Advertisement
ಶುಕ್ರವಾರದ ಪ್ರಾರ್ಥನೆ ಮುಗಿಯುತ್ತಿದ್ದಂತೆಯೇ ಉತ್ತರಪ್ರದೇಶದ ಹಲವು ಜಿಲ್ಲೆಗಳಲ್ಲಿ ಪ್ರತಿಭಟನಾಕಾರರು ಪೊಲೀಸರೊಂದಿಗೆ ಘರ್ಷಣೆಗಿಳಿದಿದ್ದಾರೆ. ಫಿರೋಜಾಬಾದ್, ಬದೋಹಿ, ಗೋರಖ್‌ಪುರ್ ಸೇರಿದಂತೆ ಹಲವೆಡೆ ಹಿಂಸೆ ಭುಗಿಲೆದ್ದಿದ್ದು, 15ಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಪೊಲೀಸರ ಮೇಲೆ ಕಲ್ಲುತೂರಾಟವೂ ನಡೆದಿದ್ದು, ಹಲವು ಪೊಲೀಸರು ಗಾಯಗೊಂಡಿದ್ದಾರೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಗೋಲಿಬಾರ್ ನಡೆಸಿದ್ದು, ಬಿಜ್ನೋರ್‌ನಲ್ಲಿ ಇಬ್ಬರು, ಕಾನ್ಪುರ, ಮೀರತ್, ಫಿರೋಜಾಬಾದ್ ಮತ್ತು ಸಂಭಾಲ್‌ನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಈ ಮೂಲಕ ಪೌರತ್ವದ ಪ್ರತಿಭಟನೆಗೆ ದೇಶದಲ್ಲಿ 9 ಮಂದಿ ಬಲಿಯಾದಂತಾಗಿದೆ.
Related Articles
Advertisement
ಬಸ್ಸುಗಳಿಗೆ ಕಲ್ಲು: ಮಹಾರಾಷ್ಟ್ರದ ನಾಂದೇಡ್, ಬೀಡ್ ಮತ್ತು ಪರ್ಭಾನಿ ಜಿಲ್ಲೆಗಳಲ್ಲಿ ಶುಕ್ರವಾರ ಪ್ರತಿಭಟನೆಗಳು ಹಿಂಸೆಗೆ ತಿರುಗಿದ್ದು ರಾಜ್ಯ ರಸ್ತೆ ಸಾರಿಗೆ ಬಸ್‌ಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ದುಷ್ಕರ್ಮಿಗಳನ್ನು ಚದುರಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಗುಜರಾತ್‌ನಲ್ಲೂ: ಇನ್ನು ಗುಜರಾತ್‌ನ ವಡೋದರಾದ ಸೂಕ್ಷ್ಮ ಪ್ರದೇಶವಾದ ಹಾಥಿಕಾನಾದಲ್ಲಿ ಮಸೀದಿಯೊಂದರ ಹೊರಗೆ ಪೊಲೀಸರ ಮೇಲೆ ಜನರ ಗುಂಪೊಂದು ಕಲ್ಲುತೂರಾಟ ನಡೆಸಿದೆ. ಇದರಿಂದಾಗಿ ಹಿರಿಯ ಪೊಲೀಸ್ ಅಧಿಕಾರಿ ಗಾಯಗೊಂಡಿದ್ದಾರೆ. ಕಾಂಗ್ರೆಸ್ ಕಾರ್ಪೊರೇಟರ್ ಸೇರಿ 49 ಮಂದಿಯನ್ನು ಬಂಧಿಸಲಾಗಿದೆ. ಚೆನ್ನೈನಲ್ಲೂ ಕಾಯ್ದೆ ಖಂಡಿಸಿ ಸಾವಿರಾರು ಮಂದಿ ಪ್ರತಿಭಟನೆ ನಡೆಸಿದ್ದು, 600 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ.
