ವಿಜಯಪುರ: ರಾಜ್ಯದಲ್ಲಿ ಎಪಿಎಂಸಿ ಕಾಯ್ದೆಗೆ ತಿದ್ದಪಡಿ ಮಾಡಿ ಸರ್ಕಾರ ಮೇ 16 ರಂದು ಹೊರಡಿಸಿರುವ ತಿದ್ದುಪಡಿ ವಿರೋಧಿಸಿ ನಗರದಲ್ಲಿ ಜೂನ್ 1 ರಂದು ವಿವಿಧ ಸಂಘಟನೆ ನೇತೃತ್ವದಲ್ಲಿ ವ್ಯಾಪಾರ ವಹಿವಾಟು ಬಂದ್ ಮಾಡಿ ಹೋರಾಟಕ್ಕೆ ಕರೆ ನೀಡಲಾಗಿದೆ.
ಮರ್ಚಂಟ್ ಅಸೋಶಿಯೇಶನ್ ಹಾಗೂ ಪ್ರಾಂತ ರೈತ ಸಂಘದ ಪ್ರಮುಖರ ಜಂಟಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯ ಸರಕಾರ ಜಾರಿಗೆ ತಂದಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆ ಬಹು ರಾಷ್ಟ್ರೀಯ ಕಂಪನಿಗಳಿಗೆ ಮಣೆ ಹಾಕುವ ಹುನ್ನಾರ ಹೊಂದಿದೆ. ಇದರಿಂದ ರೈತರು ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವ್ಯಾಪಾರಸ್ಥರಿಗೆ, ಕೃಷಿ ಉತ್ಪನ್ನ ಮಾರುಕಟ್ಟೆಯನ್ನೇ ಅವಲಂಬಿತ ಗುಮಾಸ್ತರ, ಹಮಾಲರ ಮತ್ತು ಲಾರಿ ಹಮಾಲರ, ಕೂಲಿಕಾರರ ಉದ್ಯೋಗಕ್ಕೆ ಸಂಚಕಾರ ತಂದಿದೆ ಎಂದು ಸಭೆಯಲ್ಲಿ ಸರ್ಕಾರದ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಲಾಯಿತು.
ರೈತರು, ವರ್ತಕರು, ಕಾರ್ಮಿಕರಿಗೆ ಮಾರಕವಾಗಿರುವ ಎಪಿಎಂಸಿ ಕಾಯ್ದೆ ತಿದ್ದುಪಡಿ ಆದೇಶವನ್ನು ಸರ್ಕಾರ ತಕ್ಷಣ ಹಿಂದಕ್ಕೆ ಪಡೆಯಬೇಕು. ಸರ್ಕಾರದ ಈ ನಿರ್ಧಾರ ವಿರೋಧಿಸಿ ಜೂನ್ 1 ರಂದು ಹಮ್ಮಿಕೊಂಡಿರುವ ಹೋರಾಟದ ಸಂದರ್ಭದಲ್ಲಿ ನಗರದಲ್ಲಿರುವ ಎಪಿಎಂಸಿ ಕಚೇರಿ ಎದುರು ಎಪಿಎಂಸಿ ತಿದ್ದಪಡಿ ಕಾಯ್ದೆಯ ಪ್ರತಿಯನ್ನು ಸುಟ್ಟು ಹಾಕಲು ಕೂಡ ನಿರ್ಧರಿಸಲಾಗಿದೆ.
ಮರ್ಚಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ರವೀಂದ್ರ ಬಿಜ್ಜರಗಿ, ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಭೀಮಸಿ ಕಲಾದಗಿ ಮಾತನಾಡಿ, ಸದರಿ ಎಪಿಎಂಸಿ ತಿದ್ದುಪಡಿ ಕಾಯಿದೆಯನ್ನು ಹಿಂಪಡೆಯದಿದ್ದಲ್ಲಿ ಜೂನ 10 ರಂದು ಬೆಂಗಳೂರಲ್ಲಿ ರಾಜ್ಯ ಮಟ್ಟದಲ್ಲಿ ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಸರ್ಕಾರ ಇದಕ್ಕೂ ಮಣಿಯದಿದ್ದಲ್ಲಿ ಅನಿರ್ದಿಷ್ಠಾವಧಿ ಕಾಲ ವ್ಯಾಪಾರ ವಹಿವಾಟವು ಬಂದ್ ಮಾಡುವುದಾಗಿ ಎಚ್ಚರಿಸಿದರು.
ಮರ್ಚಂಟ್ಸ್ ಅಸೋಸಿಯೇಶನ್‌ನ ನಿಲೇಶ ಶಹಾ, ಪ್ರವೀಣ ವಾರದ, ಮನೋಜ ಬಗಲಿ, ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅರವಿಂದ ಕುಲಕರ್ಣಿ, ರಾಮಣ್ಣ ಸಿರಗೋಳ, ಖಾಜೇಸಾಬ ಕೊಲ್ಹಾರ ಇದ್ದರು.