ಹಾವೇರಿ: ನಗರದ ಭಿಕ್ಷೆ ಬೇಡುತ್ತಿದ್ದ ದಾವಣಗೆರೆ ಜಿಲ್ಲೆಯ ನಾಗರಾಜ ಮಂಜಪ್ಪ ತಿಮ್ಮಾಪುರ ಎಂಬ ಬಾಲಕನನ್ನು ಅಧಿಕಾರಿಗಳು ರಕ್ಷಣೆ ಮಾಡಿದ ಘಟನೆ ನಗರದಲ್ಲಿ ನಡೆದಿದೆ. ಹದಿಮೂರು ವರ್ಷದ ಬಾಲಕ ನಾಗರಾಜ ಮೂಕನಂತೆ ವರ್ತಿಸಿ ನಗರದಲ್ಲಿ ಭಿಕ್ಷೆ ಬೇಡುತ್ತಿದ್ದನು. ಇದನ್ನು ಗಮನಿಸಿದ ಮಕ್ಕಳ ವಿಶೇಷ ಪೊಲೀಸ್ ಘಟಕದ ಸಿಬ್ಬಂದಿ ಎಂ.ಆರ್. ಜಾಲಗಾರ ಹಾಗೂ ಶ್ರೀಶಕ್ತಿ ಮಕ್ಕಳ ತೆರೆದ ತಂಗುದಾಣದ ಯೋಜನಾ ಸಂಯೋಜಕ ಪುಟ್ಟಪ್ಪ ಹರವಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಸಾಂಸ್ಥಿಕ ರಕ್ಷಣಾಧಿಕಾರಿ ವಿನಯ ಗುಡಗೂರ ಹಾಗೂ ಚೈತನ್ಯ ಸಹಾಯವಾಣಿ ತಂಡದವರು ಬಾಲಕನನ್ನು ರಕ್ಷಣೆ ಮಾಡಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರು ಪಡಿಸಿದರು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎಸ್.ಎಚ್. ಮಜೀದ್ ಬಾಲಕನಿಗೆ ಆಪ್ತ ಸಮಾಲೋಚನೆ ಮಾಡಿದಾಗ, ಬಾಲಕ ಮನೆ ಬಿಟ್ಟು ಬಂದಿರುವುದು ಗೊತ್ತಾಗಿದೆ. ಈತ ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕು ಅರುಂಡಿ ಗ್ರಾಮದವನು ಎಂಬುದು ಬಾಲಕ ಹೇಳಿಕೆಯಿಂದ ತಿಳಿದಿದೆ. ಬಾಲಕನನ್ನು ಶ್ರೀಶಕ್ತಿ ಮಕ್ಕಳ ತೆರೆದ ತಂಗುದಾಣದಲ್ಲಿ ತಾತ್ಕಾಲಿಕ ಆಶ್ರಯ ಹಾಗೂ ರಕ್ಷಣೆ ನೀಡುವ ವ್ಯವಸ್ಥೆ ಮಾಡಿದ್ದಾರೆ. ಬಾಲಕನ ಪಾಲಕರ ಪತ್ತೆಗಾಗಿ ಮಾಹಿತಿಯನ್ನು ನ್ಯಾಮತಿ ಪೊಲೀಸ್ ಠಾಣೆಗೆ ಹಾಗೂ ದಾವಣಗೆರೆ ಮಕ್ಕಳ ಸಹಾಯವಾಣಿಯ ತಂಡಕ್ಕೆ ಮಾಹಿತಿ ನೀಡಲಾಗಿದೆ.