Advertisement

ಮಕ್ಕಳ ಹಕ್ಕು ರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ: ಡಿಸೋಜಾ

05:36 PM Jan 24, 2022 | Shwetha M |

ಸಿಂದಗಿ: ಬಾಲ್ಯದಲ್ಲಿ ಮಕ್ಕಳು ತಮ್ಮ ಹಕ್ಕುಗಳ ಕುರಿತಾದ ಜ್ಞಾನದಿಂದ ವಂಚಿತರಾದರೆ ಭವಿಷ್ಯದಲ್ಲಿ ಅವರಿಗೆ ಲಭಿಸಬಹುದಾದ ಪ್ರಯೋಜನಗಳಿಂದ ವಂಚಿತರಾಗಬೇಕಾಗುತ್ತದೆ. ಹಾಗಾಗಿ ಹಿರಿಯರು ಮತ್ತು ಸಮಾಜದ ಪ್ರತಿಯೊಬ್ಬರೂ ಈ ನಿಟ್ಟಿನಲ್ಲಿ ತಮ್ಮ ಪಾಲಿನ ಹೊಣೆಗಾರಿಕೆ ಅರಿತು ಕಾರ್ಯನಿರ್ವಹಿಸಬೇಕಿದೆ ಎಂದು ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರದ ನಿರ್ದೇಶಕ ಅಲ್ವಿನ್‌ ಡಿಸೋಜಾ ಹೇಳಿದರು.

Advertisement

ಕಕ್ಕಳಮೇಲಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರ ಹಾಗೂ ಕಕ್ಕಳಮೇಲಿ ಗ್ರಾಪಂ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು, ಮಕ್ಕಳ ವರ್ತಮಾನ ಮತ್ತು ಭವಿಷ್ಯ ರಕ್ಷಿಸುವ ಕೆಲಸ ಮಾಡಬೇಕಿದೆ ಎಂದರು. ಮಕ್ಕಳ ಹಕ್ಕುಗಳ ರಕ್ಷಣೆಗಾಗಿ, ಮಕ್ಕಳ ಗ್ರಾಮ ಸಭೆ ಅವಶ್ಯ. ಸರಕಾರ ಅಂದರೆ ನಾವು ಅಥವಾ ನಮ್ಮವರೇ, ಆದ್ದರಿಂದ ನಿಮಗೆ ಇರುವಂತಹ ಎಲ್ಲ ಕುಂದು ಕೊರತೆಗಳನ್ನು ಬಗೆಹರಿಸಲು ಆಗುವುದಿಲ್ಲ. ಆದ್ದರಿಂದ ನಿಮಗೆ ಸಿಗುವಂತಹ ಸೌಲಭ್ಯಗಳನ್ನು ನಿಮ್ಮ ಗ್ರಾಪಂ ಅಧ್ಯಕ್ಷರು ಮತ್ತು ಸದಸ್ಯರು ಸೇರಿ ನಿಮ್ಮ ಶಾಲೆಯಲ್ಲಿ ಇರುವಂತಹ ಕುಂದು ಕೊರತೆಗಳನ್ನು ಈಡೇರಿಸುತ್ತಾರೆ ಎಂದು ಮಕ್ಕಳಿಗೆ ಹೇಳಿದರು.

ಹಿರಿಯ ಪ್ರಾಥಕಮಿಕ ಶಾಲೆ ಕಕ್ಕಳಮೇಲಿ ಎಲ್‌ .ಟಿ, ಸಿದ್ರಾಮೇಶ್ವರ ಪ್ರೌಢಶಾಲೆ ಮತ್ತು ಸರಕಾರಿ ಮಾದರಿ ಶಾಲೆಯ ಒಟ್ಟು 200 ಮಕ್ಕಳು ಸಭೆಯಲ್ಲಿ ಭಾಗವಹಿಸಿ ನೀರಿನ ವ್ಯವಸ್ಥೆ, ಟ್ಯಾಂಕ್‌ ವ್ಯವಸ್ಥೆ, ಶಾಲೆ ಆವರಣ ಅಭಿವೃದ್ಧಿ ಹೀಗೆ ಹತ್ತು ಹಲವು ಬೇಡಿಕೆಗಳನ್ನು ಶೀಘ್ರದಲ್ಲಿ ಈಡೇರಿಸುವಂತೆ ಗ್ರಾಪಂ ಅಧಿಕಾರಿಗಳ ಮುಂದೆ ಬೇಡಿಕೆಗಳನ್ನು ಇಟ್ಟರು. ಕಕ್ಕಳಮೇಲಿ ಪಿಡಿಒ ಜಟ್ಟೇಪ್ಪ ಹಲಸಂಗಿ ಮಾತನಾಡಿ, ಶೌಚಾಲಯ ವ್ಯವಸ್ಥೆ, ಬೇಡಿಕೆಗಳನ್ನು ಮುಂದಿನ ವರ್ಷದ ಕ್ರಿಯಾ ಯೋಜನೆಯಲ್ಲಿ ಹಾಕಿಕೊಂಡು ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.

