Advertisement

ಸುಸಜ್ಜಿತ ಕ್ರೀಡಾಂಗಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ; ಬಿ.ಡಿ. ಕುಂಬಾರ

06:06 PM Nov 29, 2022 | Team Udayavani |

ದಾವಣಗೆರೆ: ಈ ಭಾಗದಲ್ಲಿ ಪ್ರಸಿದ್ಧಿ ಪಡೆದಿರುವ ಕುಸ್ತಿ, ಕಬಡ್ಡಿ, ಖೋ ಖೋ, ವೇಟ್‌ ಲಿಫ್ಟಿಂಗ್, ಪವರ್‌ ಲಿಫ್ಟಿಂಗ್, ವಾಲಿಬಾಲ್‌ ಕ್ರೀಡೆಗಳ ಅಭ್ಯಾಸಕ್ಕಾಗಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಬಿ.ಡಿ. ಕುಂಬಾರ ತಿಳಿಸಿದ್ದಾರೆ.

Advertisement

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಬಡ್ಡಿ ಮತ್ತು ಕುಸ್ತಿಪಟುಗಳಿಗೆ ಮ್ಯಾಟ್‌ ಮೇಲೆ ಅಭ್ಯಾಸ ಮಾಡುವ ಜತೆಗೆ ಕ್ರೀಡಾ ಕೌಶಲ್ಯಗಳನ್ನು ಅಳವಡಿಸಿಕೊಳ್ಳಲು ತಜ್ಞರಿಂದ ತರಬೇತಿಗೆ ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

ಅತ್ಯುತ್ತಮ ಕ್ರೀಡಾಪಟುಗಳು ಮತ್ತು ಕ್ರೀಡಾ ತಂಡಗಳ ಆಯ್ಕೆಗೆ ಈ ವರ್ಷ ಹೊಸ ನೀತಿ, ನಿಯಮಗಳನ್ನು ರೂಪಿಸಲಾಗಿದೆ. ವಿವಿಧ ಕಾಲೇಜುಗಳ ದೈಹಿಕ ಶಿಕ್ಷಣ ನಿರ್ದೇಶಕರು ಸೇರಿದಂತೆ ಐದು ಜನರ ಆಯ್ಕೆ ಸಮಿತಿ ರಚಿಸಲಾಗಿದೆ. ಕ್ರೀಡಾಕೂಟದ ಸಂದರ್ಭದಲ್ಲಿ ಸಮಿತಿ ಸದಸ್ಯರು ಅರ್ಹ, ಸಮರ್ಥ ಮತ್ತು ಸ್ಪರ್ಧಾತ್ಮಕ ಪೈಪೋಟಿ ನೀಡಬಲ್ಲ ಕ್ರೀಡಾಪಟುಗಳನ್ನು ಕೆಲವು ನಿರ್ದಿಷ್ಟ ಮಾನದಂಡಗಳೊಂದಿಗೆ ಆಯ್ಕೆ ಮಾಡುವರು. ಇದಕ್ಕೆ ಸಂಬಂಧಿಸಿದಂತೆ ತಂಡಗಳ ಆಯ್ಕೆಗಾಗಿ ಕ್ರೀಡಾ ಸಲಹಾ ಸಮಿತಿ ಮತ್ತು ಸಿಂಡಿಕೇಟ್‌ ಸದಸ್ಯರ ಸಲಹೆಯಂತೆ ರೂಪಿಸಿರುವ ನೀತಿ, ನಿಯಮಗಳ ಬಗ್ಗೆ ಮತ್ತೊಮ್ಮೆ ಪರಾಮರ್ಶಿಸಿ ಕ್ರೀಡಾ ಚಟುವಟಿಕೆಯನ್ನು ಇನ್ನಷ್ಟು ಸಶಕ್ತಗೊಳಿಸಲು ಆದ್ಯತೆ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಕ್ರೀಡಾ ಚಟುವಟಿಕೆಗಾಗಿ ಪ್ರಸಕ್ತ ಶೈಕ್ಷಣಿಕ ವರ್ಷ 49 ಲಕ್ಷ ರೂ. ಅನುದಾನ ಮೀಸಲಿಡಲಾಗಿದೆ. ಕಳೆದ ವರ್ಷಅಂತರ ಕಾಲೇಜು ಮತು ¤ಅಂತರ ವಿಶ್ವವಿದ್ಯಾಲಯ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು, ಕ್ರೀಡಾ ವ್ಯವಸ್ಥಾಪಕರ ಭತ್ಯೆ ಮತ್ತು ಕ್ರೀಡಾ ತರಬೇತಿಗಾಗಿ ಒಟ್ಟು 35 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಸುಮಾರು ಐದು ಲಕ್ಷ ರೂ. ಮೌಲ್ಯದ ಕ್ರೀಡಾ ಸಾಮಗ್ರಿಗಳು, ಕ್ರೀಡಾಪಟುಗಳಿಗೆ ಕಲರ್, ಟ್ರ್ಯಾಕ್‌ಸೂಟ್‌, ಶೂ ಖರೀದಿಸಲಾಗಿದೆ.

