Advertisement

ಬೆಂಕಿ ಆರಿಸಲೂ ಬಿಡಲಿಲ್ಲ; ಭಿರ್‌ಭುಮ್‌ ಘಟನೆಯ ಕರಾಳತೆ ಬಯಲು

01:24 AM Mar 24, 2022 | Team Udayavani |

ಹೊಸದಿಲ್ಲಿ/ಕೋಲ್ಕತಾ: ಪಶ್ಚಿಮ ಬಂಗಾಲದ ಭಿರ್‌ಭುಮ್‌ನ ಬೋಗತಿ ಗ್ರಾಮದಲ್ಲಿ ಟಿಎಂಸಿ ಮುಖಂಡನ ಹತ್ಯೆಗೆ ಪ್ರತೀಕಾರವಾಗಿ ಎಂಟು ಮಂದಿಯನ್ನು ಬಲಿಪಡೆದ ಘಟನೆಯ ಮತ್ತೊಂದು ಕರಾಳ ಅಂಶ ಬಯಲಾಗಿದೆ. ಪ್ರತ್ಯಕ್ಷದರ್ಶಿ­ಯೊಬ್ಬರು ನೀಡಿದ ಮಾಹಿತಿ ಪ್ರಕಾರ ಅಗ್ನಿಶಾಮಕ ದಳದ ಸಿಬಂದಿಗೆ ಸ್ಥಳಕ್ಕೆ ಪ್ರವೇಶ ಮಾಡಲೂ ಕಿಡಿಗೇಡಿಗಳು ಅವಕಾಶ ಕೊಡಲಿಲ್ಲ ಎಂದು ಆರೋಪಿಸಿದ್ದಾರೆ.

Advertisement

ಅಸುನೀಗಿದ ಬಾಡು ಶೇಖ್‌ನ ಸೋನಾ ಶೇಖ್‌ ಎಂಬವರ ಮನೆಗೆ ಹೊರಗಿನಿಂದ ಬಾಗಿಲು ಹಾಕಿ ಬೆಂಕಿ ಹಚ್ಚಲಾಗಿತ್ತು. ಮನೆಗೆ ಬೆಂಕಿ ತಗಲಿದ ಕೂಡಲೇ ಅಲ್ಲಿದ್ದ ಅಡುಗೆ ಅನಿಲ ಸಿಲಿಂಡರ್‌ ಸ್ಫೋಟಗೊಂ­ಡಿತು. ಸುದ್ದಿ ತಿಳಿದ ಕೂಡಲೇ ಅಗ್ನಿಶಾಮಕ ದಳದ ಸಿಬಂದಿ ಆಗಮಿಸಿದರೂ ಬೆಂಕಿ ನಂದಿಸಲು ಅವಕಾಶವನ್ನೇ ಕಿಡಿಗೇಡಿಗಳು ಕೊಡಲಿಲ್ಲ ಎಂದು ಪ್ರತ್ಯಕ್ಷದರ್ಶಿಯೊಬ್ಬರು “ಇಂಡಿಯಾ ಟುಡೇ’ ಸುದ್ದಿ ವಾಹಿನಿಗೆ ತಿಳಿಸಿದ್ದಾರೆ. ಮನೆಯೊಳಗೆ ಇದ್ದವರು ನೋವಿನಿಂದ ಚೀರಾಡುತ್ತಿದ್ದದ್ದು ಕೇಳಿಸುತ್ತಿತ್ತು ಎಂದರು.

ಮೆನಿ ಬೀಬಿ ಎಂಬವರನ್ನೂ ಕುಟುಂಬ ಸದಸ್ಯರ ಸಹಿತ ಸ್ಥಳ ತೊರೆಯುವಂತೆ ಕೃತ್ಯಕ್ಕೆ ಕಾರಣರಾದವರು ಬೆದರಿಸಿದ್ದರು. ಹೀಗಾಗಿ ಅವರೂ ಬೇರೆ ಸ್ಥಳಕ್ಕೆ ತೆರಳಿ ವಾಸ ಮಾಡುತ್ತಿರುವ ಬಗ್ಗೆಯೂ ಸುದ್ದಿವಾಹಿನಿಗೆ ತಿಳಿಸಿದ್ದಾರೆ. ಘಟನೆಗೆ ಪೆಟ್ರೋಲ್‌ ಬಾಂಬ್‌ ಬಳಕೆ ಮಾಡಲಾಗಿತ್ತು.

