ಅರಸೀಕೆರೆ: ಗೋವುಗಳ ಸಂರಕ್ಷಣೆ ಪ್ರತಿಯೊಬ್ಬ ಭಾರತೀಯ ಪ್ರಜೆಯ ಕರ್ತವ್ಯ ಎಂದು ನಗರದ ಕಸ್ತೂರ ಬಾ ಗಾಂಧಿ ಗೋ ಶಾಲೆಯ ವ್ಯವಸ್ಥಾಪಕ
ಮೋಹನ್ ಕುಮಾರ್ ಹೇಳಿದರು. ನಗರದ ಹೊರವಲಯ ಮೈಸೂರು ರಸ್ತೆಯಲ್ಲಿರುವ ಕಸ್ತೂರ ಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಕೇಂದ್ರದ ಆವರಣದಲ್ಲಿನ ಕಸ್ತೂರ ಬಾ ಗಾಂಧಿ ಗೋ ಶಾಲೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗೋವು ಪೂಜನೀಯ: ಭಾರತೀಯ ಸನಾತನ ಧರ್ಮ ಹಾಗೂ ಸಂಸ್ಕೃತಿಯಲ್ಲಿ ಅತ್ಯಂತ ಪೂಜನೀಯವಾದ ದೇಶಿಯ ಗೋವು ತಳಿಗಳು ಮಾಯವಾಗುತ್ತಿವೆ. ಈ ಗೋವುಗಳ ಹಾಲು ಅಮೃತಕ್ಕೆ ಸಮಾನವಾಗಿದ್ದು, ಸಗಣಿ ಮತ್ತು ಗಂಜಲ ಕೂಡ ವಿವಿಧ ರೋಗಳಿಗೆ ರಾಮ ಬಾಣವಾಗಿರುವ ಕಾರಣ ಗೋವುಗಳನ್ನು ನಾವುಗಳು ಕಣ್ಣಿಗೆ ಕಾಣುವ ದೇವರು ಎಂದು ಪೂಜಿಸುತ್ತೇವೆ ಎಂದರು.
ಗೋವುಗಳ ಸಂತತಿಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಆದ್ಯ ಕರ್ತವ್ಯವಾಗಿದ್ದು, ಈ ದೇಶದಲ್ಲಿನ ಪ್ರತಿಯೊಂದು ಸಮಾಜ ಈ ಬಗ್ಗೆ ಜಾಗೃತರಾಗಿ ದೇಶಿಯ ಗೋ ತಳಿಗಳ ಸಂರಕ್ಷಣೆಗೆ ಸಂಕಲ್ಪ ಮಾಡಬೇಕೆಂದು ಅವರು ಮನವಿ ಮಾಡಿದರು.
160 ಗೋವುಗಳಿಗೆ ಆಶ್ರಯ: ಕಸ್ತೂರ ಗಾಂಧಿ ಗೋಶಾಲೆಯಲ್ಲಿ ಈಹಿಂದೆ 65 ಗೋವುಗಳಿದ್ದವು. ಇಂದು 160 ಕ್ಕೂ ಹೆಚ್ಚು ಇವೆ. ದಾನಿಗಳಿಬ್ಬರು ಇತ್ತೀಚೆಗೆ ಎರಡು ಗೋ ಶಾಲೆ ನಿರ್ಮಿಸಿಕೊಟ್ಟಿದ್ದಾರೆ. ಹೊರ ಜಿಲ್ಲೆಗಳಿಂದಲೂ ಗೋವುಗಳನ್ನು ತಂದು ಬಿಡುತ್ತಿದ್ದಾರೆ. ಅಂಗವಿಕಲ ಮತ್ತು ರೋಗಗ್ರಸ್ಥ ಗೋವುಗಳನ್ನು ಯಾರಾದರೂ ಸಾಕಲು ಸಾಧ್ಯವಾಗದೆ ಗೋ ಶಾಲೆಗೆ ತಂದು ಬಿಟ್ಟರೆ ನಾವು ಅವುಗಳನ್ನು ಪೋಷಿಸುತ್ತೇವೆ ಕೆಲವು ವೈದ್ಯರು ಸೇವಾ
ಮನೋಭಾವದಿಂದ ಗೋ ಶಾಲೆಗೆ ಭೇಟಿ ನೀಡಿ ಚಿಕಿತ್ಸೆಯನ್ನು ನೀಡುತ್ತಿದ್ದಾರೆ ಎಂದರು.
ದಾನಿಗಳ ನೆರವು: ಪ್ರತಿ ತಿಂಗಳು ಗೋ ಶಾಲೆಯ ನಿರ್ವಹಣಾ ಕಾರ್ಯಕ್ಕೆ ಒಂದು ಲಕ್ಷ ರೂ.ಗಳಿಗೂ ಹೆಚ್ಚು ವೆಚ್ಚ ಬರುತ್ತಿದೆ. ದಾನಿಗಳ ಸಹಕಾರದಲ್ಲಿ ನಡೆಸಲಾಗುತ್ತಿದೆ. ಮೇವು, ಹಾಗೂ ಪಶು ಆಹಾರವನ್ನು ನೀಡುವವರು ನೀಡಬಹುದು. ತಮ್ಮ ಮನೆಯಲ್ಲಿ ನಡೆಯುವ ಮದುವೆ, ಮಕ್ಕಳ ಹುಟ್ಟುಹಬ್ಬ ಮೊದಲಾದ ಶುಭ ಕಾರ್ಯಗಳಲ್ಲಿ ಒಮ್ಮೆ ಗೋಶಾಲೆಗೆ ಬಂದು ಗೋವುಗಳಿಗೆ ಮೇವು ನೀಡುತ್ತಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಕಾಟೀಕೆರೆ ಗ್ರಾಮದ ರೇವಮ್ಮ ವೆಂಕಟೇಶ್ ಅವರು ತಮ್ಮ ಮನೆಯ ಭಜರಂಗಿ ಹೆಸರಿನ ಕರುವೊಂದನ್ನು ಗೋಶಾಲೆ ಸಂಚಾಲಕ ರಾದ ಮೋಹನ್ ಕುಮಾರ್ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಗೋ ಶಾಲೆ ಮುಖ್ಯಸ್ಥರಾದ ಲೋಕೇಶ್, ನಿರಂಜನ್ ಮೊದಲಾದವರು ಉಪಸ್ಥಿತರಿದ್ದರು,