ದಾವಣಗೆರೆ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ ರದ್ದುಪಡಿಸಬೇಕು ಎಂದು ಒತ್ತಾಯಿಸಿ ಸೋಮವಾರ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯೂನಿಸ್ಟ್) ಹಾಗೂ ವಿದ್ಯಾರ್ಥಿ ಕಾಂಗ್ರೆಸ್ ಕಾರ್ಯಕರ್ತರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.
ಮಹಾತ್ಮ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್) ಕಾರ್ಯಕರ್ತರು ಕೇಂದ್ರ ಸರ್ಕಾರ ಸಂವಿಧಾನ, ಜಾತ್ಯತೀತ, ಧರ್ಮ ವಿರೋಧಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರುವ ಮೂಲಕ ದೇಶವನ್ನು ಧರ್ಮದ ಆಧಾರದಲ್ಲಿ ವಿಭಜಿಸುವ ಪ್ರಯತ್ನ ನಡೆಸುತ್ತಿದೆ. ಪ್ರಜಾತಂತ್ರ ವ್ಯವಸ್ಥೆಗೆ ಧಕ್ಕೆ ತರುವ ಕಾಯ್ದೆಯನ್ನು ಕೂಡಲೇ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
1955ರಲ್ಲಿ ಜಾರಿಯಾದ ಪೌರತ್ವ ಕಾಯ್ದೆಯು 1950ಕ್ಕಿಂತಲೂ ಮೊದಲು ಭಾರತಕ್ಕೆ ಬಂದಿರುವವರು ಯಾರೇ ಆದರೂ ಅವರು ಭಾರತದ ಪ್ರಜೆ ಎಂದು ಘೋಷಿಸಿತ್ತು. ಪೌರತ್ವದ ವಿಷಯ ಕೆದಕಿದರೆ ರಾಜಕೀಯ ಲಾಭ ಆಗುತ್ತದೆ ಎಂದು ಲೆಕ್ಕಾಚಾರ ಹಾಕಿರುವ ಬಿಜೆಪಿ, ಈಗ ಪೌರತ್ವ ತಿದ್ದುಪಡಿ ಹಾಗೂ ಎನ್‌ಆರ್‌ಸಿಗೆ ಕೈ ಹಾಕಿದೆ. ರಾಜಕೀಯ ಲಾಭಕ್ಕಾಗಿ ದೇಶವನ್ನೇ ಇಬ್ಭಾಗ ಮಾಡಬಹುದಾದ ಸಿಎಎ ಮತ್ತು ಎನ್‌ಆರ್‌ಸಿಯನ್ನು ತಕ್ಷಣವೇ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಪೌರತ್ವ ತಿದ್ದುಪಡಿ ಕಾಯ್ದೆ 1985 ಅಸ್ಸಾಂ ಒಪ್ಪಂದವನ್ನು ಸಂಪೂರ್ಣವಾಗಿ ಉಲ್ಲಂಘಿಸುತ್ತಿದೆ. ಅಸ್ಸಾಂ ಒಳಗೊಂಡಂತೆ ಈಶಾನ್ಯ ಭಾಗದ ಸಪ್ತ ಸಹೋದರಿ ರಾಜ್ಯಗಳಲ್ಲಿ ಸಿಎಎಗೆ ಭಾರೀ ಪ್ರತಿರೋಧ ವ್ಯಕ್ತವಾಗುತ್ತಿದೆ. ಸಿಎಎ ವಿರುದ್ಧದ ಹೋರಾಟದಲ್ಲಿ ಅಮೂಲ್ಯ ಜೀವಹಾನಿ, ಸಾರ್ವಜನಿಕ ಆಸ್ತಿ ಹಾನಿಯಾಗಿವೆ. ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಕೋಟ್ಯಾಂತರ ಜನರ ಭಾವನೆಗೆ ಬೆಲೆ ನೀಡಬೇಕು ಎಂದು ಆಗ್ರಹಿಸಿದರು.
ದೇಶದಲ್ಲಿ ನಿರುದ್ಯೋಗ, ಬೆಲೆ ಏರಿಕೆ ಮುಂತಾದ ಹಲವಾರು ಸಮಸ್ಯೆ ಇವೆ. ಕೇಂದ್ರ ಸರ್ಕಾರ ಅಂತಹ ಸಮಸ್ಯೆ ಬಗೆಹರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು, ಜನರ ಗಮನ ಸೆಳೆಯಲು ಬರೀ ಭಾವನಾತ್ಮಕ ವಿಚಾರ ಆಧಾರಿತ ಕಾಯ್ದೆಗಳ ಜಾರಿಗೆ ಪೈಪೋಟಿ ನಡೆಸುತ್ತಿದೆ. ದೇಶದ ಸಮಗ್ರತೆ, ಐಕ್ಯತೆಗೆ ಧಕ್ಕೆ ಉಂಟು ಮಾಡುವಂತಹ ಕಾಯ್ದೆಗಳ ಬದಲಿಗೆ ಜನರ ನೈಜ ಸಮಸ್ಯೆ ದೂರ ಮಾಡುವ, ಉದ್ಯೋಗ, ನೆಮ್ಮದಿಯ ಜೀವನ ನಡೆಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
ಮಂಜುನಾಥ್ ಕೈದಾಳೆ, ಆರ್. ತಿಪ್ಪೇಸ್ವಾಮಿ, ಜ್ಯೋತಿ ಕುಕ್ಕುವಾಡ, ಭಾರತಿ, ಪರಶುರಾಮ್, ಸಂತೋಷ್, ರುದ್ರೇಶ್, ಮಂಜುನಾಥ್ ಕುಕ್ಕುವಾಡ, ನಾಗಸ್ಮಿತಾ ಇತರರು ಇದ್ದರು.