Advertisement

ನಾಳೆ ಬಿಜೆಪಿಯಿಂದ ಪ್ರತಿಭಟನೆ

11:19 PM May 04, 2019 | Team Udayavani |

ಬೆಂಗಳೂರು: ರಾಜ್ಯದಲ್ಲಿ ಮೈತ್ರಿ ಸರ್ಕಾರವು ವಿರೋಧಿಗಳನ್ನು ಹತ್ತಿಕ್ಕುತ್ತಿದ್ದು, ಗೃಹ ಸಚಿವರು ದ್ವೇಷದ ರಾಜಕಾರಣ ನಡೆಸಿದ್ದಾರೆಂದು ಆರೋಪಿಸಿ ಬಿಜೆಪಿ ಮೇ 6ರಂದು ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲು ಸಜ್ಜಾಗಿದೆ.

Advertisement

ರಾಜ್ಯದಲ್ಲಿ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಸರ್ಕಾರ ಜನಹಿತಕ್ಕಾಗಿ ಆಡಳಿತ ನಡೆಸುವ ನಿರೀಕ್ಷೆ ಹುಸಿಯಾಗಿದೆ. ಮೈತ್ರಿ ಪಕ್ಷಗಳಲ್ಲಿ ಆಂತರಿಕ ಕಚ್ಚಾಟ ಮೇರೆ ಮೀರಿದೆ. ಸಚಿವರು ಅಧಿಕಾರ ದುರುಪಯೋಗಪಡಿಸಿಕೊಂಡು ಪ್ರತಿಪಕ್ಷಗಳನ್ನು ಹತ್ತಿಕ್ಕುವ ದ್ವೇಷದ ರಾಜಕಾರಣದಲ್ಲಿ ನಿರತರಾಗಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆಯಾಗುವ ಸುಳಿವು ದೊರೆತ ಬಳಿಕ ಸಮ್ಮಿಶ್ರ ಸರ್ಕಾರದಲ್ಲಿ ದ್ವೇಷದ ರಾಜಕಾರಣ ಹೆಚ್ಚಾಗಿದೆ. ರಾಜಕೀಯ ವಿರೋಧಿಗಳು, ಮಾಧ್ಯಮದ ವಿರುದ್ಧವೂ ಸರ್ಕಾರ ಪ್ರತೀಕಾರ ಮನೋಭಾವ ತೋರುತ್ತಿರುವುದು ಸಾಬೀತಾಗಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೆಲ ಕಾಂಗ್ರೆಸ್‌ ಹಾಗೂ ಬಿಜೆಪಿ ಕಾರ್ಯಕರ್ತರ ವಿರುದ್ಧ ಐಪಿಸಿ ಸೆಕ್ಷನ್‌ 307ರ ಅಡಿ ಪ್ರಕರಣ ದಾಖಲಾಗಿದ್ದರೂ ಕೇವಲ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗುತ್ತಿದೆ. ಪ್ರಧಾನಿಯವರನ್ನು ಹತ್ಯೆ ಮಾಡುವಂತೆ ಪ್ರಚೋದನಾತ್ಮಕ ಹೇಳಿಕೆ ನೀಡಿದವರನ್ನು ಬಂಧಿಸದ ಸರ್ಕಾರ,

ಕೇವಲ ಸರ್ಕಾರದ ವಿರುದ್ಧದ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಕಾರಣಕ್ಕೆ ಬಿಜೆಪಿ ಪರ ಒಲವು ಉಳ್ಳವರನ್ನು ಬಂಧಿಸಿದ್ದು ಖಂಡನೀಯ ಎಂದು ಕಿಡಿ ಕಾರಿದ್ದಾರೆ. ಧರ್ಮ ವಿಭಜನೆಗೆ ಯತ್ನಿಸಿದ ಸಚಿವ ಎಂ.ಬಿ.ಪಾಟೀಲ್‌ ಅವರು ದ್ವೇಷ ರಾಜಕಾರಣದ ಮುಂಚೂಣಿಯಲ್ಲಿರುವುದು ಖಂಡನೀಯ.

Advertisement

ಪ್ರತಿಪಕ್ಷಗಳನ್ನು ಹತ್ತಿಕ್ಕಿ, ಮಾಧ್ಯಮಗಳನ್ನು ಬೆದರಿಸಲು ಹೊರಟಿರುವ ರಾಜ್ಯ ಸರ್ಕಾರ ಹಾಗೂ ಗೃಹ ಸಚಿವರ ದ್ವೇಷದ ರಾಜಕಾರಣದ ವಿರುದ್ಧ ಸೋಮವಾರ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲಾಗುವುದು. ಬಳಿಕ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next