ವಿಜಯಪುರ: ಡೋಣಿ ನದಿಯ ನಡುಗಡ್ಡೆಯಲ್ಲಿ ನಾಲ್ಕು ದಿನಗಳಿಂದ ಪ್ರವಾಹದಲ್ಲಿ ಸಿಲುಕಿದ್ದ ಏಳು ಜನರನ್ನು ಜಿಲ್ಲಾಡಳಿತ ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾಗಿದೆ.
ತಾಳಿಕೋಟೆ ಪಟ್ಟಣದ ಬಳಿ ಹರಿಯುವ ಡೋಣಿ ನದಿ ನಡುಗಡ್ಡೆಯಲ್ಲಿ ಇದ್ದಿಲು ತಯಾರಿಸಲು ಮಹಾರಾಷ್ಟ್ರ ರಾಜ್ಯದಿಂದ ಬಂದಿರುವ ಐವರು ಮಕ್ಕಳಿರುವ ಏಳು ಜನರ ಕುಟುಂಬವನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.
ನಾಲ್ಕು ದಿನಗಳ ಹಿಂದೆ ಡೋಣಿ ನದಿಯಲ್ಲಿ ಪ್ರವಾಹ ಬಂದರೂ ಈ ಕುಟುಂಬ ಹೊರ ಬಾರದೇ ನಡುಗಡ್ಡೆಯಲ್ಲಿ ನೆಲೆಸಿದ್ದರು. ಗುರುವಾರ ಪ್ರವಾಹ ಏರುತ್ತಲೇ ಸಾಗಿದ್ದರಿಂದ ಸ್ಥಳೀಯ ಅಧಿಕಾರಿಗಳಿಗೆ ಕರೆ ಮಾಡಿ ರಕ್ಷಣೆಗೆ ಮೊರೆ ಇಟ್ಟಿದ್ದರು.
ಗುರುವಾರ ಮಧ್ಯಾಹ್ನದಿಂದಲೇ ರಕ್ಷಣಾ ಕಾರ್ಯ ಆರಂಭಿಸಲಾಗಿತ್ತು. ಆದರೆ ಕಾರ್ಮಿಕರು ಸಿಲುಕಿದ್ದ ನಡುಗಡ್ಡೆ ಒಂದೂವರೆ ಕಿ.ಮೀ. ದುರ್ಗಮ ಪ್ರದೇಶಕ್ಕೆ ಕಾರ್ಯಾಚರಣೆ ಹಂತ ತಲುಪಿದಾಗ ರಾತ್ರಿಯಾಗಿತ್ತು. ಹೀಗಾಗಿ ಕಾರ್ಯಾಚರಣೆ ಸ್ಥಗಿತಗೊಳಿದ್ದ ಜಿಲ್ಲಾಡಳಿತ ಶುಕ್ರವಾರ ಬೆಳಿಗ್ಗೆಯಿಂದಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಿತ್ತು.
ಸಹಾಯಕ ಅಯುಕ್ತ ಬಲರಾಮ ಲಮಾಣಿ, ಅಗ್ನಿಶಾಮಕ ದಳ ಜೆ.ಬಿ.ಶೇಳಂಕರ ನೇತೃತ್ವದ ಅಧಿಕಾರಿಗಳ ತಂಡ ಮಹಾರಾಷ್ಟ್ರದ ಕಾರ್ಮಿಕರ ಕುಟುಂಬವನ್ನು ಪ್ರವಾಹದಿಂದ ಸುರಕ್ಷಿತವಾಗಿ ರಕ್ಷಿಸಲಾಗಿದೆ.