Advertisement

ರಸ್ತೆ ತಡೆದು ಪ್ರತಿಭಟನೆ: ಟೋಲ್‌ ಮುಕ್ತಿಗೆ ಮನವಿ

03:12 PM Feb 26, 2020 | Suhan S |

ಗದಗ: ತಾಲೂಕಿನ ಪಾಪನಾಶಿ ಬಳಿ ಟೋಲ್‌ಗೇಟ್‌ ಅಳವಡಿಸಿದ್ದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯ ಡೋಣಿ ಗ್ರಾಮಸ್ಥರು ಸೋಮವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

Advertisement

ಬೆಳಗ್ಗೆ 11ರ ಸುಮಾರಿಗೆ ಏಕಾಏಕಿ ರಸ್ತೆಗಿಳಿದ ಪ್ರತಿಭಟನಾಕಾರರು, ಸರಕಾರದ ವಿರುದ್ಧ  ಧಿಕ್ಕಾರ ಕೂಗಿದರು. ಟೋಲ್‌ ನಿರ್ಮಾಣದಿಂದ ಬಸ್‌ ಪ್ರಯಾಣ ದರ ದುಪ್ಪಟ್ಟಾಗಿದೆ. ಟಂಟಂ ಹೊರತಾಗಿ ಎಲ್ಲ ಗೂಡ್ಸ್‌ ವಾಹನಗಳಿಗೆ ಟೋಲ್‌ ವಿಧಿಸಲಾಗುತ್ತಿದೆ. ಇದರಿಂದ ಈ ಭಾಗದ ಸಾರ್ವಜನಿಕರಿಗೆ ಹೊರೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಗ್ರಾಮಸ್ಥರಿಗೆಟೋಲ್‌ನಿಂದ ಮುಕ್ತಗೊಳಿಸಬೇಕು. ಇಲ್ಲವೇ ಟೋಲ್‌ ಗೇಟ್‌ ತೆರವುಗೊಳಿಸಬೇಕು ಎಂದು ಪಟ್ಟು ಹಿಡಿದರು.

ಸುಮಾರು 15 ನಿಮಿಷಗಳ ಕಾಲ ನಡೆದ ಪ್ರತಿಭಟನೆಯಿಂದಾಗಿ ಹತ್ತಾರು ವಾಹನಗಳು ಸಾಲುಗಟ್ಟಿದ್ದವು. ಈ ಕುರಿತು ಸುದ್ದಿತಿಳಿಯುತ್ತಿದ್ದಂತೆ ಗದಗ ಗ್ರಾಮೀಣ ಸಿಪಿಐ ರವಿಕುಮಾರ ಕಪ್ಪತ್ತನವರ ನೇತೃತ್ವದ ಸಿಬ್ಬಂದಿ, ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಈ ವೇಳೆ ಪ್ರತಿಭಟನಾಕರರು ಮತ್ತು ಪೊಲೀಸರ ಮಧ್ಯೆ ವಾಗ್ವಾದ ನಡೆಯಿತು.

ಟೋಲ್‌ ಅಳವಡಿಕೆಯಿಂದ ಗದಗನಿಂದ ಮುಂಡರಗಿ ಮಾರ್ಗವಾಗಿ ಸಾಗುವ ಸಾರಿಗೆ ಬಸ್‌ ಪ್ರಯಾಣಿಕರಿಗೆ ತಲಾ 7 ರೂ. ಹೆಚ್ಚುವರಿಯಾಗಿ ಟಿಕೆಟ್‌ ನೀಡಲಾಗುತ್ತಿದೆ ಎಂದು ದೂರಿದರು. ಪ್ರತಿಭಟನಾನಿರತರ ಸಮಸ್ಯೆ ಆಲಿಸಿದ ಪೊಲೀಸ್‌ ಅಧಿಕಾರಿಗಳು, ಈ ಕುರಿತು ಏನೇ ತಕರಾರು ಇದ್ದರೂ ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕು. ಯಾವುದೇ ಮುನ್ಸೂಚನೆ ನೀಡದೇ ರಸ್ತೆ ತಡೆ ನಡೆಸುವುದರಿಂದ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ. ಈ ಕೂಡಲೇ ಪ್ರತಿಭಟನೆ ಹಿಂಪಡೆಯದಿದ್ದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸುವ ಮೂಲಕ ಪ್ರತಿಭಟನೆ ಶಮನಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next