ್‌ ಅಹಮದ್‌, ಫಾರೂàಕ್‌, ಸಯ್ನಾದ್‌ ತಾಜ್‌, ಹೈದರಾಲಿಖಾನ್‌, ಮಹಮದ್‌ ಅನ್ಸರ್‌ ಸಾಹೇಬ್‌ ಸುದ್ದಿಗೋಷ್ಠಿಯಲ್ಲಿದ್ದರು

Advertisement

Udayavani is now on Telegram. Click here to join our channel and stay updated with the latest news.

Next