ಬೆಳ್ತಂಗಡಿ: ಬಳೆಂಜ ಗ್ರಾಮದ ಗ್ರಾಮಕರಣಿಕರಾದ ಮೇಘನಾ ಅವರ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಒಡ್ಡಿರುವ ಘಟನೆಯನ್ನು ಖಂಡಿಸಿ ಬುಧವಾರ ತಾಲೂಕು ಕಚೇರಿ ಸಿಬಂದಿ ಮತ್ತು ಗ್ರಾಮ ಕರಣಿಕರ ಸಂಘದ ವತಿಯಿಂದ ಪ್ರತಿಭಟನೆ ಜರಗಿತು. ಗ್ರಾಮ ಕರಣಿಕರ ಕಚೇರಿಗೆ ಬಂದ ಅಶೋಕ್ ಆಚಾರ್ಯ ಅವರು ಯಾವುದೋ ಕಡತದ ಮಾಹಿತಿಯನ್ನು ಪಡೆಯುತ್ತಿದ್ದಾಗ ಏಕಾಏಕಿ ಕೋಪಗೊಂಡು ಗ್ರಾಮಕರಣಿಕರಾದ ಮೇಘನಾ ಅವರ ಮೇಲೆ ಹಲ್ಲೆ ಮಾಡಿ ಜೀವಬೆದರಿಕೆ ಒಡ್ಡಿದ್ದಾರೆ. ಮೇಘನಾ ಉಜಿರೆ ಎಸ್‌ಡಿಎಂ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿದ್ದಾರೆ. ಸಾರ್ವಜನಿಕರ ಎದುರುಗಡೆಯೇ ಸರಕಾರಿ ನೌಕರರೋರ್ವರ ಮೇಲೆ ಹಲ್ಲೆ ನಡೆಸಲಾಗಿದೆ. ಆರೋಪಿಯು ಈ ಹಿಂದೆ ಹಲವಾರು ಸಮಯಗಳಿಂದ ಗ್ರಾಮಕರಣಿಕರ ಕಚೆೇರಿಯಲ್ಲಿ ಮತ್ತು ತಾಲೂಕು ಕಚೇರಿಗಳಲ್ಲಿ ವಿನಾಕಾರಣ ಕಿರುಕುಳ ನೀಡಿ ಮಾನಸಿಕ ಹಿಂಸೆ ನೀಡಿದ್ದರು ಎಂದು ಪ್ರತಿಭಟನಕಾರರು ಆಪಾದಿಸಿದರು.
ಕಠಿನ ಶಿಕ್ಷೆಗೆ ಆಗ್ರಹ
ಗ್ರಾಮ ಕರಣಿಕರ ಸಂಘದ ಜಿಲ್ಲಾಧ್ಯಕ್ಷ ಜನಾರ್ದನ್ ಮಾತನಾಡಿ, ಗ್ರಾಮ ಕರಣಿಕರ ಮೇಲಿನ ಹಲ್ಲೆ, ಬೆದರಿಕೆ ಘಟನೆಗಳು ಜಿಲ್ಲಾದ್ಯಂತ ಹೆಚ್ಚಾಗುತ್ತಿದ್ದು ಈ ನಿಟ್ಟಿನಲ್ಲಿ ಸಂಘಟಿತ ಹೋರಾಟ ಮಾಡುತ್ತಿದ್ದೇವೆ. ಈ ಪ್ರಕರಣದಲ್ಲಿ ಆರೋಪಿಗೆ ಕಠಿನ ಶಿಕ್ಷೆ ಆಗಿ ಎಲ್ಲರೂ ನೆಮ್ಮದಿಯಿಂದ ಕಾರ್ಯನಿರ್ವಹಿಸುವಂತಾಗಬೇಕು ಎಂದರು.
ಮನವಿ ಸ್ವೀಕರಿಸಿದ ತಹಶೀಲ್ದಾರ್ ತಿಪ್ಪೇಸ್ವಾಮಿ, ಈ ಬಗ್ಗೆ ಅಶೋಕ್ ಆಚಾರ್ಯ ಅವರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗಿದೆ. ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾಹಿತಿ ಹಕ್ಕಿನ ಹೆಸರಿನಲ್ಲಿ ಸರಕಾರಿ ನೌಕರರು ಹಾಗೂ ಅಧಿಕಾರಿಗಳಿಗೆ ಬೆದರಿಸುವ ಕೆಲಸ ನಡೆಯಬಾರದು. ಮಾಹಿತಿ ಪಡೆದು ಸಾರ್ವಜನಿಕರಿಗೆ ಉಪಯೋಗವಾಗುವಂತಹ ಕೆಲಸ ನಡೆಯಬೇಕು ಎಂದರು. ಮನವಿ ನೀಡುವ ಸಂದರ್ಭ ಗ್ರಾಮಕರಣಿಕರ ಸಂಘದ ತಾಲೂಕು ಅಧ್ಯಕ್ಷ ಪ್ರದೀಪ್ ಕುಮಾರ್ ಪಿ., ಕಾರ್ಯದರ್ಶಿ ಮಂಜುನಾಥ್ ಬಾರಿ, ಉಪಾಧ್ಯಕ್ಷ ವಿಜಯ್ ಆರ್., ಕೋಶಾಧಿಕಾರಿ ಹರೀಶ್ ಕೆ. ಎನ್. ಮೊದಲಾದವರಿದ್ದರು.
ಖಂಡನೆ
ಕರ್ತವ್ಯದಲ್ಲಿದ್ದ ಬಳೆಂಜ ಗ್ರಾಮಕರಣಿಕರಾದ ಮೇಘನಾ ಅವರ ಮೇಲೆ ಹಲ್ಲೆ ಮಾಡಿದ ಕೃತ್ಯವನ್ನು ದಸಂಸ ಅಂಬೇಡ್ಕರ್ ವಾದದ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಚಂದು ಎಲ್., ತಾಲೂಕು ಮುಖಂಡರಾದ ಬಿ.ಕೆ. ವಸಂತ್, ವೆಂಕಣ್ಣ ಕೊಯ್ಯೂರು, ಸೇಸಪ್ಪ ಅಳದಂಗಡಿ ಮುಂತಾದವರು ಖಂಡಿಸಿದ್ದಾರೆ.