27 ವಿವಿಧ ಕ್ರೀಡಾ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಅದರಲ್ಲಿ ಎರಡು ತಂಡಗಳು ಪ್ರಶಸ್ತಿ ಗೆದ್ದಿವೆ. ಉಳಿದ ತಂಡಗಳು ಮೊದಲ ಸುತ್ತಿನಲ್ಲಿಯೇ ಹೊರಬಿದ್ದಿವೆ. ಈ ಹಿನ್ನೆಲೆಯಲ್ಲಿ ಕ್ರೀಡಾ ತಂಡಗಳಿಗೆ ತರಬೇತಿ ನೀಡಿ ಅರ್ಹ ಮತ್ತು ಸಮರ್ಥ ತಂಡಗಳನ್ನು ಕ್ರೀಡಾಕೂಟಗಳಿಗೆ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.

Advertisement

ಉತ್ತಮ ಕ್ರೀಡಾಪಟುಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಉದ್ದೇಶದಿಂದಲೇ ವಿಶ್ವವಿದ್ಯಾನಿಲಯ ತಂಡಕ್ಕೆ ಆಯ್ಕೆಯಾದ ತಂಡಗಳಿಗೆ ಪರಿಣಿತರು ಮತ್ತು ಹಿರಿಯ ಕ್ರೀಡಾಪಟುಗಳಿಂದ ತರಬೇತಿಗೆ ವ್ಯವಸ್ಥೆ ಮಾಡಲಾಗಿದೆ. ಕ್ರೀಡಾಕೌಶಲ್ಯ, ದೈಹಿಕ ಸಾಮರ್ಥ್ಯ, ಸದೃಢತೆಗೆ ವಿಶೇಷ ಗಮನ ನೀಡಲಾಗಿದೆ. ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ, ಕ್ರೀಡಾ ವಿದ್ಯಾರ್ಥಿವೇತನ ನೀಡಲಾಗುತ್ತಿದೆ.

ಕ್ರೀಡಾಕೂಟಗಳಲ್ಲಿ ವಿಜೇತ ತಂಡಗಳಿಗೆ ತಲಾ 15 ರಿಂದ 25 ಸಾವಿರ ರೂ.ವರೆಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ. ಚಿತ್ರದುರ್ಗ ಮತು ¤ದಾವಣಗೆರೆ ಜಿಲ್ಲೆಗಳನ್ನು ಒಳಗೊಂಡ ವಿಶ್ವವಿದ್ಯಾಲಯ ಮಟ್ಟದಲ್ಲಿ ಏಕವಲಯ ಅಥವಾ ಬಹುವಲಯಗಳ ಮಟ್ಟದಲ್ಲಿ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಿ ಅರ್ಹ, ಸಮರ್ಥ ಕ್ರೀಡಾಪಟುಗಳನ್ನು ಅಂತರ ವಿಶ್ವವಿದ್ಯಾನಿಲಯ ಮಟ್ಟಕ್ಕೆ ಆಯ್ಕೆ ಮಾಡಲಾಗುತ್ತಿದೆ. ಅಂತರ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಸ್ಪರ್ಧಾತ್ಮಕ ಮನೋಭಾವದಿಂದ ಉತ್ತಮ ಪ್ರದರ್ಶನ ನೀಡಿ ಪೈಪೋಟಿ ನೀಡಬೇಕು ಎಂಬುದು ವಿಶ್ವವಿದ್ಯಾಲಯದ ಆಶಯವಾಗಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next