ಬೆಳ್ಮಣ್: ಕಾರ್ಕಳ ಪಡು ಬಿದ್ರಿ ರಾಜ್ಯ ಹೆದ್ದಾರಿ 1ರಲ್ಲಿ ಬೆಳ್ಮಣ್ ಪೇಟೆಯಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಟೋಲ್ ನಿರ್ಮಾಣಕ್ಕೆ ಸೋಮವಾರ ಗುಟ್ಟಾಗಿ ಸರ್ವೆ ನಡೆದಿದ್ದು, ಎಚ್ಚೆತ್ತ ಸಾರ್ವಜನಿಕರು ಸರ್ವೇ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇಲ್ಲಿ ಟೋಲ್ ನಿರ್ಮಿಸಲು ಗುತ್ತಿಗೆ ಪಡೆದುಕೊಂಡಿದ್ದ ಮೈಸೂರಿನ ಮಿತ್ರಾ ಇನ್ಫೋ ಸೊಲ್ಯೂಷನ್ ಸಂಸ್ಥೆ ಪ್ರಾಯಶಃ ಹಿಂದೆ ಸರಿದಿದೆ ಎನ್ನಲಾಗಿದ್ದು, ಈಗ ಕುಂದಾಪುರ ಮೂಲದ ಇನ್ನೊಂದು ಖಾಸಗಿ ಏಜನ್ಸಿ ಸೋಮವಾರ ಸರ್ವೆಗೆ ಇಳಿದಿದೆ. ಬೆಳ್ಮಣ್ ಗ್ರಾ. ಪಂ. ಮುಂಭಾಗದಲ್ಲಿರುವ ತಂಗು ದಾಣದಲ್ಲಿ ಇಬ್ಬರು ಯುವಕರು ಸೋಮವಾರ ಬೆಳಗಿನಿಂದ ಸಂಚರಿಸುವ ವಾಹನಗಳ ಲೆಕ್ಕ ದಾಖಲಿಸು ತ್ತಿರುವುದನ್ನು ಗಮನಿಸಿದ ಬೆಳ್ಮಣ್ ಭಾಗದ ಗ್ರಾಮಸ್ಥರು ಅವರನ್ನು ತರಾಟೆಗೆ ತೆಗೆದುಕೊಂಡರು. ಸರ್ವೆ ನಡೆಸುತ್ತಿರುವುದು ಟೋಲ್ ಗೇಟ್ ನಿರ್ಮಾಣಕ್ಕೆ ಎನ್ನುವುದು ಸ್ಪಷ್ಟವಾಗಿ ಪ್ರತಿರೋಧ ಪ್ರಾರಂಭ ವಾಯಿತು.
ಅಥರ್ವ ಎಂಬ ಏಜೆನ್ಸಿಯ ಅಧಿಕಾರಿ ನಮಗೆ ಯಾವುದಕ್ಕೆ ಸರ್ವೆ ಎನ್ನುವುದು ಗೊತ್ತಿಲ್ಲ, ಸಂಸ್ಥೆ ನೀಡಿದ ಕೆಲಸ ಮಾಡುತ್ತಿದ್ದೇವೆ ಎಂದು ಉತ್ತರಿಸಿದ್ದು, ಇದನ್ನು ಗ್ರಾಮಸ್ಥರು ತೀವ್ರವಾಗಿ ಪ್ರತಿರೋಧಿಸಿದರು. ಇದರಿಂದಾಗಿ ಸರ್ವೇ ಮೊಟಕುಗೊಂಡಿದೆ.
ಬೆಳ್ಮಣ್‌ನಲ್ಲಿ ಟೋಲ್ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ. ಯಾವುದೇ ಗುತ್ತಿಗೆದಾರ, ಖಾಸಗಿ ಸಂಸ್ಥೆ ಅಥವಾ ಏಜೆನ್ಸಿ ಬಂದು ಸರ್ವೆ ನಡೆಸುವುದಕ್ಕೂ ಆಸ್ಪದ ನೀಡುವುದಿಲ್ಲ. ಟೋಲ್ ನಿರ್ಮಾಣದ ವಿರುದ್ಧ ಯಾವುದೇ ರೀತಿಯ ಹೋರಾಟಕ್ಕೂ ಸದಾ ಸಿದ್ಧ.
– ನಂದಳಿಕೆ ಸುಹಾಸ್ ಹೆಗ್ಡೆ , ಹೋರಾಟ ಸಮಿತಿಯ ಸಂಚಾಲಕರು