Advertisement

ವೈಯಕ್ತಿಕ ಸುರಕ್ಷಾ ಸಾಧನಗಳ ಪೂರೈಕೆಗೆ ಆಗ್ರಹಿಸಿ ಭಾರತೀಯ ಮೂಲದ ಗರ್ಭಿಣಿ ವೈದ್ಯೆಯ ಪ್ರತಿಭಟನೆ

09:01 AM Apr 23, 2020 | Hari Prasad |

ಲಂಡನ್: ಯನೈಟೆಡ್‌ ಕಿಂಗ್‌ಡಮ್‌ನ ರಾಷ್ಟ್ರೀಯ ಆರೋಗ್ಯ ಸೇವಾ ಸಿಬಂದಿಗೆ ಸರ್ಜಿಕಲ್‌ ಉಡುಪುಗಳು ಸೇರಿದಂತೆ ವೈಯಕ್ತಿಕ ಸುರಕ್ಷಾ ಸಾಧನಗಳ ಕೊರತೆಯಿರುವುದನ್ನು ಖಂಡಿಸಿ ಭಾರತೀಯ ಮೂಲದ ಗರ್ಭಿಣಿ ವೈದ್ಯೆ ಬ್ರಿಟನ್‌ ಪ್ರಧಾನಮಂತ್ರಿ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

Advertisement

6 ತಿಂಗಳ ಗರ್ಭಿಣಿಯಾಗಿರುವ ಡಾ| ಮೀನಲ್‌ ವಿಜ್‌ ಅವರೇ ಪ್ರತಿಭಟನೆ ನಡೆಸಿದ ವೈದ್ಯೆ. ಆಸ್ಪತ್ರೆಯ ಉಡುಗೆಯನ್ನು ತೊಟ್ಟು, ಸರ್ಜಿಕಲ್‌ ಮಾಸ್ಕ್ ಧರಿಸಿದ್ದ ಅವರು, ಆರೋಗ್ಯಸೇವಾ ಸಿಬಂದಿಯನ್ನು ರಕ್ಷಿಸಿ ಎಂಬ ಫ‌ಲಕವನ್ನು ಹಿಡಿದು ಪ್ರಧಾನಿ ಕಾರ್ಯಾಲಯವಾದ ಡೌನಿಂಗ್‌ ಸ್ಟ್ರೀಟ್‌ ನ ಗೇಟಿನ ಮುಂದೆ ನಿಂತು ಪ್ರತಿಭಟನೆ ನಡೆಸಿದ್ದಾರೆ.

ಸರಿಯಾದ ಸುರಕ್ಷಾ ಪರಿಕರಗಳಿಲ್ಲದೇ ಈಗಾಗಲೇ ಇಂಗ್ಲಂಡ್ ನಲ್ಲಿ ಸಾವಿಗೀಡಾಗಿರುವ ಆರೋಗ್ಯ ಯೋಧರ ಸಂಖ್ಯೆ 100ಕ್ಕೆ ತಲುಪಿದೆ. ಒಂದುವೇಳೆ ಸರಿಯಾದ ವೈಯಕ್ತಿಕ ಸುರಕ್ಷಾ ಸಾಧನಗಳು ಲಭ್ಯವಿದ್ದ ಪಕ್ಷದಲ್ಲಿ ಈ ಸಾವಿನ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆಗೊಳಿಸಬಹುದಿತ್ತು ಎಂಬುದು ವಿಜ್ ಅವರ ವಾದವಾಗಿದೆ.


‘ಕೋವಿಡ್ ವೈರಸ್ ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿರುವ ಆರೋಗ್ಯ ಯೋಧರ ಸಮುದಾಯದಲ್ಲಿ ನಡೆಯುತ್ತಿರುವ ಸಾವುಗಳು ಸಮಂಜಸವಾದುದಲ್ಲ ಎನ್ನುವುದನ್ನು ನಾನು ಸರಕಾರಕ್ಕೆ ಮತ್ತು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ನಾನು ಈ ರಿತಿಯಾಗಿ ಬೀದಿಗೆ ಬರಬೇಕಾಯಿತು.

ಆರೋಗ್ಯ ಯೋಧರ ಸಾವು ಇದೀಗ ಸಹಜವಾಗಿ ಹೋಗಿದೆ ಆದರೆ ಇದು ಖಂಡಿತಾ ಸಹಜವಾಗಿ ಪರಿಗಣಿಸುವ ವಿಚಾರವಲ್ಲ. ಇದನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಬೇಕಾಗಿದೆ’ ಎಂದು ಡಾ. ಮೀನಲ್ ವಿಜ್ ಅವರು ತನ್ನ ಪ್ರತಿಭಟನೆಯ ಉದ್ದೇಶವನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.

Advertisement

‘ಈ ವಿಚಾರದಲ್ಲಿ ನಮ್ಮನ್ನೆಲ್ಲಾ ಮೌನವಾಗಿಸಲಾಗಿದೆ. ನಮ್ಮ ಆಸ್ಪತ್ರೆಗಳ ಆಡಳಿತ ಮಂಡಳಿಗಳೇ ನಮಗೆ ಮೌನ ವಹಿಸುವಂತೆ ಒತ್ತಡ ಹಾಕುತ್ತಿವೆ. ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ಹೆಚ್ಚಿನವರು ತಮ್ಮ ಸುರಕ್ಷತೆಯ ಕುರಿತಾಗಿ ಭಯಗೊಂಡಿದ್ದಾರೆ, ಆದರೆ ಇದೇ ಸಂದರ್ಭದಲ್ಲಿ ಅವರಿಗೆ ತಾವು ಕೆಲಸ ಕಳೆದುಕೊಳ್ಳುವ ಕುರಿತಾಗಿಯೂ ಭಯ ಆವರಿಸಿದೆ. ಕೆಲವರಿ ವಿಸಾ ಕಳೆದುಕೊಳ್ಳುವ ಭೀತಿಯಲ್ಲಿದ್ದರೆ ಇನ್ನು ಕೆಲವರ ಕುಟುಂಬಗಳು ಬೀದಿಗೆ ಬರಬಹುದು ಎಂದು ಹೆದರಿದ್ದಾರೆ’ ಎಂದು ಡಾ. ವಿಜ್ ಅವರು ಪ್ರಸ್ತುತ ಪರಿಸ್ಥಿತಿಯನ್ನು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next