Advertisement

ಬಿಜೆಪಿ ಕಾರ್ಯಕರ್ತ ಸಂತೋಷ್‌ ಹತ್ಯೆ ಖಂಡಿಸಿ ಪ್ರತಿಭಟನೆ 

01:54 PM Feb 03, 2018 | |

ಮಹಾನಗರ: ಬಿಜೆಪಿ ಕಾರ್ಯಕರ್ತ ಬೆಂಗಳೂರಿನ ಸಂತೋಷ್‌ ಹತ್ಯೆ ಖಂಡಿಸಿ ಹಾಗೂ ಪ್ರಕರಣದ ಎಲ್ಲ ಆರೋಪಿಗಳನ್ನು ಬಂಧಿಸಿ, ಅವರ ವಿರುದ್ಧ ಕಠಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಮಂಗಳೂರಿನ ದ.ಕ. ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು.

Advertisement

ಹಾಸ್ಯಾಸ್ಪದ ಹೇಳಿಕೆ
ವಿಧಾನಪರಿಷತ್‌ ಮಾಜಿ ಸದಸ್ಯ ಕೆ. ಮೋನಪ್ಪ ಭಂಡಾರಿ ಮಾತನಾಡಿ, ಸಂತೋಷ್‌ ಮತ್ತು ಕೊಲೆ ನಡೆಸಿದ ಆರೋಪಿಗಳ ನಡುವೆ ಯಾವುದೇ ಗಲಾಟೆ ಆಗಿಲ್ಲ, ದ್ವೇಷ ಇರಲಿಲ್ಲ. ಗಾಂಜಾ ಸೇವನೆ ಮಾಡಬೇಡಿ ಎಂದು ಬುದ್ಧಿವಾದ ಹೇಳಿದ ಕಾರಣಕ್ಕೆ ಕಾಂಗ್ರೆಸ್‌ನ ಸ್ಥಳೀಯ ಬ್ಲಾಕ್‌ ಅಧ್ಯಕ್ಷರ ಪುತ್ರ ತನ್ನ ಸಹಚರರ ಜತೆ ಸೇರಿ ಈ ಕೊಲೆ ನಡೆಸಿರುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಆದರೆ, ರಾಜ್ಯದ ಗೃಹ ಸಚಿವ ರಾಮ ಲಿಂಗಾರೆಡ್ಡಿ ಅವರು ಆರೋಪಿಗಳಿಗೆ ಕೊಲ್ಲುವ ಉದ್ದೇಶ ಇರಲಿಲ್ಲ ಎಂದು ಆರೋಪಿಗಳನ್ನು ಸಮರ್ಥಿಸಿ ಹಾಸ್ಯಾಸ್ಪದ ಹೇಳಿಕೆ ನೀಡುತ್ತಿರುವುದು ಖಂಡನೀಯ ಎಂದರು.

ಆರೋಪಿಗಳ ಸಮರ್ಥನೆ ಸಲ್ಲ
ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯ ಕಾರ್ಯದರ್ಶಿ ರವಿಚಂದ್ರ ಮಾತನಾಡಿ, ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದ ಬಳಿಕ 23 ಮಂದಿ ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆ ನಡೆದಿದೆ. ಈ ಎಲ್ಲ ಹತ್ಯೆ ಆರೋಪಿಗಳನ್ನು ರಾಜ್ಯ ಸರಕಾರ ಬಚಾವ್‌ ಮಾಡುತ್ತಿರುವಂತೆ ಭಾಸವಾಗುತ್ತಿದೆ ಎಂದು ಆಪಾದಿಸಿದರು.

ಸಂತೋಷ್‌ ಅವರು ಪ್ರಧಾನಿ ಮೋದಿ ಅವರ ಕಾರ್ಯಕ್ರಮಕ್ಕೆ ಬ್ಯಾನರ್‌ ಕಟ್ಟುತ್ತಿದ್ದರು. ಈ ಸಂದರ್ಭ ಕೊಲೆ ನಡೆದಿದೆ. ಆರೋಪಿಗಳನ್ನು ಸಮರ್ಥಿಸುವ ಮೂಲಕ ಗೃಹಸಚಿವರು ಪೊಲೀಸರ ಕೈ ಕಟ್ಟಿಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ
ಸಂತೋಷ್‌ ಸಹಿತ ರಾಜ್ಯದಲ್ಲಿ ನಡೆದ 23 ಮಂದಿ ಹಿಂದೂ ಕಾರ್ಯಕರ್ತರ ಕೊಲೆ ಪ್ರಕರಣದ ತನಿಖೆಯನ್ನು ಎನ್‌ಐಎಗೆ
ವಹಿಸಿಕೊಡಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರಕಾರ ಬೆಂಗಾವಲು
ಬಿಜೆಪಿ ಮಂಗಳೂರು ದಕ್ಷಿಣ ಮಂಡಲ ಅಧ್ಯಕ್ಷ ವೇದವ್ಯಾಸ ಕಾಮತ್‌ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆಗೆ ರಾಜ್ಯ ಸರಕಾರ ಬೆಂಗಾವಲಾಗಿದೆ. ಹತ್ಯೆ ನಡೆದ ಸಂತೋಷ್‌ ಮನೆಯಲ್ಲಿ ಸೂತಕವಿದ್ದರೆ, ಅದೇ ವೇಳೆ ಮುಖ್ಯ ಮಂತ್ರಿಯವರು ಪಕ್ಕದ ಮನೆಯಲ್ಲಿ ಬಿರಿಯಾನಿ ಊಟ ಮಾಡುತ್ತಿದ್ದಾರೆ ಎಂದು ದೂರಿದರು.

Advertisement

ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ್‌, ಮನಪಾ ಸದಸ್ಯರಾದ ರೂಪಾ ಡಿ. ಬಂಗೇರ, ಪೂರ್ಣಿಮಾ, ಮೀರಾ ಕರ್ಕೇರ, ಜಯಂತಿ ಆಚಾರ್‌, ಮುಖಂಡರಾದ ನಿತಿನ್‌ ಕುಮಾರ್‌, ಭಾಸ್ಕರಚಂದ್ರ ಶೆಟ್ಟಿ, ಸಂಧ್ಯಾ ವೆಂಕಟೇಶ್‌, ಸಂಜಯ ಪ್ರಭು, ಸಂದೀಪ್‌ ಶೆಟ್ಟಿ, ನಂದನ್‌ ಮಲ್ಯ ಮೊದಲಾದವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next