ವಿಎಚ್‌ಪಿಯಿಂದ ಜಾಗೃತಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಎನ್‌ಆರ್‌ಸಿ ಮತ್ತು ಪೌರತ್ವ ಕಾಯ್ದೆಗೆ ಜನರ ಬೆಂಬಲ ಸಿಗುವಂತೆ ಮಾಡಲು ನಾವು ಜನಜಾಗೃತಿ ಅಭಿಯಾನ ನಡೆಸುತ್ತೇವೆ ಎಂದು ವಿಶ್ವ ಹಿಂದೂ ಪರಿಷತ್ ಘೋಷಿಸಿದೆ.
ಎನ್‌ಆರ್‌ಸಿ ಜಾರಿ ಮಾಡಲ್ಲ: ಬಿಹಾರದಲ್ಲಿ ಎನ್‌ಆರ್‌ಸಿ ಜಾರಿ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ನಿತೀಶ್ ಕುಮಾರ್ ಘೋಷಿಸಿದ್ದಾರೆ. ಈ ಮೂಲಕ ಎನ್‌ಆರ್‌ಸಿ ಕುರಿತು ಜೆಡಿಯು ನಿಲುವು ಏನು ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಎನ್‌ಆರ್‌ಸಿ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಿತೀಶ್, “ಯಾವ ಎನ್‌ಆರ್‌ಸಿ? ಖಂಡಿತಾ ಅದನ್ನು ಜಾರಿ ಮಾಡುವುದಿಲ್ಲ’ ಎಂದಿದ್ದಾರೆ.
ಸಿಕ್ಖ್ ಫ್ರಂಟ್ ಬೆಂಬಲ: ಜಮ್ಮು-ಕಾಶ್ಮೀರದಲ್ಲಿ ಸಿಕ್ಖರ ಪರ ಹೋರಾಡುತ್ತಿರುವ ನ್ಯಾಷನಲ್ ಸಿಕ್ಖ್ ಫ್ರಂಟ್(ಎನ್‌ಎಸ್‌ಎಫ್) ಪೌರತ್ವ ಕಾಯ್ದೆಗೆ ಬೆಂಬಲ ಸೂಚಿಸಿದೆ. ಈ ಕಾಯ್ದೆ ಜಾರಿ ಮಾಡಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದಿರುವ ಎನ್‌ಎಸ್‌ಎಫ್, ವಿದ್ಯಾರ್ಥಿಗಳು ಸೇರಿದಂತೆ ದೇಶದ ಜನರನ್ನು ದಾರಿ ತಪ್ಪಿಸಿ ಪ್ರತಿಭಟನೆಗೆ ಕುಮ್ಮಕ್ಕು ನೀಡಲಾಗುತ್ತಿದೆ ಎಂದೂ ಆರೋಪಿಸಿದೆ.
ಅಮೆರಿಕದಲ್ಲೂ ಪ್ರತಿಭಟನೆ: ಅಮೆರಿಕದ ಷಿಕಾಗೋ ಮತ್ತು ಬೋಸ್ಟನ್‌ನಲ್ಲಿ ಶುಕ್ರವಾರ ಭಾರತೀಯ-ಅಮೆರಿಕನ್ ಹಾಗೂ ಭಾರತೀಯ ವಿದ್ಯಾರ್ಥಿಗಳು ಶಾಂತಿಯುತ ಪ್ರತಿಭಟನೆ ನಡೆಸುವ ಮೂಲಕ ಪೌರತ್ವ ಕಾಯ್ದೆಯನ್ನು ವಿರೋಧಿಸಿದ್ದಾರೆ.
