Advertisement
ಮಲ್ಪೆಯ ಶ್ರೀಕಾಂತ್ ಪುತ್ರನ್ ಅವರಿಗೆ ಸೇರಿದ ಹನುಮತೀರ್ಥ ಪರ್ಶಿನ್ ಬೋಟು ಮಂಗಳವಾರ ಮುಂಜಾನೆ 5ರ ವೇಳೆಗೆ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು. ಮೀನುಗಾರಿಕೆ ಮುಗಿಸಿ ವಾಪಸು ಬರುವಾಗ ಸ್ಟೇರಿಂಗ್ ತುಂಡಾಗಿ ನಿಯಂತ್ರಣ ಕಳೆದುಕೊಂಡ ಬೋಟು ಸಮುದ್ರದ ಅಲೆಯ ಅಬ್ಬರಕ್ಕೆ ಬಂಡೆಗೆ ಬಡಿದಿತ್ತು. ತತ್‌ಕ್ಷಣ ದೋಣಿಯಲ್ಲಿದ್ದ ಮೀನುಗಾರರು ಮಾಲಕರಿಗೆ ಮಾಹಿತಿ ರವಾನಿಸಿದ್ದರು.
ಅಲೆಯ ಅಬ್ಬರಕ್ಕೆ ಬೋಟು ಬಂಡೆಗೆ ಬಡಿಯುತ್ತಿತ್ತು. ಈ ನಡುವೆ ಅರ್ಧ ಮುಳುಗಿದ ಬೋಟಿನ ತುದಿ ಏರಿದ 28 ಮಂದಿ ಮೀನುಗಾರರು ರಕ್ಷಣೆಗಾಗಿ ಕಾಯುತ್ತಿದ್ದರು. ಅಪಾಯದ ಸ್ಥಿತಿಯಲ್ಲಿದ್ದ ಮೀನುಗಾರರನ್ನು ಸ್ಥಳೀಯರು ನಾಲ್ಕು ಟ್ರಾಲ್‌ದೋಣಿಗಳ ಮೂಲಕ ಬೋಟಿನ ಬಳಿ ತೆರಳಿ ಹರಸಾಹಸ ಪಟ್ಟು ರಕ್ಷಣೆ ಮಾಡಿ ದಡ ಸೇರಿಸಿದ್ದಾರೆ. ಇವರಲ್ಲಿ ಸದಾನಂದ ಮತ್ತು ಉದಯ ಅವರು ಗಾಯಗೊಂಡಿದ್ದು ಅವರನ್ನು ಅಸ್ಪತ್ರೆಗೆ ದಾಖಲಿಸಲಾಗಿದೆ. ಬೋಟಿನಲ್ಲಿ ಹಿಡಿದ ಮೀನು ಸೇರಿದಂತೆ ಎರಡು ಬಲೆ, 6 ಸಾವಿರ ಲೀ. ಡೀಸೆಲ್, ಮೀನುಗಾರಿಕೆಗೆ ಉಪಯೋಗಿಸುವ ಜಿಪಿಎಸ್, ಬೋಟಿನ ಇತರ ಸಲಕರಣೆಗಳು ಸಮುದ್ರ ಪಾಲಾಗಿವೆ. ಮುಳುಗಡೆಯಾದ ಬೋಟು ಮತ್ತು ಸಲಕರಣೆಗಳ ಸಹಿತ ಸುಮಾರು 1.70 ಕೋ. ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಬುಧವಾರ ಬೆಳಗ್ಗೆ ಮುಳುಗಡೆ ಗೊಂಡಿದ್ದ ಬೋಟನ್ನು ನ್ಯೂಕಿಂಗ್, ರತಿಯಮ್ಮ, ಶಾರ್ವರಿ ಮತ್ತು ಲಕ್ಷ್ಮೀಗಣೇಶ್ ಬೋಟಿನ ನೆರವಿನಿಂದ ಎಳೆದು ತರಲು ಪ್ರಯತ್ನ ನಡೆಯಿತು. ಆದರೆ ಬೋಟ್ ಇಬ್ಟಾಗವಾದ ಕಾರಣ ನೀರಿನಲ್ಲಿ ಮುಳುಗಿದೆ ಎನ್ನಲಾಗಿದೆ.
Related Articles
ಮುಳುಗಡೆಗೊಂಡ ಬೋಟಿನಲ್ಲಿದ್ದ 28 ಮಂದಿ ಮೀನುಗಾರರನ್ನು ರಕ್ಷಣೆ ಮಾಡುವಂತೆ ಬೋಟ್ ಮಾಲಕರು ಮಲ್ಪೆಯಲ್ಲಿರುವ ಕರಾವಳಿ ಕಾವಲು ಪಡೆಗೆ ಮನವಿ ಮಾಡಿದ್ದರೂ ತಮ್ಮಲ್ಲಿ ರಕ್ಷಣ ಬೋಟಿನ ವ್ಯವಸ್ಥೆ ಇಲ್ಲ. ಇದ್ದ ಬೋಟು ದುರಸ್ತಿಯಲ್ಲಿದೆ ಎಂದು ಕೈಚೆಲ್ಲಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ರಕ್ಷಣೆಗೆ ಮುಂದಾಗದ ಇಲಾಖೆಯ ಅಧಿಕಾರಿಗಳ ವಿರುದ್ಧ ಬೋಟ್ ಮಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಮೀನುಗಾರರ ರಕ್ಷಣೆಗೆ ಮುಂದಾದ ಸ್ಥಳೀಯರ ಸಮಯ ಪ್ರಜ್ಞೆಗೆ ಸಾರ್ವಜಕರಿಂದ ಪ್ರಶಂಸೆ ವ್ಯಕ್ತವಾಗಿದೆ.
Advertisement