ಹಾವೇರಿ: ಹೆಣ್ಣು ಮಗುವಿನ ರಕ್ಷಣೆ ಬಗ್ಗೆ ಕಾನೂನಿನ ಅರಿವು ಎಲ್ಲ ಮಹಿಳೆಯರಿಗೆ ಅಗತ್ಯವಾಗಿದೆ. ಹೆಣ್ಣು ಸಮಾಜದ ಕಣ್ಣು, ವೇದಕಾಲದಿಂದಲೂ ಹೆಣ್ಣನ್ನು ಗೌರವ ಹಾಗೂ ಪೂಜ್ಯನೀಯ ಭಾವನೆಯಿಂದ ನೋಡಲಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಹಿಳೆ ಮತ್ತು ಮಕ್ಕಳ ಮೇಲೆ ಶೋಷಣೆ ನಡೆಯುತ್ತಿರುವುದು ದುರ್ದೈವದ ಸಂಗತಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಿ.ವೈ. ಶೆಟ್ಟಪ್ಪನವರ ಹೇಳಿದರು.
ನಗರದ ಜಿಲ್ಲಾ ಬಾಲಭವನದಲ್ಲಿ ಬೆಂಗಳೂರು ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ಹಾವೇರಿ ಹೋಬಳಿ ಮಟ್ಟದ ಅಂಗನವಾಡಿ ಕಾರ್ಯಕರ್ತೆಯರಿಗೆ ಏರ್ಪಡಿಸಿದ್ದ ಪೋಕ್ಸೋ ಕಾಯ್ದೆ-2012 ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ-2006 ಕುರಿತು ಸಾಮರ್ಥ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ಮಹಿಳೆಗೆ ಕಾನೂನಿನ ಅರಿವು ಮೂಡಿದಲ್ಲಿ ಹೆಣ್ಣು ಮಗುವಿನ ರಕ್ಷಣೆ ಮಾಡಲು ಸಾಧ್ಯ. ಮಹಿಳೆ ಪ್ರಸವ ಪೂರ್ವಲಿಂಗ ಪತ್ತೆ ಅಪರಾಧವಾಗಿದೆ. ಹೆಣ್ಣು ಭ್ರೂಣ ಹತ್ಯೆಗೆ ಸಮಾಜ ಕಡಿವಾಣ ಹಾಕದಿದಲ್ಲಿ ಮುಂದೊಂದು ದಿನ ಹೆಣ್ಣಿಗಾಗಿ ಗಂಡು ಪರದಾಡುವ ಸ್ಥಿತಿ ನಿರ್ಮಾಣವಾಗಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಲ್ಲಿಕಾರ್ಜುನ ಮಠದ ಮಾತನಾಡಿ, ಹೆಣ್ಣು ಮಕ್ಕಳ ರಕ್ಷಣೆಗಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ವಿವಿಧ ಇಲಾಖೆಗಳು 24×7 ನಿಮ್ಮ ಜೊತೆ ಕಾರ್ಯನಿರ್ವಹಿಸಲು ಸಿದ್ಧವಾಗಿವೆ. ಯಾವುದೇ ಪ್ರದೇಶದಲ್ಲಿ ಮಹಿಳೆಯರ ಮೇಲೆ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಿ ಮಹಿಳೆಯರುಮತ್ತು ಮಕ್ಕಳು ಸಬಲರಾಗಬೇಕು ಹಾಗೂ ಧೈರ್ಯಶಾಲಿಗಳಾಗಿ ಸ್ವಯಂ ರಕ್ಷಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಾ ಜಿ.ಕೆ. ಅವರು ಪೋಕೊÕà ಕಾಯ್ದೆ-2012 ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ- 2006ರ ಬಗ್ಗೆ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಎಸ್. ಎಚ್. ಮಜೀದ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಮುತ್ತುರಾಜ ಮಾದರ, ಹಾಗೂ ಕಾನೂನು ಪರಿವೀಕ್ಷಣಾಧಿಕಾರಿ ಎಂ.ಬಿ. ಬಸವನಾಯಕರ ಮಾತನಾಡಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದರಕ್ಷಣಾಧಿಕಾರಿ ವಿನಯ ಗುಡಗೂರ, ಅಂಗನವಾಡಿ ಮೇಲ್ವಿಚಾರಕಿಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಇತರರು ಪಾಲ್ಗೊಂಡಿದ್ದರು.