ಪಡುಬಿದ್ರಿ: ಸರಕಾರಿ ಹಿ. ಪ್ರಾ. ಶಾಲೆ, ಜುಮ್ಮಾ ಮಸೀದಿ, ಉರ್ದು ಶಾಲೆ, ಮದ್ರಸ, ಹಿಂದೂ ಶ್ರದ್ಧಾ ಕೇಂದ್ರಗಳು, ಎಸ್‌ಸಿ ಎಸ್‌ಟಿ ವಿದ್ಯಾರ್ಥಿ ನಿಲಯ, ಪ್ರಾ. ಆ. ಕೇಂದ್ರಗಳಿಂದ ಕಡಿಮೆ ಅಂತರದಲ್ಲಿರುವ ಕಟ್ಟಡದಲ್ಲಿ ಹೊಟೇಲು ಪರವಾನಿಗೆಯೊಂದಿಗೆ ಬಾರ್ ವ್ಯವಹಾರ ನಡೆಸಲು ಅಬಕಾರಿ ಇಲಾಖೆ ಪರವಾನಿಗೆಯನ್ನು ನೀಡಿರುವ ನವರಂಗ್ ಬಾರನ್ನು ಸಾರ್ವಜನಿಕ ಹಿತದೃಷ್ಟಿಯಿಂದ ತೆರವುಗೊಳಿಸಬೇಕಾಗಿ ಕರ್ನಾಟಕ ರಕ್ಷಣಾ ವೇದಿಕೆ, ಎಸ್‌ಡಿಪಿಐ, ದಲಿತ ಸಂಘರ್ಷ ಸಮಿತಿಯ ಸಹಿತ ವಿವಿಧ ಸಂಘಟನೆಗಳು ಸೋಮವಾರದಂದು ಪ್ರತಿಭಟನೆಯನ್ನು ನಡೆಸಿದವು. ಕಾರ್ಕಳ ರಸ್ತೆಯಿಂದ ಹೊರಟ ಈ ಸಂಘಟನೆಗಳ ಮೆರವಣಿಗೆಯು ಪಡುಬಿದ್ರಿ ಜುಮ್ಮಾ ಮಸೀದಿ ಎದುರುಗಡೆಯಿಂದ ಪೊಲೀಸ್ ಠಾಣೆಯನ್ನು ದಾಟಿ ಪಡುಬಿದ್ರಿ ಪೇಟೆ ಮೂಲಕ ಗ್ರಾ. ಪಂ. ಆವರಣಕ್ಕೆ ತೆರಳಿತು.
ಈ ಬಾರ್‌ನ ವ್ಯವಹಾರದಲ್ಲಿ ಸ್ವಜನ ಹಿತಾಸಕ್ತಿಯನ್ನು ಹೊಂದಿರುವ ಪಡುಬಿದ್ರಿ ಗ್ರಾ. ಪಂ. ಉಪಾಧ್ಯಕ್ಷ, ಪರವಾನಿಗೆಯನ್ನು ನೀಡಿರುವ ಪಂಚಾಯತ್ ಅಧ್ಯಕ್ಷೆ ದಮಯಂತಿ ವಿ. ಅಮೀನ್ ವಿರುದ್ಧ ಘೋಷಣೆಯನ್ನು ಕೂಗಿ ರಾಜೀನಾಮೆಗೂ ಆಗ್ರಹಿಸಿದ ಪ್ರತಿಭಟನಕಾರರು ಸಾರ್ವಜನಿಕ ವಾತಾವರಣವನ್ನು ಕೆಡಿಸುತ್ತಿರುವ ಬಾರನ್ನು ಅಲ್ಲಿಂದ ವಾರದೊಳಗಾಗಿ ತೆರವುಗೊಳಿಸಲು ಗ್ರಾ. ಪಂ. ಪಿಡಿಒ ಪಂಚಾಕ್ಷರಿ ಸ್ವಾಮಿಯವರನ್ನು ಆಗ್ರಹಿಸಿದರು.
ಈ ಸಂದರ್ಭ ಮನವಿಯನ್ನು ಸ್ವೀಕರಿಸಿದ ಗ್ರಾ. ಪಂ. ಅಧ್ಯಕ್ಷೆ ದಮಯಂತಿ ಈ ಕುರಿತಾಗಿ ಕೂಡಲೇ ಗ್ರಾ. ಪಂ. ಸಭೆಯನ್ನು ಕರೆಯಲಾಗುವುದು. ಮನವಿಯ ಕುರಿತಾದ ಚರ್ಚೆ ನಡೆಸಿ ಗ್ರಾ. ಪಂ. ನಿರ್ಣಯದೊಂದಿಗೆ ಸೂಕ್ತ ಕ್ರಮಕ್ಕೆ ಜಿಲ್ಲಾಡಳಿತ ಹಾಗೂ ಅಬಕಾರಿ ಇಲಾಖೆಗೆ ಮನವಿ ಮಾಡಿಕೊಳ್ಳಲಾಗುವುದೆಂದರು.