ಕೇಂದ್ರ ದಿಲ್ಲಿಯ ಐತಿಹಾಸಿಕ ಜಾಮಾ ಮಸೀದಿಯಲ್ಲಿ ಶುಕ್ರವಾರ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ನೇತೃತ್ವದಲ್ಲಿ ಸಾವಿರಾರು ಮಂದಿ ಪ್ರತಿಭಟನೆ ನಡೆಸಿದ್ದಾರೆ. ಜಾಮಾ ಮಸೀದಿಯಿಂದ ಜಂತರ್ ಮಂತರ್‌ವರಗೆ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಲಾಗಿದೆ. ಈ ಪ್ರದೇಶ ದಲ್ಲಿ ಪ್ರತಿಭಟನೆ ನಡೆಸಲು ದಿಲ್ಲಿ ಪೊಲೀಸರು ಅವಕಾಶ ನೀಡಿರಲಿಲ್ಲ. ಆದರೂ, ಹೇಗೋ ಮಸೀದಿಯತ್ತ ತಲುಪಿದ ಆಜಾದ್, ಕೈಯಲ್ಲಿ ಸಂವಿಧಾನದ ಪ್ರತಿ ಹಿಡಿದು ಪ್ರತಿಭಟನೆಯನ್ನು ಮುನ್ನಡೆಸಿದರು. ಅಲ್ಲಿಗೆ ಆಗಮಿಸಿದ ಪೊಲೀಸರು ಜನಸಾಗರದ ಮಧ್ಯೆ ಇದ್ದ ಆಜಾದ್‌ರನ್ನು ವಶಕ್ಕೆ ಪಡೆದು, ಪೊಲೀಸ್ ವಾಹನದತ್ತ ಕರೆದೊಯ್ದರು. ಆದರೆ, ಅಲ್ಲಿ ತಲುಪುವುದರೊಳಗಾಗಿ ಆಜಾದ್ ಅವರು ಪೊಲೀಸರ ಕೈಯಿಂದ ತಪ್ಪಿಸಿಕೊಂಡರು. ಮಮತಾ ಕ್ಷಮೆಗೆ ಬಿಜೆಪಿ ಆಗ್ರಹ
ಪೌರತ್ವ ಕಾಯ್ದೆ ಬಗ್ಗೆ ವಿಶ್ವಸಂಸ್ಥೆಯ ಮೇಲ್ವಿಚಾರಣೆಯಲ್ಲಿ ಜನಾಭಿಪ್ರಾಯ ಸಂಗ್ರಹ ನಡೆಯಬೇಕು ಎಂಬ ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಹೇಳಿಕೆಯು ವಿವಾದ ಸೃಷ್ಟಿಸಿದೆ. ಈ ಹೇಳಿಕೆ ನೀಡುವ ಮೂಲಕ ಮಮತಾ ಭಾರತದ ಸಂಸತ್‌ಗೆà ಅವಮಾನ ಮಾಡಿದ್ದಾರೆ ಎಂದು ಕೇಂದ್ರ ಸಚಿವೆ ಸ್ಮತಿ ಇರಾನಿ ಆರೋಪಿಸಿದ್ದಾರೆ. ಇಂಥ ಹೇಳಿಕೆ ನೀಡಿದ್ದಕ್ಕಾಗಿ ಮಮತಾ ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಸಚಿವ ಪ್ರಕಾಶ್ ಜಾವಡೇಕರ್ ಒತ್ತಾಯಿಸಿದ್ದಾರೆ. ಇದೇ ವೇಳೆ, ಪ.