Advertisement

ಹೆಚ್ಚುವರಿ ಅನುದಾನಕ್ಕೆ ಸಿಎಂಗೆ ಪ್ರಸ್ತಾವನೆ

07:44 AM Nov 14, 2018 | Team Udayavani |

ಬೆಂಗಳೂರು: ರಾಜ್ಯದಲ್ಲಿ ಅಂತರ್ಜಲ ವೃದ್ಧಿಗಾಗಿ ಚೆಕ್‌ ಡ್ಯಾಂ/ಬ್ಯಾರೇಜ್‌ ನಿರ್ಮಾಣಕ್ಕೆ ಮೂರು ಸಾವಿರ ಕೋಟಿ ರೂ. ಹೆಚ್ಚುವರಿ ಅನುದಾನ ಒದಗಿಸುವಂತೆ ಸಣ್ಣ ನೀರಾವರಿ ಇಲಾಖೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಪ್ರಸ್ತಾವನೆ ಸಲ್ಲಿಸಿದೆ. ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಸಣ್ಣ ನೀರಾವರಿ ಸಚಿವ ಸಿ.ಎಸ್‌.ಪುಟ್ಟರಾಜು, ಅಂತರ್ಜಲ ವೃದ್ಧಿಯಾಗಬೇಕಾದರೆ ಮಳೆ ನೀರು ಹಿಡಿದಿಟ್ಟುಕೊಳ್ಳುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಅಗತ್ಯವಿರುವ ಕಡೆ ಚೆಕ್‌ಡ್ಯಾಂ, ಬ್ಯಾರೇಜ್‌ ನಿರ್ಮಿಸಬೇಕಿದೆ. ಕುಡಿಯುವ ನೀರು ಸಮಸ್ಯೆ ನಿವಾರಣೆಗೂ ಇದು ಸಹಕಾರಿಯಾಗಲಿದೆ, ಇದಕ್ಕಾಗಿ ಇಲಾಖೆಗೆ ಹೆಚ್ಚುವರಿ ಅನುದಾನ ಮುಖ್ಯಮಂತ್ರಿಯವರ ಬಳಿ ಕೋರಲಾಗಿದೆ ಎಂದರು. 

Advertisement

ಸಣ್ಣ ನೀರಾವರಿ ಇಲಾಖೆಗೆ ಕೆರೆಗಳ ಅಭಿವೃದ್ಧಿಗಾಗಿ ಎರಡು ಸಾವಿರ ಕೋಟಿ ರೂ. ಅನುದಾನ ಬಜೆಟ್‌ನಲ್ಲಿ ಒದಗಿಸಲಾಗಿದ್ದು ಹೆಚ್ಚುವರಿಯಾಗಿ ಮೂರು ಸಾವಿರ ಕೋಟಿ ರೂ.ಗೆ ಬೇಡಿಕೆ ಇಡಲಾಗಿದೆ. ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದು ತಿಳಿಸಿದರು. ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ಬರುವ 3,600 ಕೆರೆಗಳಲ್ಲಿ ಹೂಳು ತೆಗೆಯುವ ಕೆರೆ ಸಂಜೀವಿನಿ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ಧರ್ಮಸ್ಥಳದ ಮಂಜುನಾಥೇಶ್ವರ ಸಂಸ್ಥೆ ಹಾಗೂ ಯಶ್‌ ಅಭಿಮಾನಿಗಳ ಸಂಘವೂ ಇದಕ್ಕೆ ಜತೆಗೂಡಲಿದೆ ಎಂದು ಹೇಳಿದರು. ಕೆರೆ ಸಹಕಾರ ಸಂಘಗಳನ್ನು ಸಕ್ರಿಯಗೊಳಿಸುವ ಕಾರ್ಯ ನಡೆದಿದ್ದು ಕೆರೆ ಹೂಳೆತ್ತುವ ಕಾರ್ಯದಲ್ಲಿ ನೆರವಾಗುವ ಸಂಘಗಳಿಗೆ 1 ಲಕ್ಷ ರೂ.ವರೆಗೂ ನೆರವು ಒದಗಿಸಲಾಗುವುದು. ಇದಕ್ಕಾಗಿ 8 ಕೋಟಿ ರೂ. ಮೀಸಲಿಡಲಾಗಿದೆ. ಕೆರೆ ಹೂಳೆತ್ತುವ ಕಾಮಗಾರಿಗೆ ಹಣಕಾಸಿನ ಸಮಸ್ಯೆಯಿಲ್ಲ ಎಂದರು.