ಪಂಚಾಯತ್ ಪರವಾನಿಗೆ ಹೊಟೇಲ್ ವ್ಯವಹಾರಕ್ಕಾಗಿ ನೀಡಲಾಗಿದ್ದು ಗ್ರಾ. ಪಂ. ವ್ಯಾಪ್ತಿಗೆ ಅಬಕಾರಿ ಕಾನೂನು ಬರುವುದಿಲ್ಲವೆಂದು ಅಧ್ಯಕ್ಷೆ ದಮಯಂತಿ ಅಮೀನ್ ತಿಳಿಸಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಅನ್ವರ್ ಅಹ್ಮದ್, ಪಡುಬಿದ್ರಿ ಘಟಕಾಧ್ಯಕ್ಷ ಮಹಮ್ಮದ್ ಆಸೀಫ್, ಎಸ್‌ಡಿಪಿಐ ಕಾಪು ವಿಧಾನಸಭಾ ಕ್ಷೇತ್ರ ಸಮಿತಿ ಮಾಜಿ ಅಧ್ಯಕ್ಷ ಹನೀಫ್ ಮೂಳೂರು, ದಸಂಸ ಪದಾಧಿಕಾರಿ ವಿಠಲ ಮಾಸ್ಟರ್, ಉದ್ಯಮಿ ಅಬ್ದುಲ್ ಮುತ್ತಲೀಬ್, ಎಸ್‌ಡಿಪಿಐ ಪಡುಬಿದ್ರಿ ಸಮಿತಿಯ ಅಧ್ಯಕ್ಷ ಬಿ. ಎಚ್. ಅಬ್ದುಲ್ ರಹಿಮಾನ್ ಮಾತನಾಡಿದರು.
ಪಂಚಾಯತ್ ಅಧ್ಯಕ್ಷರ ವಿರುದ್ಧ “ಡೀಲ್’ ಆರೋಪ
ಪ್ರತಿಭಟನೆಯ ವೇಳೆ ಸಾರ್ವಜನಿಕವಾಗಿ ಗ್ರಾ. ಪಂ. ಅಧ್ಯಕ್ಷರ ವಿರುದ್ಧ ನೇರ ಆರೋಪವೊಂದನ್ನು ಮಾಡಿದ ದಸಂಸ ನಾಯಕ ಲೋಕೇಶ್ ಅಂಚನ್ ಕಂಚಿನಡ್ಕ, ಅಧ್ಯಕ್ಷೆ ದಮಯಂತಿ ಅಮೀನ್ ಮನೆಯಲ್ಲೇ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ವಿ. ಅಮೀನ್ ಸಮ್ಮುಖದಲ್ಲಿ ಬಾರ್ ಕುರಿತಾಗಿ ತನ್ನೊಂದಿಗೆ ಡೀಲ್ ಕುದುರಿಸಲು ಯತ್ನಿಸಿದ್ದರು. ತನ್ನಲ್ಲಿ ಅದರ ವೀಡಿಯೋ ರೆಕಾರ್ಡಿಂಗ್ ಕೂಡಾ ಇರುವುದಾಗಿ ಆರೋಪಿಸಿದರು.
ಆರೋಪವನ್ನು ಅಲ್ಲಗೆಳೆದ ಅಧ್ಯಕ್ಷೆ
ಪಡುಬಿದ್ರಿ ಗ್ರಾ. ಪಂ. ಅಧ್ಯಕ್ಷೆ ದಮಯಂತಿ ಅಮೀನ್ ಈ ಆರೋಪವನ್ನು ಅಲ್ಲಗೆಳೆದು ತನ್ನ ಪತಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರು. ಪುತ್ರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರು. ಅವರನ್ನು ಕಾಣಲು ತಮ್ಮ ಮನೆಗೆ ಅನೇಕರು ಬರುತ್ತಿರುತ್ತಾರೆ.ಹಾಗೆಯೇ ಮನೆಗೆ ಬಂದಿರಬಹುದಾದ ಲೋಕೇಶ್ ಅಂಚನ್‌ರಲ್ಲಿ ತಾನು ಬಾರ್ ವಿಚಾರವಾಗಿ ಮಾತಾಡಿಲ್ಲ. ಡೀಲ್ ಬಗೆಗೆ ತನಗೇನೂ ತಿಳಿಯದು ಎಂದು ಹೇಳಿದರು.