ಪ್ರಾಥಮಿಕ, ಪ್ರೌಢಶಾಲೆ ಮುಖ್ಯಗುರು, ಶಿಕ್ಷಕರು, ಪಂಚಾಯತಿ ಸಿಬ್ಬಂದಿ ವರ್ಗ, ಸಂಗಮ ಸಂಸ್ಥೆ ಕಾರ್ಯಕರ್ತರಾದ ಪ್ರಥ್ವಿ, ರಾಜು ಕುರಿಮನಿ ಇದ್ದರು. ಆರ್‌.ಕೆ. ಪಾಟೀಲ ಸ್ವಾಗತಿಸಿದರು. ಎಸ್‌. ಎಚ್‌. ಬಿರಾದಾರ ನಿರೂಪಿಸಿದರು. ಬಿ.ಬಿ. ಪಾಟೀಲ ವಂದಿಸಿದರು. ­ರಾಂಪುರ ಪಿ.ಎ: ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರ ಹಾಗೂ ರಾಂಪುರ ಗ್ರಾಪಂ ಸಹಯೋಗದಲ್ಲಿ ಮಕ್ಕಳ ಗ್ರಾಮ ಸಭೆ ಜರುಗಿತು.

ಸಂಗಮ ಸಂಸ್ಥೆ ಸಹ ನಿರ್ದೇಶಕಿ ಸಿಂತಿಯಾ ಡಿಮೆಲ್ಲೋ ಮಾತನಾಡಿ, ಹಕ್ಕುಗಳ ರಕ್ಷಣೆಗಾಗಿ ಮಕ್ಕಳ ಗ್ರಾಮ ಸಭೆ ಆಯೋಜಿಸುವುದು ಅತ್ಯವಶ್ಯಕ. ಪೌಷ್ಟಿಕ ಆಹಾರ, ಮೊಟ್ಟೆ ವಿತರಣೆ, ಮಕ್ಕಳ ಕ್ರೀಡಾಕೂಟ, ಮಕ್ಕಳಿಗೆ ಕಥೆ ಹೇಳುವ ಕಾರ್ಯಕ್ರಮಗಳು, ಮಾನಸಿಕ ಆರೋಗ್ಯ ಸಂಬಂಧಿತ ಕಾರ್ಯಕ್ರಮಗಳು, ಶೈಕ್ಷಣಿಕ ಮತ್ತು ವೃತ್ತಿಪರ ಮಾರ್ಗದರ್ಶನ ಕಾರ್ಯಕ್ರಮಗಳು, ಓದುವ ಬೆಳಕು ಕಾರ್ಯಕ್ರಮ, ಗ್ರಂಥಾಲಯಗಳು ಮಕ್ಕಳ ಸಮಸ್ಯಗಳ ಬೇಡಿಕೆಗಳು ಪ್ರಶ್ನೆಗಳು, ಮಕ್ಕಳ ಧ್ವನಿ ಪೆಟ್ಟಿಗೆ, ಮಕ್ಕಳ ಸಹಾಯವಾಣಿ, ಸಂಖ್ಯೆ ಬರೆಯುವುದು ಹೀಗೆ ಹತ್ತು ಹಲವು ವಿಷಯಗಳನ್ನು ಚರ್ಚೆಗೆ ಅವಕಾಶ ನೀಡಿ ಸಮಸ್ಯೆ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದರು.

Advertisement

ಗ್ರಾಮ ಸಭೆಯಲ್ಲಿ ಮಕ್ಕಳಿಗಾಗಿ ಸರ್ಕಾರದಿಂದ ಇರುವ ಯೋಜನೆಗಳು, ಸೌಲಭ್ಯಗಳು, ಮಕ್ಕಳ ಶಿಕ್ಷಣ ಶಾಲೆ, ಆರೋಗ್ಯ ರಕ್ಷಣೆ, ವ್ಯವಸ್ಥೆ ವಸತಿ, ಆಹಾರ ಮತ್ತು ಪೌಷ್ಟಿಕತೆ, ವಿಪತ್ತು ನಿರ್ವಹಣೆ, ನೀರು, ನೈರ್ಮಲ್ಯ, ಶುಚಿತ್ವ, ರಸ್ತೆ, ಸಾರ್ವಜನಿಕ ಕಟ್ಟಡ, ಬಾಲ್ಯವಿವಾಹ ನಿಷೇಧ ಕಾಯ್ದೆ, ಮಕ್ಕಳ ಸಹಾಯವಾಣಿ 1098 ಕುರಿತು ಸಮಗ್ರ ಮಾಹಿತಿ ನೀಡಲಾಯಿತು. ಗ್ರಾಮ ಸಭೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ, ಶೌಚಾಲಯ, ಶಾಲಾ ತಡೆಗೋಡೆ, ವ್ಯವಸ್ಥೆ, ಆಟದ ಮೈದಾನ, ಶುದ್ಧ ನೀರಿನ ಘಟಕ, ನಿರ್ಮಾಣ, ಮಳೆ ನೀರು ಕೊಯ್ಲು ಸೇರಿದಂತೆ ಗ್ರಾಮಸ ಸಮಸ್ಯೆಗಳ ಕುರಿತು ಬೇಡಿಕೆಗಳನ್ನು ಇಟ್ಟರು. ಗ್ರಾಪಂ ಅಧ್ಯಕ್ಷ ನಿಂಗಣ್ಣ ಬಿಸನಾಳ ಮಾತನಾಡಿದರು. ಎಸ್‌.ಐ. ಅಂಕಲಗಿ ನಿರೂಪಿಸಿದರು. ಎಸ್‌.ಆರ್‌. ರಜಪೂತ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next