Advertisement

ಪಾದಚಾರಿ ಮೇಲ್ಸೇತುವೆಗೆ ಪ್ರಸ್ತಾವನೆ ಸಿದ್ಧ

08:36 AM Oct 15, 2017 | Team Udayavani |

ಉಡುಪಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಕ ನಿರ್ಮಾಣಗೊಂಡು ಅಂತಿಮ ಹಂತದಲ್ಲಿರುವ ಸುರತ್ಕಲ್‌-ಕುಂದಾಪುರ ರಾ.ಹೆ. 66 ಹಾಗೂ ಇನ್ನಷ್ಟೇ ಅಭಿವೃದ್ಧಿ ಕಾಮಗಾರಿ ಪ್ರಾರಂಭಗೊಳ್ಳಲಿರುವ ಮಲ್ಪೆ-ಮೊಳಕಾಲ್ಮೂರು ರಾ.ಹೆ. 169 (ಎ) ಇವುಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಹಾದು ಹೋಗುವ ಹೆದ್ದಾರಿಗಳಲ್ಲಿ ಒಂದೇ ಒಂದು ಪಾದಚಾರಿ ಮೇಲ್ಸೇತುವೆ ಇಲ್ಲ. ಜನರ ಸುರಕ್ಷೆ ದೃಷ್ಟಿಯಿಂದ ಉಡುಪಿ ಜಿಲ್ಲಾ ಎಸ್‌ಪಿ ಡಾ| ಸಂಜೀವ ಎಂ. ಪಾಟೀಲ್‌  ಜಿಲ್ಲೆಯ 28 ಕಡೆಗಳಲ್ಲಿ ಸಾರ್ವಜನಿಕರು ರಸ್ತೆ ದಾಟಲು ಆವಶ್ಯಕತೆ ಇರುವ ಸ್ಕೈ 
ವಾಕರ್‌ (ಪಾದಚಾರಿ ಮೇಲ್ಸೇತುವೆ) ಕಾಮಗಾರಿ ನಡೆಸಬೇಕು ಎನ್ನುವ ಪ್ರಸ್ತಾವನೆಯನ್ನು ಸಿದ್ಧಪಡಿಸಿದ್ದಾರೆ.

Advertisement

ಪಾದಚಾರಿ ಮಾರ್ಗ ಸೂಕ್ತವೇ?
ಪಾದಚಾರಿ ಮಾರ್ಗ ನಿರ್ಮಿಸಿದರೂ ಅದನ್ನೇ ಜನರು ರಸ್ತೆ ದಾಟಲು ಬಳಸುತ್ತಾರೆಯೇ ಎಂಬ ಪ್ರಶ್ನೆ ಎದುರಾಗುತ್ತದೆ. ಪಾದಚಾರಿ ಮಾರ್ಗಗಳನ್ನೇ ಕಡ್ಡಾಯ ವಾಗಿ ಬಳಸುವಂತಾಗಲು ಹೆದ್ದಾರಿ ಪ್ರಾಧಿಕಾರದವರು ರಸ್ತೆ ಇಕ್ಕೆಲಗಳಲ್ಲಿ ಮೆಷ್‌ಗಳನ್ನು ಹಾಕಿ ಜನರು ರಸ್ತೆ ದಾಟಲು ಒಳಬರಲಾಗದಂತೆ ತಡೆ ಹಾಕಬೇಕು. ಆಗ ಪಾದಚಾರಿ ಮಾರ್ಗದಲ್ಲೇ ಜನರು ದಾಟುತ್ತಾರೆ ಎನ್ನುವುದು ತಾಂತ್ರಿಕ ತಜ್ಞರ ಅಭಿಪ್ರಾಯವಾಗಿದೆ. 

ಸ್ಕೈವಾಕರ್‌ಗೆ ಪ್ರಸ್ತಾವನೆ ಇರಲಿಲ್ಲ!
ಪೊಲೀಸ್‌ ಇಲಾಖೆ ಏನೋ ಪಾದಚಾರಿ ಮಾರ್ಗಕ್ಕೆ ಪ್ರಸ್ತಾವನೆ ಸಿದ್ಧಪಡಿಸಿದೆ. ಆದರೆ ರಾ.ಹೆ. ಪ್ರಾಧಿಕಾರ ಹೇಳುವ ಪ್ರಕಾರ ರಾ.ಹೆ. 66ರ ಹೆಜಮಾಡಿ- ಕುಂದಾಪುರದ ನಡುವೆ ಒಂದೇ ಒಂದು ಸ್ಕೈವಾಕರ್‌ ನಿರ್ಮಾಣ ಯೋಜನೆ ರೂಪಿಸಿಲ್ಲ. ಕಾಪು ಪೇಟೆ, ಉಡುಪಿಯ ಕರಾವಳಿ ಜಂಕ್ಷನ್‌, ಬ್ರಹ್ಮಾವರ, ಕೋಟ, ಕುಂದಾಪುರ ಶಾಸ್ತ್ರಿ ಸರ್ಕಲ್‌ ಮತ್ತು ಕಿರಿಮಂಜೇಶ್ವರದಲ್ಲಿ ಮಾತ್ರ 6 ಅಂಡರ್‌ಪಾಸ್‌/ಓವರ್‌ಬ್ರಿಜ್‌ಗಳನ್ನು ರಚಿಸಿರುವುದಾಗಿ ಹೆದ್ದಾರಿ ಪ್ರಾಧಿಕಾರ ಹೇಳಿದೆ.

