ಮುಂಡರಗಿ: ತಹಶೀಲ್ದಾರ್ ಕಾರ್ಯಾಲಯದಲ್ಲಿ ಸಮಯಕ್ಕೆ ಸರಿಯಾಗಿ ವೀರ ರಾಣಿ ಕಿತ್ತೂರು ಚನ್ನಮ್ಮ ಜಯಂತಿ ಆಚರಣೆ ಮಾಡಲಿಲ್ಲ ಎಂದು ಆರೋಪಿಸಿ ತಾಲೂಕು ಪಂಚಮಸಾಲಿ ಸಮಾಜದ ಮುಖಂಡರು ಮಂಗಳವಾರ ತಹಶೀಲ್ದಾರ್ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸಿ, ತಾಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ತಹಶೀಲ್ದಾರ್ ಕಾರ್ಯಾಲಯಕ್ಕೆ ಬೆಳಗ್ಗೆ 9ಕ್ಕೆ ಪಂಚಮಸಾಲಿ ಸಮಾಜದ ಮುಖಂಡರು ಸೇರಿದಂತೆ ನೂರಾರು ಜನರು ಆಗಮಿಸಿದ್ದರು. ಆದರೆ 11 ಗಂಟೆಯಾದರೂ ತಹಶೀಲ್ದಾರ್ ಕಾರ್ಯಾಲಯದಲ್ಲಿ ಚನ್ನಮ್ಮ ಜಯಂತಿ ಆಚರಣೆ ಮಾಡಿರಲಿಲ್ಲ. ಕಾರ್ಯಕ್ರಮಕ್ಕೆ ಬಂದ ಜನರು ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ಕಾರ್ಯಾಲಯಕ್ಕೆ ಆಗಮಿಸಿದ ತಹಶೀಲ್ದಾರ್ ಭ್ರಮರಾಂಬಾ ಗುಬ್ಬಿಶೆಟ್ಟಿ 11:15ಕ್ಕೆ ತಕ್ಷಣವೇ ಸಭಾಂಗಣದಲ್ಲಿ ಚನ್ನಮ್ಮಳ ಭಾವಚಿತ್ರ ಇಟ್ಟು ಜಯಂತಿ ಆಚರಣೆಗೆ ಸಿದ್ಧತೆ ಮಾಡಲು ಸೂಚಿಸಿದರು. ಆದಾಗ್ಯೂ 11:30 ಗಂಟೆಯಾದರೂ ತಾಲೂಕು ಆಡಳಿತವು ಚನ್ನಮ್ಮಳ ಜಯಂತಿ ಆಚರಣೆ ಮಾಡಲು ಮುಂದಾಗುತ್ತಿಲ್ಲವೆಂದು ಆಕ್ರೋಶಗೊಂಡ ಸಮುದಾಯದ ಜನರು ತಹಶೀಲ್ದಾರ್ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸತೊಡಗಿದರು.
ಎಲ್ಲ ಜಯಂತಿಗಳನ್ನು ತಾಲೂಕು ಆಡಳಿತ ಆಚರಣೆ ಮಾಡುತ್ತಿದೆ. ಆದರೆ ವೀರರಾಣಿ ಚನ್ನಮ್ಮಳ ಜಯಂತಿ ಆಚರಣೆ ಮಾಡಲು ಏಕೆ ನಿರ್ಲಕ್ಷ್ಯ ಮಾಡುತ್ತಿದೆ. ತಾಲೂಕು ಆಡಳಿತ ಪಂಚಮಸಾಲಿ ಸಮಾಜದವರನ್ನು ಅವಮಾನಿಸಿದೆ. ಆದ್ದರಿಂದ ತಕ್ಷಣವೇ ತಹಶೀಲ್ದಾರ್ ಅವರನ್ನು ಬೇರೆಡೆಗೆ ವರ್ಗಾಯಿಸಬೇಕು ಎಂದು ಪಂಚಮಸಾಲಿ ಸಮಾಜದ ಅಧ್ಯಕ್ಷ ಎಸ್.ವಿ. ಪಾಟೀಲ ಸೇರಿದಂತೆ ಮತ್ತಿತರರು ಆಗ್ರಹಿಸಿದರು. ಪ್ರತಿಭಟನೆ ನಂತರ ಪಂಚಮಸಾಲಿ ಮುಖಂಡರೊಂದಿಗೆ ತಹಶೀಲ್ದಾರ್ ಭ್ರಮರಾಂಭ ಗುಬ್ಬಿಶೆಟ್ಟಿ, ಸಿಪಿಐ ಶ್ರೀನಿವಾಸ ಮೇಟಿ ಅವರು ತಹಶೀಲ್ದಾರ್ ಚೇಂಬರಿನಲ್ಲಿ ಪ್ರತ್ಯೇಕ ಸಭೆ ನಡೆಸಿದರು. ತಹಶೀಲ್ದಾರ್ ಭ್ರಮರಾಂಭ ಗುಬ್ಬಿಶೆಟ್ಟಿ ಮಾತನಾಡಿ, ಬೆಂಗಳೂರಿಗೆ ತೆರಳಿದ್ದರಿಂದ ಕಾರ್ಯಾಲಯಕ್ಕೆ ಬರಲು ತಡವಾಯಿತು. ಮುಂದಿನ ದಿನಗಳಲ್ಲಿ ಈ ತರಹ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ಮುಖಂಡರಲ್ಲಿ ಮನವಿ ಮಾಡಿಕೊಂಡರು.
ತಹಶೀಲ್ದಾರ್ ಮನವಿಗೆ ಸ್ಪಂದಿಸಿದೇ ಜನರು ತಹಶೀಲ್ದಾರ್ ವಿರುದ್ಧ ಘೋಷಣೆ ಕೂಗುತ್ತಾ ಹೊರ ನಡೆದರು. ಇದರಿಂದ ಒಂದು ಹಂತದಲ್ಲಿ ತಹಶೀಲ್ದಾರ್ ಭ್ರಮರಾಂಭ ಗುಬ್ಬಿಶೆಟ್ಟಿ ಭಾವುಕರಾಗಿ ಅಳತೊಡಗಿದರು. ಸಿಬ್ಬಂದಿಯು ತಹಶೀಲ್ದಾರರನ್ನು ಸಮಾಧಾನಗೊಳಿಸಿದರು. ಮುಖಂಡರಾದ ಮುದ್ಲಿಂಗಪ್ಪ ಕೊರ್ಲಹಳ್ಳಿ, ದೇವಪ್ಪ ಇಟಗಿ, ಮಂಜುನಾಥ ಮುಧೋಳ, ನಾಗರಾಜ ಮುರುಡಿ, ಬಸವರಾಜ ದೇಸಾಯಿ, ಶಿವಾನಂದ ನವಲಗುಂದ, ಅಶೋಕ ಹಂದ್ರಾಳ, ಶಿವಾನಂದ ಕಮತರ, ಸಿದ್ದು ದೇಸಾಯಿ, ಸುರೇಶ ಮಾಳೆಕೊಪ್ಪ, ವಿಜಯಲಕ್ಷ್ಮೀ ಪೊಲೀಸಪಾಟೀಲ, ಮಂಜುಳಾ ಇಟಗಿ, ಶೋಭಾ ಪಾಟೀಲ, ನೇತ್ರಾ ಭಾವಿಹಳ್ಳಿ, ರೇಣುಕಾ ಮುದ್ದಿ, ಶಾರದಾ ಲಿಂಗಶೆಟ್ಟರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.