ಸೋಮವಾರಪೇಟೆ: ಇಲ್ಲಿಗೆ ಸಮೀಪದ ಮಲ್ಲಳ್ಳಿ ಜಲಪಾತದ “ಮರಣ ಬಾವಿ’ ಹೊಂಡಕ್ಕೆ ಇಳಿದು ಅಪಾಯಕ್ಕೆ ಸಿಲುಕಿದ್ದ ಸ್ನೇಹಿತರನ್ನು ರಕ್ಷಿಸಲು ಮುಂದಾದ ಬೆಂಗಳೂರಿನ ಯುವ ಇಂಜಿನಿಯರ್ ಪ್ರಾಣ ಕಳೆದುಕೊಂಡ ಘಟನೆ ಭಾನುವಾರ ಸಂಭವಿಸಿದೆ.
ಬೆಂಗಳೂರಿನ ಎಕ್ಸೆಂಚರ್ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದ ಸ್ಕಂದ (25) ಮೃತ ಯುವಕ. ಸ್ಕಂದ ಸಹಿತ ಸೇರಿದಂತೆ 11 ಮಂದಿ ಮಲ್ಲಳ್ಳಿ ಜಲಪಾತ ವೀಕ್ಷಣೆಗೆ ಬೆಂಗಳೂರಿನಿಂದ ಆಗಮಿಸಿದ್ದರು. 11 ಗಂಟೆ ಸುಮಾರಿಗೆ ಜಲಪಾತದ ತಳಭಾಗದಲ್ಲಿರುವ “ಮರಣ ಬಾವಿ’ ಎಂದೇ ಕರೆಯುವ ಹೊಂಡದ ಸಮೀಪ ತೆರಳಿದ್ದಾರೆ.
ಈ ವೇಳೆ ಬಿಹಾರ ಮೂಲದ, ಶರ್ಮಾ ಬಿಹಾರ್, ನಿಲೇಶ್ ಮತ್ತು ಅಂಕಿತ್ ಚೌದರಿ ಎಂಬುವವರು ಹೊಂಡಕ್ಕಿಳಿದು ಅಪಾಯಕ್ಕೆ ಸಿಲುಕಿದ್ದಾರೆ. ಅವರ ಬೊಬ್ಬೆ ಕೇಳಿ ಸ್ಕಂದ, ನೀರಿಗೆ ಧುಮುಕಿ, ಅಪಾಯದಲ್ಲಿದ್ದ ಮೂವರನ್ನೂ ದಡ ಸೇರಿಸಿದ್ದಾರೆ. ಆದರೆ, ತಾವೇ ದಡ ಸೇರಲಾಗದೆ ನೀರಿನಲ್ಲಿ ಮುಳುಗಿ ಮೃತಪಟ್ಟರು.
6 ತಿಂಗಳ ಹಿಂದಷ್ಟೇ ಕೆಲಸಕ್ಕೆ ಸೇರಿದ್ದ: ಸ್ಕಂದ ಅವರು ಮೈಸೂರಿನ ವಿವೇಕಾನಂದ ನಗರದ ಮಧುವದನ ಲೇಔಟ್‌ನ ನಿವಾಸಿ, ಮೈಸೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಶಂಕರ್ ಹಾಗೂ ರೇವತಿ ದಂಪತಿಯ ಏಕೈಕ ಪುತ್ರ.
ಅವರು ಆರು ತಿಂಗಳಿನಿಂದ ಎಕ್ಸೆಂಚರ್ ಕಂಪನಿಯಲ್ಲಿ ಕೆಲಸದಲ್ಲಿದ್ದರು. ಪುತ್ರನನ್ನು ಕಳೆದುಕೊಂಡ ಪೋಷಕರ ಅಕ್ರಂದನ ಮುಗಿಲು ಮುಟ್ಟಿತು. ಶವಪರೀಕ್ಷೆ ಬಳಿಕ ಮೃತದೇಹವನ್ನು ಪೋಷಕರಿಗೆ ಒಪ್ಪಿಸಲಾಯಿತು. ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.