ಮಾಗಡಿ: ಅರಣ್ಯಾಧಿಕಾರಿಗಳು ನರಭಕ್ಷಕ ಚಿರತೆ ಹಿಡಿದು ಗ್ರಾಮೀಣ ಜನರನ್ನು ಕಾಡು ಪ್ರಾಣಿಗಳಿಂದ ರಕ್ಷಿಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದರು. ಇತ್ತೀಚಗೆ ನರಭಕ್ಷಕ ಚಿರತೆ ದಾಳಿಗೆ ಬಲಿಯಾದ ಕೊತ್ತಗಾನಹಳ್ಳಿ ಗ್ರಾಮದ ಗಂಗಮ್ಮರ ಮನೆಗೆ ಭೇಟಿ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ ಇತರರು ಕುಟುಂಬಕ್ಕೆ ಸಾಂತ್ವನ ಹೇಳಿ ಕಾಂಗ್ರೆಸ್‌ನಿಂದ 1 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿ ಮಾತನಾಡಿದರು.
ಕಾಡು ಪ್ರಾಣಿಗಳಿಗೆ ಕಾಡಿನಲ್ಲಿ ಆಹಾರ ಸಿಗದೆ ನಾಡಿನತ್ತ ನುಗ್ಗುತ್ತಿವೆ. ಅರಣ್ಯಾಧಿಕಾರಿಗಳು ಕಾಡು ಬೆಳಸಿದರೆ ಸಾಲದು, ಕಾಡಿನ ನಡುವೆ ನೀರಿನ ಹೊಂಡ ನಿರ್ಮಿಸಬೇಕು. ಅಗತ್ಯ ಹಣ್ಣುಗಳ ಗಿಡ ಬೆಳೆಸಬೇಕು. ಕಾಡಿನ ಸುತ್ತಲು ಸೋಲಾರ್ ತಂತಿ ಬೇಲಿ ಅಳವಡಿಸ ಬೇಕು. ಕಾಡಂಚಿನ ವಾಸಿಗಳಿಗೆ ಕಾಡು ಪ್ರಾಣಿಗಳ ಉಪಟಳ ಕುರಿತು ಎಚ್ಚರಿಕೆ ಮೂಲಕ ಜನಜಾಗೃತಿ ಗೊಳಿಸಬೇಕು.
ಅಲ್ಲಲ್ಲಿ ಕಾಡು ಪ್ರಾಣಿಗಳಿರುವ ಬಗ್ಗೆ ಫಲಕ ಅಳವಡಿಸಬೇಕು ಎಂದರು. ಗ್ರಾಮೀಣ ಜನರು ನಮ್ಮ ಹೊಲಗದ್ದೆಗಳಿಗೆ ತೋಟ ಗಳಿಗೆ ತೆರಳುವಾಗ ಕೈಯಲ್ಲಿ ಆಯುಧ ಹಿಡಿದುಕೊಂಡು ತೆರಳಬೇಕು. ತಮ್ಮ ಮಕ್ಕಳು, ಮಕ್ಕಳಂತೆ ಸಾಕು ಪ್ರಾಣಿಗಳ ಬಗ್ಗೆ ಎಚ್ಚರಿಕೆ ಇರಬೇಕು. ಬೇಸಿಗೆ ಕಾಲ ಎಂದು ಮನೆ ಹೊರಗಡೆ ಮಲಗುವುದು ಬೇಡ. ರಾತ್ರಿ ವೇಳೆ ನೀರು ಹಾಯಿಸುವ ನೆಪದಲ್ಲಿ ತೋಟಗಳಿಗೂ ತೆರಳಬಾರದು. ಅಗತ್ಯವಿದ್ದರೆ ಆಯುಧದ ಜೊತೆಗೆ ತೆರಳಿ ಜಾಗೃತೆಯಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಎಂಎಲ್‌ಸಿ ಎಚ್.ಎಂ.ರೇವಣ್ಣ, ಮಾಜಿ ಶಾಸಕ ಎಚ್ .ಸಿ.ಬಾಲಕೃಷ್ಣ, ಗಾಣಕಲ್ ನಟರಾಜ್, ಪಿಕಾರ್ಡ್ ಬ್ಯಾಂಕ್ ಎನ್.ಗಂಗರಾಜು, ಎಚ್.ಶಿವಕುಮಾರ್, ಜಿಪಂ ಮಾಜಿ ಸದಸ್ಯ ಸಿ.ಆರ್.ಗೌಡ, ರಂಗಸ್ವಾಮಿ, ಜೆ.ಪಿ. ಚಂದ್ರೇಗೌಡ, ಎಂ.ಕೆ.ಧನಂಜಯ, ನರಸಿಂಹ ಮೂರ್ತಿ, ತಾಲೂಕು ಟಾಸ್ಕ್ ಪೋರ್ಸ್ ಕಮಿಟಿ ಅಧ್ಯಕ್ಷ ವಿಜಯಕುಮಾರ್, ಪುರುಷೋತ್ತಮ್ ಇದ್ದರು.