Advertisement

ಸಮಾಜದ ಜನರು ಒಗ್ಗಟ್ಟಾದಾಗ ಅಭ್ಯುದಯ 

07:28 AM Feb 13, 2019 | Team Udayavani |

ಮಂಡ್ಯ: ಸಮುದಾಯದ ಜನರು ಒಗ್ಗಟ್ಟಾದಾಗ ಮಾತ್ರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಎಲ್ಲ ರಂಗಗಳಲ್ಲಿ ಅಭ್ಯುದಯ ಕಾಣಲು ಸಾಧ್ಯ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಆರ್‌.ರಾಜೇಶ್‌ ಹೇಳಿದರು. ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಲಾಮಂದಿರದಲ್ಲಿ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Advertisement

ಇಂದಿಗೂ ಹಿಂದುಳಿದ ವರ್ಗಕ್ಕೆ ಸೇರಿದ ಅನೇಕ ಸಮುದಾಯಗಳು ಶೈಕ್ಷಣಿಕ, ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕವಾಗಿ ಹಿಂದುಳಿದಿವೆ. ಒಗ್ಗಟ್ಟಿನ ಕೊರತೆಯಿಂದ ಜನಾಂಗದ ಪ್ರಗತಿ ಸಾಧ್ಯವಾಗಿಲ್ಲ. ಜಯಂತಿ ಆಚರಣೆ ಅರ್ಥಪೂರ್ಣವಾಗಲು ಸಮುದಾಯದ ಜನರು ಒಂದಾಗಬೇಕು. ಇವುಗಳನ್ನು ವೇದಿಕೆಯಾಗಿ ಬಳಸಿಕೊಂಡು ಅಭಿವೃದ್ಧಿ ಹೊಂದುವಂತೆ ಸಲಹೆ ನೀಡಿದರು.

ಹಿಂದುಳಿದ ವರ್ಗಗಳ ಅಭಿವೃದ್ಧಿ ಹೊಂದುವಂತೆ ಮಾಡಲು ಅವಕಾಶ ಕಲ್ಪಿಸುವುದು ಕೂಡ ಸಂವಿಧಾನದ ಮುಖ್ಯಆಶಯವಾಗಿದೆ. ಇಂತಹ ವರ್ಗಗಳನ್ನು 21 ನೇ ಶತಮಾನಕ್ಕೆ ಸಮಾನಗೊಳಿಸಬೇಕಿದೆ. ಸಮಾಜದ ಎಲ್ಲ ವೃತ್ತಿಯನ್ನು ಪ್ರತಿಯೊಬ್ಬರೂ ಸಮಾನವಾಗಿ ಗೌರವಿಸಬೇಕು ಎಂದು ತಿಳಿಸಿದರು.

ಮುಖ್ಯ ಶಿಕ್ಷಕ ರಾಮಮೂರ್ತಿ ಸವಿತಾ ಮಹರ್ಷಿ ಕುರಿತು ಉಪನ್ಯಾಸ ನೀಡಿದರು.ಕ್ಷೌರಿಕ ವೃತ್ತಿ ವೈದ್ಯ ವೃತ್ತಿಗೆ ಸಮಾನವಾಗಿದೆ. ಆಯುಷ್‌ ಕರ್ಮದಿಂದ ಶಸ್ತ್ರಚಿಕಿತ್ಸೆ ಹುಟ್ಟಿಬಂದಿದೆ. ಮನುಷ್ಯನನ್ನು ಕ್ಷೌರ ಮಾಡಿ ಆರೋಗ್ಯವಾಗಿ ಇಟ್ಟಿದ್ದಾರೆ. ಸಮಾಜದಲ್ಲಿ ಜಾತಿಯಿಂದ ಬರುವ ಗೌರವ ಶಾಶ್ವತವಲ್ಲ.

ಹನ್ನೇರಡನೇ ಶತಮಾನದಲ್ಲಿ ಹಡಪದ ಅಪ್ಪಣ್ಣ ಸವಿತಾ ಮಹರ್ಷಿ ತತ್ವ ಅಳವಡಿಸಿಕೊಂಡು ಬಸವಣ್ಣನವರ ಗಮನ ಸೆಳೆದಿದ್ದರು. ಮಹಾ ಬುದ್ಧಿವಂತರಾದ ಹಡಪದ ಅಪ್ಪಣ್ಣ ಅವರನ್ನು ಬಸವಣ್ಣ ಆರ್ಥಿಕ ಮಂತ್ರಿಯಾಗಿ ನೇಮಿಸಿಕೊಂಡಿದ್ದರು. ಎಲ್ಲ ಸಮಾಜದ ಶ್ರೇಷ್ಠ ನಾಯಕರನ್ನು ಸರ್ಕಾರ ಗುರುತಿಸಿ ಜಯಂತಿ ಆಚರಣೆ ಮಾಡುವುದು ನಮ್ಮ ಅದೃಷ್ಟವಾಗಿದೆ ಎಂದರು.

Advertisement

ಸಮಾಜದ ಪ್ರತಿಯೊಂದು ಕೆಲಸಕ್ಕೂ ಸವಿತಾ ಸಮಾಜದ ನೆರವು ಅಗತ್ಯವಾಗಿದೆ. ಆರ್ಥಿಕ, ಶೈಕ್ಷಣಿಕವಾಗಿ ನಮ್ಮ ಸಮುದಾಯಗಳು ಮುಂದೆ ಬಂದರೆ ಎಲ್ಲವೂ ಹಿಂದೆ ಹೋಗುತ್ತವೆ. ನಾವು ದುಡಿಯುವ ಹಣವನ್ನು ಸದ್ವಿನಿಯೋಗ ಮಾಡಬೇಕು. ಮಕ್ಕಳನ್ನು ವಿದ್ಯಾವಂತರನ್ನು ಮಾಡಿ ಸುಶಿಕ್ಷತರನ್ನಾಗಿ ಮಾಡುವ ಅಗತ್ಯವಿದೆ. ನಂತರ ಅವರು ಯಾವ ಕೆಲಸ ಮಾಡಿದರೂ ಅದಕ್ಕೆ ಬೆಲೆ ಇರುತ್ತದೆ. ಎಲ್ಲರನ್ನು ಗೌರವಿಸುತ್ತಾ ಸಮಾಜದಲ್ಲಿ ಸಮತಾ ಭಾವ ಮೂಡಿಸಬೇಕು ಎಂದು ಸಲಹೆ ನೀಡಿದರು.

ಸವಿತಾ ಸಮಾಜದ ರಾಜ್ಯ ಸಂಚಾಲಕ ವಿ.ಆಂಜನಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ,  ಮಂಡ್ಯ ತಾಲ್ಲೂಕು ಅಧ್ಯಕ್ಷ ಮೂರ್ತಿ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಜಿಲ್ಲಾಧ್ಯಕ್ಷ ಎಲ್‌.ಸಂದೇಶ್‌, ವಿವಿಧ  ಸಮುದಾಯಗಳ ಮುಖಂಡರಾದ ದೊಡ್ಡಯ್ಯ, ಸಿದ್ದಶೆಟ್ಟಿ, ಗುರುಪ್ರಸಾದ್‌, ಮಹಾಂತಪ್ಪ, ಚಿಕ್ಕಬೋರಯ್ಯ, ಸ್ವಾಮಿ, ಸಂತೋಷ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next