22ಕ್ಕೆ ಏರಿಕೆ: ಘಟನೆಗೆ ಸಂಬಂಧಿಸಿದಂತೆ ಇದುವರೆಗೆ 22 ಮಂದಿಯನ್ನು ಬಂಧಿಸಿ­ದ್ದಾರೆ. ಆದರೆ ಅವರ ಹೆಸರುಗಳನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಬಂಧಿತ­ರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿಯೋಗಕ್ಕೆ ತಡೆ: ಭಿರ್‌ಭುಮ್‌ನಲ್ಲಿ 8 ಮಂದಿ ಸಾವಿನ ಬಗ್ಗೆ ಮಾಹಿತಿ ಸಂಗ್ರಹಿಸಲು ಸ್ಥಳಕ್ಕೆ ತೆರಳಿದ್ದ ಬಿಜೆಪಿ ಶಾಸಕ ಸುವೇಂದು ಅಧಿಕಾರಿ ನೇತೃತ್ವದ ತಂಡಕ್ಕೆ ಬೋಗುತಿ ಗ್ರಾಮದ ಹೊರವಲಯದಲ್ಲಿ ತಡೆ ನೀಡ­ಲಾಗಿದೆ. ಘಟನೆಯ ಬಗ್ಗೆ ಸಿಬಿಐ ಅಥವಾ ಎನ್‌ಐಎ ತನಿಖೆಯೇ ನಡೆಯಬೇಕು ಎಂದು ಅಧಿಕಾರಿ ಒತ್ತಾಯಿಸಿದ್ದಾರೆ.

Advertisement

ಇದನ್ನೂ ಓದಿ:ಜೇಮ್ಸ್ ಸಿನಿಮಾ ಪ್ರದರ್ಶನಕ್ಕೆ ಯಾವುದೇ ಅಡ್ಡಿಯಿಲ್ಲ :  ಬೊಮ್ಮಾಯಿ

ಮಾದರಿ ಸಂಗ್ರಹಕ್ಕೆ ಸೂಚನೆ
ಬೋಗುತಿ ಗ್ರಾಮದಲ್ಲಿನ ಘಟನೆಯ ಬಗ್ಗೆ ಕಲ್ಕತ್ತಾ ಹೈಕೋರ್ಟ್‌ ಆಘಾತ ವ್ಯಕ್ತಪಡಿಸಿದೆ. ಈ ಬಗ್ಗೆ ಸ್ವಯಂ ಪ್ರೇರಿತವಾಗಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಕಾಶ್‌ ಶ್ರಿವಾಸ್ತವ ನೇತೃತ್ವದ ನ್ಯಾಯಪೀಠ ಹೊಸದಿಲ್ಲಿಯಲ್ಲಿರುವ ಕೇಂದ್ರೀಯ ವಿಧಿವಿಜ್ಞಾನ ಪ್ರಯೋಗಾಲಯದ ಹಿರಿಯ ತಜ್ಞರು ಸ್ಥಳಕ್ಕೆ ಭೇಟಿ ನೀಡಿ, ಮಾದರಿ ಸಂಗ್ರಹಿಸಲು ಸೂಚನೆ ನೀಡಿದೆ. ರಾಜ್ಯ ಸರಕಾರ ಕೂಡ ಗುರುವಾರದ ಒಳಗಾಗಿ ಕೇಸ್‌ ಡೈರಿ ಮತ್ತು ಇತರ ದಾಖಲೆಗಳನ್ನು ಹಾಜರುಪಡಿಸುವಂತೆ ಸೂಚಿಸಿದೆ.

ಹೀನ ಘಟನೆ ಎಂದ ಪ್ರಧಾನಿ
ಭಿರ್‌ಭುಮ್‌ ಜಿಲ್ಲೆಯಲ್ಲಿ ಎಂಟು ಮಂದಿಯ ಹತ್ಯೆ ಅತ್ಯಂತ ಹೀನ ಘಟನೆ. ರಾಜ್ಯ ಸರಕಾರ ತಪ್ಪಿತಸ್ಥರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಿದೆ ಎಂಬ ವಿಶ್ವಾಸವನ್ನು ಪ್ರಧಾನಿ ಮೋದಿ ಅವರು ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮ­ವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ಭಿರ್‌ಭುಮ್‌ ಜಿಲ್ಲೆಯಲ್ಲಿ ಅಸುನೀಗಿ ದವರಿಗೆ ಶ್ರದ್ಧಾಂಜಲಿ ಅರ್ಪಿಸುತ್ತೇನೆ. ಪಶ್ಚಿಮ ಬಂಗಾಲದ ಜನರು ಇಂಥ ಘಟನೆಗಳಿಗೆ ಆಸ್ಪದ ನೀಡಬಾರದು. ರಾಜ್ಯ ಸರಕಾರ ತಪ್ಪಿತಸ್ಥರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಿದೆ ಎಂದು ಭಾವಿಸುತ್ತೇನೆ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next