ಮೈಸೂರು: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಕಾಯಿದೆಗಳು ಹಾಗೂ ದೇಶದ ಜನರ ಐಕ್ಯತೆಗೆ ಧಕ್ಕೆ ತರುತ್ತಿರುವ ಎನ್‌ಆರ್‌ಸಿ, ಸಿಎಎ, ಎನ್‌ಪಿಆರ್ ಹಿಂಪಡೆಯಬೇಕು ಎಂದು ಒತ್ತಾಯಿಸಿ ಎಐಟಿಯುಸಿ ವತಿಯಿಂದ ಪ್ರತಿಭಟಿಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಬುಧವಾರ ಸಮಾವೇಶಗೊಂಡ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ಜನವಿರೋಧಿ, ಕಾರ್ಮಿಕ ವಿರೋಧಿ ಬಜೆಟ್ ಮಂಡಿಸಿದ್ದು, ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ತಂದು ಲೇಬರ್ ಕೋಡ್‌ಗಳನ್ನು ಬದಲಾಯಿಸುತ್ತಿದೆ.
ಅಲ್ಲದೆ ಸೌಹಾರ್ದತೆ ಹಾಗೂ ದುಡಿಯುವ ಜನರ ಐಕ್ಯತೆಗೆ ಧಕ್ಕೆ ತರುವ ಎನ್‌ಆರ್‌ಸಿ, ಸಿಎಎ, ಎನ್‌ಪಿಆರ್ ಕಾಯ್ದೆ ಜಾರಿಗೊಳಿಸಿ ದೇಶದ ಸಮಗ್ರತೆಗೆ ಧಕ್ಕೆ ಉಂಟು ಮಾಡುತ್ತಿದೆ ಎಂದು ಕಿಡಿಕಾರಿದರು. ಬೆಲೆ ಏರಿಕೆ, ನಿರುದ್ಯೋಗ, ಕೈಗಾರಿಕೆಗಳ ಮುಚ್ಚುವಿಕೆ, ಖಾಯಂ ಹುದ್ದೆಗಳ ಗುತ್ತಿಗೀಕರಣ, ಪುಡಿಗಾಸಿನ ವೇತನದಿಂದ ಕುಸಿಯುತ್ತಿರುವ ಆದಾಯ, ಕೈಗೆಟುಕದಿರುವ ದುಬಾರಿ ಶಿಕ್ಷಣ,
ಆರೋಗ್ಯ ಸೇವೆಗಳು, ರೈತರ ಕೃಷಿ ಉತ್ಪನ್ನಗಳ ಬೆಂಬಲ ಬೆಲೆ ಕುಸಿತ, ಸಬ್ಸಿಡಿಗಳ ಕಡಿತ ಇತ್ಯಾದಿ ಸಮಸ್ಯೆಗಳಿಗೆ ಕೇಂದ್ರ ಪರಿಹಾರ ನೀಡುತ್ತಿಲ್ಲ. ದಿವಾಳಿಯಾಗುತ್ತಿರುವ ಸಾರ್ವಜನಿಕ ಬ್ಯಾಂಕ್‌ಗಳ ವಿಲಿನೀಕರಣದ ಮೂಲಕ ಕಾರ್ಪೊರೇಟ್ ಮಾಲೀಕರಿಗೆ ಇನ್ನಷ್ಟು ಮಣೆ ಹಾಕಲು ಮುಂದಾಗಿದೆ. ಈ ಬಜೆಟ್ ಜನರ ಆಶೋತ್ತರಗಳಿಗೆ ಸ್ಪಂದಿಸುವ ಬದಲು ಮಾಲೀಕರಿಗೆ ಮಾತ್ರ ಒಳಿತನ್ನು ಮಾಡಲು ಹೊರಟಿದೆ.
ಇಂತಹ ಜನವಿರೋಧಿ-ಕಾರ್ಮಿಕ ವಿರೋಧಿ ಕೇಂದ್ರದ ಬಜೆಟನ್ನು ದುಡಿಯುವ ಜನರು ತಿರಸ್ಕರಿಸಬೇಕು. ಕೂಡಲೇ ಕಾರ್ಮಿಕರಿಗೆ ಹಾಗೂ ದೇಶದ ಜನರಿಗೆ ವಿರುದ್ಧವಾಗಿರುವ ಕಾಯಿದೆಗಳನ್ನು ಹಿಂಪಡೆಯಬೇಕು. ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ ಮೇಟಿ ಇತರರಿದ್ದರು.