ಒತ್ತುವರಿ ತೆರವಿಗೆ ಸೂಚನೆ: ಎ.ಟಿ.ರಾಮಸ್ವಾಮಿ ವರದಿ ಹಾಗೂ ಕೆ.ಬಿ.ಕೋಳಿವಾಡ ವರದಿ ಆಧಾರದ ಮೇಲೆ ರಾಜ್ಯದಲ್ಲಿ ಕೆರೆ ಒತ್ತುವರಿ ಪತ್ತೆ ಹಚ್ಚಿ ತೆರವುಗೊಳಿಸಲು ಸೂಚಿಸಲಾಗಿದೆ. ಈ ಹಿಂದೆ ಕೆರೆ ಸಂರಕ್ಷಣಾ ಅಭಿವೃದ್ಧಿ ಪ್ರಾಧಿಕಾರ ಕಾಯ್ದೆಗೆ ತಿದ್ದುಪಡಿ ತರಲಾಗಿತ್ತು. ಇದೀಗ ನಿಯಮಾವಳಿ ರೂಪಿಸಲಾಗಿದೆ. ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಮೂರು ಸುತ್ತಿನ ಸಭೆ ಸಹ ನಡೆಸಲಾಗಿದ್ದು ಆದಷ್ಟು ಬೇಗ ತೆರವು ಕಾರ್ಯಾಚರಣೆ ಪ್ರಾರಂಭಿಸಲಾಗುವುದು ಎಂದರು. ಮೈಸೂರಿನ ಹೆಬ್ಟಾಳ ಕೆರೆಯನ್ನು 15ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ಇನ್ಫೋಸಿಸ್‌ ಪ್ರತಿಷ್ಠಾನ ಮುಂದಾಗಿದೆ. ಅದೇ ರೀತಿ ಬೆಂಗಳೂರು ಸೇರಿ ನಗರ
ಪ್ರದೇಶಗಳಲ್ಲಿ ಕೆರೆಗಳನ್ನು ಅಭಿವೃದ್ಧಿಪಡಿಸಲು ಹಲವು ಖಾಸಗಿ ಕಂಪನಿಗಳು ಮುಂದೆ ಬಂದಿವೆ ಎಂದು ತಿಳಿಸಿದರು.

 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ಅಭಿವೃದ್ಧಿ ಪಡಿಸುವಂತೆ ಆಯಾ ನಗರ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಿದ್ದು ಉಳಿದಂತೆ ಸಣ್ಣ ನೀರಾವರಿ ಇಲಾಖೆಯೇ ಕೆರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ಕೆರೆ ಸಹಕಾರ ಸಂಘಗಳ ನೆರವಿನಿಂದ ಕೆರೆಗಳನ್ನು 
ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು. ಈ ಹಿಂದೆ ಜಲ ಸಂವರ್ಧನ ಯೋಜನೆಯಡಿಯಲ್ಲಿ ಕೆರೆಗಳ ಹೂಳೆತ್ತಲು ವಿಶ್ವಬ್ಯಾಂಕ್‌ ನೆರವಿನಡಿ ನೆರವು ಪಡೆಯಲಾಗಿತ್ತು. ಆದರೆ ಆ ಹಣ ಸಮರ್ಪಕವಾಗಿ ಬಳಕೆಯಾಗಿಲ್ಲ ಎಂಬ ದೂರುಗಳಿದ್ದು ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next