Advertisement

ಮತ್ಸ್ಯತಟಾಕದಲ್ಲಿ ನೀರು ಚಿಮ್ಮಿಸಿ ದೇವರ ಮೀನುಗಳ ರಕ್ಷಣೆ

11:55 PM Feb 24, 2020 | mahesh |

ಅರಂತೋಡು: ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇಗುಲದ ಮತ್ಸ್ಯ ತೀರ್ಥ ಹೊಳೆಯಲ್ಲಿ ನೀರಿನ ಹರಿವು ಇಳಿಮುಖಗೊಂಡ ಹಿನ್ನೆಲೆಯಲ್ಲಿ ಈಗ ದೇವರ (ಮಹಷೀರ್‌) ಮೀನುಗಳನ್ನು ರಕ್ಷಿಸಲು ಮತ್ಸ್ಯ ತಟಾಕದಲ್ಲಿ ನೀರು ಸಂಗ್ರಹಿಸಲಾಗುತ್ತಿದೆ.

Advertisement

ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಪಕ್ಕದ ಮತ್ಸ್ಯ ತೀರ್ಥ ಹೊಳೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ದೇವರ ಮೀನುಗಳಿವೆ. ಪ್ರತಿ ವರ್ಷ ಬೇಸಗೆ ಕಾಲದಲ್ಲಿ ಹೊಳೆಯಲ್ಲಿ ನೀರಿನ ಹರಿವು ಕಡಿಮೆಯಾಗಿ ಮೀನುಗಳ ಜೀವಕ್ಕೆ ಅಪಾಯ ಉಂಟಾಗುತ್ತದೆ. ಈ ಬಾರಿಯೂ ಮೀನುಗಳಿಗೆ ಸಾಕಷ್ಟು ನೀರಿನ ಕೊರತೆ ಎದುರಾಗುವ ಆತಂಕ ಸೃಷ್ಟಿಯಾಗಿದೆ. ಇದಕ್ಕೆ ದೇಗುಲದ ವತಿಯಿಂದ ಮತ್ಸ್ಯತಟಾಕದಲ್ಲಿ ನೀರು ಸಂಗ್ರಹಿಸಿ ನೀರಿನ ಕೊರತೆಯಾಗದಂತೆ ನಿಗಾ ವಹಿಸಲಾಗುತ್ತಿದೆ.

ಚರ್ಮ ರೋಗ ನಿವಾರಣೆ
ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯ ಅತೀ ಪುರಾತನವಾಗಿದ್ದು, ಇದಕ್ಕೆ ಸಂಬಂಧಿಸಿ ಸಾಕಷ್ಟು ಐತಿಹ್ಯಗಳಿವೆ. ಪಾಂಡವರ ಕಾಲದ ಕಿರಾತಾರ್ಜುನ ಯುದ್ಧ ನಡೆದಿದ್ದು ಇಲ್ಲೇ ಎಂಬ ಉಲ್ಲೇಖವಿದೆ. ವಿಷ್ಣುವು ಮತ್ಸ್ಯ ರೂಪ ತಾಳಿ ಬಂದ ಕಾರಣಕ್ಕೆ ಇದಕ್ಕೆ “ಮತ್ಸ್ಯ ತಟಾಕ’ ಎನ್ನುವ ಹೆಸರು ಬಂದಿದೆ. ಇಲ್ಲಿ ಸಾವಿರಾರು ದೇವರ ಮೀನುಗಳಿವೆ. ಮೀನುಗಳಿಗೆ ಅಕ್ಕಿ ಹಾಕಿದರೆ ಚರ್ಮಕ್ಕೆ ಸಂಬಂಧಪಟ್ಟ ರೋಗಗಳು ವಾಸಿಯಾಗುತ್ತವೆ ಎನ್ನುವುದು ಭಕ್ತರ ನಂಬಿಕೆ. ಈ ಹಿನ್ನೆಲೆಯಲ್ಲಿ ಜಾತ್ರೆ ಹಾಗೂ ಇತರ ಸಂದರ್ಭದಲ್ಲಿ ಮೀನುಗಳಿಗೆ

