ಮಹಾನಗರ: ರಾಷ್ಟ್ರೀಯ ಹೆದ್ದಾರಿ 66ರ ಉಳ್ಳಾಲ ಸೇತುವೆಯಲ್ಲಿ ನಡೆಯುತ್ತಿರುವ ಅನಾಹುತ ತಡೆಗಟ್ಟುವ ನಿಟ್ಟಿನಲ್ಲಿ ಮಂಗಳೂರು ನಗರಾ ಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸೇತುವೆ ಯುದ್ದಕ್ಕೂ ರಕ್ಷಣ ಬೇಲಿ ಅಳವಡಿಸುವ ಕಾಮಗಾರಿ ತ್ವರಿತ ಗತಿಯಲ್ಲಿ ನಡೆಯುತ್ತಿದೆ. ಸೇತುವೆ 800 ಮೀ. ಉದ್ದವಿದೆ. ಮಂಗಳೂರಿನಿಂದ ತೊಕ್ಕೊಟ್ಟು ಕಡೆಗೆ ಹೋಗುವ ಹಾಗೂ ತೊಕ್ಕೊಟ್ಟಿನಿಂದ ಮಂಗಳೂರು ಕಡೆಗೆ ಬರುವ ಎರಡು ಸೇತುವೆಗಳಿದ್ದು, ಈ ಎರಡೂ ಸೇತುವೆ ಗಳಿಗೆ ಎರಡೂ ಬದಿ ರಕ್ಷಣ ಬೇಲಿಯನ್ನು ಅಳವಡಿಸಲಾಗುತ್ತಿದೆ.
ಜುಲೈ 4ರಂದು ಶಾಸಕ ಡಿ. ವೇದವ್ಯಾಸ ಕಾಮತ್ ಅವರು ರಕ್ಷಣ ಬೇಲಿ ನಿರ್ಮಾ ಣಕ್ಕೆ ಗುದ್ದಲಿ ಪೂಜೆಯನ್ನು ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದ್ದರು. ಇದೀಗ, ಮಂಗಳೂರಿನಿಂದ ತೊಕ್ಕೊಟ್ಟು ಕಡೆಗೆ ಹೋಗುವ ಹೆದ್ದಾರಿಯ ಸೇತುವೆ ಎಡ ಬದಿಯಲ್ಲಿ ಸುಮಾರು ಮುಕ್ಕಾಲು ಭಾಗ ದವರೆಗಿನ ಕಾಮಗಾರಿ ಪೂರ್ತಿಗೊಂಡಿದೆ.
5 ಅಡಿ ಎತ್ತರ ರಕ್ಷಣ ಬೇಲಿಯು 5 ಅಡಿ ಎತ್ತರವಿದ್ದು, ಅದರ ಮೇಲ್ಗಡೆ 1 ಅಡಿಯಷ್ಟು ಮುಳ್ಳು ತಂತಿ ಇದೆ. ಕಬ್ಬಿಣದ ಬೇಲಿಯನ್ನು ವರ್ಕ್ ಶಾಪ್‌ನಲ್ಲಿ ತಯಾರಿಸಿ ಬಳಿಕ ಸೇತುವೆಯ ಬಳಿಗೆ ಸಾಗಿಸಿ, ಕಬ್ಬಿಣದ ಸರಳುಗಳನ್ನು ಉಪಯೋಗಿಸಿ ಸೇತುವೆಗೆ ವೆಲ್ಡಿಂಗ್ ಮಾಡಿ ಜೋಡಿಸಲಾಗುತ್ತದೆ. ಬೇಲಿಯ ಮೇಲ್ಗಡೆಯೂ ಹತ್ತಲು ಸಾಧ್ಯವಾಗದಂತೆ ಮೇಲ್ಭಾಗಕ್ಕೂ ನಾಲ್ಕು ಸಾಲು ಮುಳ್ಳು ತಂತಿಯನ್ನು ರಸ್ತೆಯ ಭಾಗಕ್ಕೆ ಬಗ್ಗಿಸಿ ಜೋಡಣೆ ಮಾಡಲಾಗುತ್ತಿದೆ.
ಈ ಸೇತುವೆಗೆ ರಕ್ಷಣ ಬೇಲಿ ನಿರ್ಮಿಸಬೇಕೆನ್ನುವುದು ಬಹುಕಾಲದ ಬೇಡಿಕೆಯಾಗಿತ್ತು. 2019ರ ಜುಲೈ 29ರಂದು ಕೆಫೆ ಕಾಫಿ ಡೇ ಸಂಸ್ಥೆಯ ಸ್ಥಾಪಕ ವಿ.ಜಿ. ಸಿದ್ದಾರ್ಥ ಅವರು ಈ ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ರಕ್ಷಣ ಬೇಲಿಯನ್ನು ಕೂಡಲೇ ನಿರ್ಮಿಸಬೇಕೆಂಬ ಆಗ್ರಹ ಕೇಳಿ ಬಂದಿತ್ತು. ಸಿದ್ದಾರ್ಥ ಆತ್ಮಹತ್ಯೆ ಪ್ರಕರಣ ಸಂಭವಿಸಿ 1 ವರ್ಷ ಆಗುವಷ್ಟರಲ್ಲಿ ರಕ್ಷಣ ಬೇಲಿ ನಿರ್ಮಾಣ ಕಾಮಗಾರಿ ಆರಂಭವಾಗಿದೆ. 3 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ರಕ್ಷಣ ಬೇಲಿ ಕಾಮಗಾರಿ ಪೂರ್ತಿ ಗೊಂಡ ಬಳಿಕ ಸೇತುವೆಯ ಎರಡೂ ದಿಕ್ಕುಗಳಲ್ಲಿ ಸಿ.ಸಿ. ಕೆಮರಾ ಅಳವಡಿಸುವ ಕಾಮಗಾರಿ ನಡೆಯಲಿದೆ. ಈ ಬಗ್ಗೆ ಈಗಾಗಲೇ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರವು ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದುಕೊಂಡಿದೆ.
ನಿಗದಿತ ಅವಧಿಯೊಳಗೆ ಪೂರ್ಣ
ರಕ್ಷಣ ಬೇಲಿ ನಿರ್ಮಿಸುವ ಬಗ್ಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇನೆ. ಅಗತ್ಯ ಹಣಕಾಸು ವ್ಯವಸ್ಥೆ ಹಾಗೂ ಕಾಮಗಾರಿಯ ಪ್ರಾರಂಭೋತ್ಸವನ್ನೂ ನೆರವೇರಿಸಿದ್ದೇನೆ. ಸಂಬಂಧ ಪಟ್ಟ ಎಂಜಿನಿಯರುಗಳು ಕೆಲಸ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಕಾಮಗಾರಿಯನ್ನು ಪೂರ್ತಿಗೊಳಿಸಲು 3 ತಿಂಗಳ ಕಾಲಾವಕಾಶ ನೀಡಲಾಗಿದ್ದು, ನಿಗದಿತ ಅವಧಿಯೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
- ಡಿ. ವೇದವ್ಯಾಸ ಕಾಮತ್, ಶಾಸಕರು