ಬೆಂಗಳೂರು: ಈವೆಂಟ್ ಮ್ಯಾನೇಜ್‌ಮೆಂಟ್ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ದಂಪತಿಯನ್ನು ಸಿಸಿಬಿಯ ಮಹಿಳಾ ಮತ್ತು ಮಕ್ಕಳ ಸಂರಕ್ಷಣಾ ದಳದ ಪೊಲೀ ಸರು ಬಂಧಿಸಿದ್ದಾರೆ.
ಪಟ್ಟೆಗಾರಪಾಳ್ಯದ ನಿವಾಸಿಗಳಾದ ಪ್ರಕಾಶ್ ಹಾಗೂ ಪಾರಿಜಾತ ಬಂಧಿತ ದಂಪತಿ.
ಆರೋಪಿಗಳು ತಮ್ಮ ನೈಜ ಹೆಸರು ಬೆಳಕಿಗೆ ಬಾರದಂತೆ ರಾಕೇಶ್, ಪೂಜಾ ಎಂದು ಹೆಸರು ಬದಲಿಸಿ ಕೊಳ್ಳುತ್ತಿದ್ದರು. ಬಡ ಹೆಣ್ಣು ಮಕ್ಕಳನ್ನು ಟಾರ್ಗೆಟ್ ಮಾಡುತ್ತಿದ್ದ ಆರೋಪಿಗಳು, ಉತ್ತರ ಕರ್ನಾಟಕ ಭಾಗದ ಬಡ ಹೆಣ್ಣುಮಕ್ಕಳಿಗೆ ಕೆಲಸದ ಆಮಿಷವೊಡ್ಡಿ ಬೆಂಗಳೂರಿಗೆ ಕರೆತರುತ್ತಿದ್ದರು. ನಂತರ ಕೆಲಸ ಕೊಡಿಸದೇ ಹಣದ ಆಮಿಷವೊಡ್ಡಿ ವೇಶ್ಯಾವಾಟಿಕೆ ದಂಧೆಗೆ ದೂಡುತ್ತಿದ್ದರು. ಬಳಿಕ ಅವರನ್ನು ಈವೆಂಟ್ ಮ್ಯಾನೇಜ್‌ಮೆಂಟ್ ಕೆಲಸದ ಸೋಗಿನಲ್ಲಿ ವಾರಕ್ಕೊಮ್ಮೆ ತಮಿಳುನಾಡು, ಪುದುಚೆರಿ ರೆಸಾರ್ಟ್‌ಗಳಲ್ಲಿ ನಡೆಯುವ ಪಾರ್ಟಿಗಳಿಗೆ ಕರೆದೊಯ್ದು ವೇಶ್ಯಾವಾಟಿಕೆಯಲ್ಲಿ ತೊಡಗುವಂತೆ ಆಮಿಷವೊಡ್ಡುತ್ತಿದ್ದರು.
ಐಷಾರಾಮಿ ವೇಶ್ಯಾವಾಟಿಕೆ ಪಾರ್ಟಿಗೆ ಈ ದಂಪತಿ ಮದ್ಯ ಪೂರೈಕೆ ಮಾಡುತ್ತಿದ್ದರು. ಪಾರ್ಟಿಗೆ ಬರುವ ಒಬ್ಬರಿಗೆ ತಲಾ 25 ಸಾವಿರ ರೂ.ನಿಂದ 50 ಸಾವಿರ ರೂ.ವರೆಗೆ ಶುಲ್ಕ ನಿಗದಿಪಡಿಸುತ್ತಿದ್ದರು. ಬೆಂಗಳೂರಿನಿಂದ ಯುವತಿಯರನ್ನು ಕರೆದೊಯ್ಯುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ನಾಲ್ವರು ಯುವತಿಯರನ್ನು ರಕ್ಷಣೆ ಮಾಡಲಾಗಿದೆ.