ಬಂಗಾಳ ರಾಜ್ಯಪಾಲ ಜಗದೀಪ್ ಧನ್‌ಕರ್ ಕೂಡ ಆಕ್ರೋಶ ವ್ಯಕ್ತಪಡಿಸಿದ್ದು, ವಿವಾದ ಪರಿಹಾರಕ್ಕೆ ಬಾಹ್ಯ ಸಂಸ್ಥೆಯೊಂದರ ಮಧ್ಯಪ್ರವೇಶ ಕೋರುವುದನ್ನು ದೇಶ ಒಪ್ಪುವುದಿಲ್ಲ ಎಂದಿದ್ದಾರೆ. ಹೇಳಿಕೆ ವಿವಾದವಾಗುತ್ತಿದ್ದಂತೆಯೇ ಯೂಟರ್ನ್ ಹೊಡೆದಿ ರುವ ದೀದಿ, “ನನ್ನ ಹೇಳಿಕೆಯನ್ನು ತಿರುಚಲಾಗಿದೆ’ ಎಂದಿದ್ದಾರೆ. ಅಲ್ಲದೆ, ಮೋದಿ ಅವರೇ ಮಧ್ಯಪ್ರವೇಶಿಸಿ, ಕಾಯ್ದೆಯನ್ನು ವಾಪಸ್ ಪಡೆಯಬೇಕು. ಏಕೆಂದರೆ ಇದು ದೇಶದ ಹಿತಾಸಕ್ತಿಗೆ ಸಂಬಂಧಿಸಿದ ವಿಚಾರ ಎಂದಿದ್ದಾರೆ. ಜನರ ಧ್ವನಿ ಹತ್ತಿಕ್ಕಲು ಯತ್ನ: ಸೋನಿಯಾ
ಜನತೆಯ ಧ್ವನಿಯನ್ನು ಕೇಂದ್ರ ಸರಕಾರವು ಬಲಪ್ರಯೋಗ ಮಾಡಿ ಹತ್ತಿಕ್ಕುತ್ತಿದೆ. ಪ್ರತಿರೋಧವನ್ನು ದಮನಿಸುವುದನ್ನು ಸಹಿಸಲಾಗದು ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದು, ವಿದ್ಯಾರ್ಥಿಗಳು ಹಾಗೂ ನಾಗರಿಕರ ಹೋರಾಟಕ್ಕೆ ಬೆಂಬಲ ಸೂಚಿಸುತ್ತೇನೆ ಎಂದು ಘೋಷಿಸಿದ್ದಾರೆ. ಶುಕ್ರವಾರ ದೇಶವನ್ನು ಉದ್ದೇಶಿಸಿ ಟಿವಿ ಮೂಲಕ ಸಂದೇಶ ನೀಡಿದ ಅವರು, “ಸರಕಾರದ ತಪ್ಪು ನಿರ್ಧಾರಗಳು ಮತ್ತು ನೀತಿಗಳ ವಿರುದ್ಧ ಧ್ವನಿಯೆತ್ತುವ ಹಕ್ಕು ದೇಶದ ಜನರಿಗಿದೆ. ಭಾರತದ ಜನರಿಗೆ ಕಾಂಗ್ರೆಸ್ ಹೇಳುವುದಿಷ್ಟೆ-ನಿಮ್ಮ ಮೂಲಭೂತ ಹಕ್ಕುಗಳ ರಕ್ಷಣೆಗೆ ಹಾಗೂ ಸಂವಿಧಾನದ ಮೂಲ ಆಶಯವನ್ನು ಎತ್ತಿ ಹಿಡಿಯುವಲ್ಲಿ ನಮ್ಮ ಪಕ್ಷ ಬದ್ಧವಾಗಿದೆ. ನಿಮ್ಮ ಹೋರಾಟಕ್ಕೆ ನಾವು ಸಾಥ್ ನೀಡುತ್ತೇವೆ’ ಎಂದಿದ್ದಾರೆ. ಪ್ರತಿರೋಧ ಎನ್ನುವುದು ಪ್ರಜಾಸತ್ತೆಯ ಆತ್ಮವಾಗಿದೆ ನಿಜ. ಹಾಗಂತ, ಜನತೆ ಹಿಂಸೆಗೆ ಇಳಿಯಬಾರದು. ಅವರಿಗೆ ರಾಷ್ಟ್ರೀಯ ಹಿತಾಸಕ್ತಿಯೇ ಮುಖ್ಯವಾಗಬೇಕು.
ಎಂ. ವೆಂಕಯ್ಯ ನಾಯ್ಡು, ಉಪರಾಷ್ಟ್ರಪತಿ