ಮಂಡ್ಯ: ಕೇಂದ್ರ ಸರ್ಕಾರದ 2013ರ ಭೂ ಸ್ವಾಧೀನ ಕಾಯ್ದೆಗೆ ರಾಜ್ಯ ಸರ್ಕಾರ ತಂದಿರುವ ತಿದ್ದುಪಡಿ ಮಸೂದೆಯನ್ನು ವಾಪಾಸ್ ಪಡೆಯುವಂತೆ ಆಗ್ರಹಿಸಿ ನಗರದಲ್ಲಿ ಶನಿವಾರ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಜಮಾಯಿಸಿದ ಕಾರ್ಯಕರ್ತರು, ಕೆಲವೊತ್ತು ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಫಲವತ್ತಾದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದರ ವಿರುದ್ಧ ದೇಶಾದ್ಯಂತ ರೈತರು ಮತ್ತು ಜನಪರ ಸಂಘಟನೆಗಳು ಹೋರಾಟ ಮಾಡಿದ ಹಿನ್ನೆಲೆ 1894ರ ಭೂ ಸ್ವಾಧೀನ ಕಾಯ್ದೆಯನ್ನು ರದ್ದುಪಡಿಸಿ 2013ರಲ್ಲಿ ಹೊಸ ಕಾಯ್ದೆ ರೂಪಿಸಲಾಯಿತು. ಇದರಲ್ಲಿ ಒಂದಷ್ಟು ಸಮಾಧಾನಕರವಾದ ಅಂಶ ಒಳಗೊಂಡಿತ್ತು.
ಆದರೆ, ಈ ಅಧಿನಿಯಮದ ಮೂಲ ಉದ್ದೇಶಕ್ಕೆ ವಿರುದ್ಧವಾಗಿ ಕೆಲ ತಿದ್ದುಪಡಿ ತರಲು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮುಂದಾದಾಗ ಅದರ ವಿರುದ್ಧವೂ ವಿರೋಧ ವ್ಯಕ್ತವಾಗಿತ್ತು. ಜತೆಗೆ ಎರಡು ಬಾರಿ ಮೇಲ್ಮನೆಯಲ್ಲಿ ಬಿಲ್ ಮಂಡನೆಯಾಗದ ಹಿನ್ನೆಲೆ ತಿದ್ದುಪಡಿ ಸಾಧ್ಯವಾಗಲಿಲ್ಲ ಎಂದು ಪ್ರತಿಭಟನಾಕಾರರು ವಿವರಿಸಿದರು.
ಆದರೆ, ಆಯಾ ರಾಜ್ಯ ಸರ್ಕಾರ ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಿದ ಹಿನ್ನೆಲೆ ಕರ್ನಾಟಕ 2013ರ ಕಾಯ್ದೆಗೆ ಇತ್ತೀಚಿಗೆ ನಡೆದ ವಿಧಾನಸಭಾ ಅಧಿವೇಶದನದಲ್ಲಿ ತಿದ್ದುಪಡಿ ಬಿಲ್ ಮಂಡಿಸಿ ಚರ್ಚೆ ಇಲ್ಲದೇ ಅಂಗೀಕಾರ ಪಡೆದು, ರಾಜ್ಯಪಾಲರ ಸಹಿಗೆ ಕಳುಹಿಸಿದೆ. ಈ ತಿದ್ದುಪಡಿ ಬಿಲ್ 2013ರ ಕಾಯ್ದೆಯ ಮೂಲ ಉದ್ದೇಶಕ್ಕೆ ವ್ಯತಿರಿಕ್ತವಾಗಿದೆ.
ಅಲ್ಲದೆ, ಇದು ಬ್ರಿಟಿಷರು ರೂಪಿಸಿದ್ದ ಕಾಯ್ದೆ ಮುಂದುವರೆಸುವ ಭಾಗವಾಗಿದ್ದು, ಬಂಡವಾಳ ಶಾಹಿಗಳ ಪರವಾಗಿದೆ. ಆದ್ದರಿಂದ, ಕೂಡಲೇ ತಿದ್ದುಪಡಿ ಕಾಯ್ದೆ ಆದೇಶ ವಾಪಾಸ್ ಪಡೆಯಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಶಂಭೂನಹಳ್ಳಿ ಸುರೇಶ್, ಬಿ.ಬೊಮ್ಮೇಗೌಡ, ಚಂದ್ರು ಶಿವಳ್ಳಿ, ಕೆ.ನಾಗಣ್ಣ, ಶ್ರೀನಿವಾಸ್, ಲತಾ ಶಂಕರ್ ಇತರರಿದ್ದರು.