ಆಹಾರ ನೀಡಲು ಇಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅಕ್ಕಿಯನ್ನು ಭಕ್ತರು ಸಮರ್ಪಿಸುತ್ತಾರೆ. ಮತ್ಸé ತಟಾಕದ ಪಕ್ಕದಲ್ಲಿ ಹೊಳೆಯಲ್ಲಿ ನೀರಿನ ಲಭ್ಯತೆ ಕಡಿಮೆ ಆದಾಗ ದೇವರ ಮೀನುಗಳಿಗೆ ಆಹಾರ ಹಾಕುವುದನ್ನು ನಿಷೇಧಿಸಲಾಗುತ್ತದೆ. ನೀರಿನ ಪ್ರಮಾಣ ನೋಡಿಕೊಂಡು ದೇವಾಲಯದ ವತಿಯಿಂದಲೇ ಮೀನುಗಳಿಗೆ ಆಹಾರ ನೀಡಲಾಗುತ್ತದೆ. ಪೈಪ್‌ ಮೂಲಕ ಹೊಳೆಗೆ ನೀರು ಸುಮಾರು 2.5 ಕಿ.ಮೀ. ದೂರದ ದೇವರಗುಂಡಿ ಗುಡ್ಡದಿಂದ ಪೈಪ್‌ ಮೂಲಕ ನೀರು ತಂದು ಹೊಳೆಗೆ ಬಿಡುವ ಯೋಜನೆ ಕೆಲವು ವರ್ಷಗಳಿಂದ ನಡೆಯುತ್ತಿದೆ. ಇದರಿಂದ ಮೀನುಗಳಿಗೆ ಸ್ವಲ್ಪ ಮಟ್ಟಿನ ನೀರಿನ ಕೊರತೆ ನೀಗುತ್ತದೆ. ಪೈಪ್‌ನಲ್ಲಿ ದೂರದ ಹೊಳೆಯಿಂದ ನೀರು ಬಂದು ಬೀಳುತ್ತಿದ್ದು, ಮೀನು ಗುಂಡಿಯಲ್ಲಿ ನೀರು ಸಾಕಷ್ಟು ಪ್ರಮಾಣದಲ್ಲಿ ಶೇಖರಣೆಗೊಂಡು ಮೀನುಗಳು ಉಲ್ಲಾಸಭರಿತವಾಗಿ ಓಡಾಡುತ್ತಿವೆ.

ಚಿಮ್ಮುವ ನೀರು
ದೂರದ ಗುಡ್ಡದಿಂದ ಬರುವ ನೀರಿಗೆ ಅಳವಡಿಸಿರುವ ಪೈಪ್‌ಗ್ಳಲ್ಲಿ ರಂಧ್ರಗಳನ್ನು ಮಾಡಿ ಆ ಮೂಲಕ ನೀರನ್ನು ಚಿಮ್ಮಿಸಲಾಗುತ್ತಿದೆ. ಚಿಮ್ಮುವ ನೀರಿನಲ್ಲಿ ಮೀನುಗಳು ಆಡುವುದನ್ನು ನೋಡುವುದು ಭಕ್ತರಿಗೂ ಆನಂದ ನೀಡುತ್ತದೆ.

Advertisement

ಕೊರತೆಯಾಗದಂತೆ ಕ್ರಮ
ದೇವರ ಮೀನು ಗುಂಡಿಗೆಯಲ್ಲಿ ನೀರಿನ ಕೊರತೆ ಎದುರಾಗದಂತೆ ಈ ವರ್ಷವೂ ಸುಮಾರು ಎರಡೂವರೆ ಕಿ.ಮೀ. ದೂರದ ದೇವರ ಗುಂಡಿಯಿಂದ ಪೈಪ್‌ ಮೂಲಕ ನೀರು ಹರಿಸಿ ಮೀನಿನ ಗುಂಡಿಗೆ ಚಿಮ್ಮಿಸಲಾಗುತ್ತಿದೆ. ದೇವರ ಮೀನುಗಳಿಗೆ ನೀರಿನ ಕೊರತೆ ಆಗದಂತೆ ಮುನ್ನೆಚ್ಚರ ವಹಿಸಿಕೊಳ್ಳುತ್ತಿದ್ದೇವೆ.
– ಆನಂದ ಕಲ್ಲಗದ್ದೆ, ದೇವಸ್ಥಾನದ ವ್ಯವಸ್ಥಾಪಕರು

ತೇಜೇಶ್ವರ್‌ ಕುಂದಲ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next