ಪಾದಚಾರಿ ಮೇಲ್ಸೇತುವೆ ಎಲ್ಲೆಲ್ಲಿ ? 
ರಾ.ಹೆ. 66 (ಹೆಜಮಾಡಿ-ಕುಂದಾಪುರ) ಕಟಪಾಡಿ ಜಂಕ್ಷನ್‌ ಪೊಲಿಪು ಜಂಕ್ಷನ್‌ ಉಚ್ಚಿಲ ಜಂಕ್ಷನ್‌ ಪಡುಬಿದ್ರಿ ಜಂಕ್ಷನ್‌ ಅಂಬಲಪಾಡಿ ಜಂಕ್ಷನ್‌ ಸಂತೆಕಟ್ಟೆ ಜಂಕ್ಷನ್‌ ಉದ್ಯಾವರ ಬಲಾಯಿಪಾದೆ ಕೋಟ ಹೈಸ್ಕೂಲ್‌ ಬಳಿ ಕೋಟ ಬಸ್‌ ನಿಲ್ದಾಣ ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನ ಬ್ರಹ್ಮಾವರ ಬಸ್‌ ನಿಲ್ದಾಣ ಬ್ರಹ್ಮಾವರ ಆಕಾಶವಾಣಿ  ಎಸ್‌ಎಂಎಸ್‌ ಕಾಲೇಜು ಬ್ರಹ್ಮಾವರ ಶಿರೂರು ಕೆಳಪೇಟೆ ಜಂಕ್ಷನ್‌ ಯಡ್ತರೆ ಹೊಸ ಬಸ್‌ ನಿಲ್ದಾಣ ಬೈಂದೂರು ಜಂಕ್ಷನ್‌ ಉಪ್ಪುಂದ ಶಾಲೆಬಾಗಿಲು  ಕಂಬದಕೋಣೆ ಜಂಕ್ಷನ್‌ ಅರೆಹೊಳೆ ಜಂಕ್ಷನ್‌ ಅರಾಟೆ ಜಂಕ್ಷನ್‌ ಮುಳ್ಳಿಕಟ್ಟೆ ಜಂಕ್ಷನ್‌ ತ್ರಾಸಿ ಜಂಕ್ಷನ್‌ ತ್ರಾಸಿ ಬೀಚ್‌ ರಸ್ತೆ ಮರವಂತೆ ಮಾರಸ್ವಾಮಿ ದೇವಸ್ಥಾನದ ಬಳಿ ರಾ.ಹೆ. 169 (ಎ) (ಉಡುಪಿ-ಮಣಿಪಾಲ) ಎಂಜಿಎಂ ಕಾಲೇಜು ಸಿಂಡಿಕೇಟ್‌ ಸರ್ಕಲ್‌ ಟೈಗರ್‌ ಸರ್ಕಲ್‌ ಎಂಐಟಿ ಜಂಕ್ಷನ್‌

“ಕಳಪೆ ನಿರ್ವಹಣೆ ಸಹಿಸಲಾಗದು’
ಈ ಮಾಸಾಂತ್ಯ ಇಲ್ಲವೇ ನವೆಂಬರ್‌ ಮೊದಲ ವಾರದಲ್ಲಿ ರಾ.ಹೆ. ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ಈ ಸಭೆಗೆ ಎನ್‌ಎಚ್‌ ಪ್ರಾದೇಶಿಕ ಮ್ಯಾನೇಜರ್‌ ವೈ.ವಿ. ಪ್ರಸಾದ್‌ ಬರಲಿದ್ದಾರೆ. ಅವರಿಗೆ ನಾವು ಪ್ರಸ್ತಾವನೆ ಸಲ್ಲಿಸಲಿದ್ದೇವೆ. ಜನರ ಸುರಕ್ಷತೆ ದೃಷ್ಟಿಯಿಂದ ಈ ಕೆಲಸ ಮಾಡಲಾಗಿದೆ. ಬೇರೆ ಕಡೆಗಳಲ್ಲಿನ ರಾ. ಹೆ. ಕಾಮಗಾರಿ ನಿರ್ವಹಣೆ ಉತ್ತಮವಾಗಿದೆ. ಆದರೆ ಉಡುಪಿ ಜಿಲ್ಲೆಯ ರಾ.ಹೆ. 66ರಲ್ಲಿ ಹೆದ್ದಾರಿ ನಿರ್ವಹಣೆಯು ಉತ್ತಮವಾಗಿಲ್ಲ. ಉಡುಪಿ ಜಿಲ್ಲೆಯ ಬಸ್‌ ನಿಲ್ದಾಣ, ಮಾರುಕಟ್ಟೆ, ಶಾಲೆ, ಕಾಲೇಜು ಇಂತಹ ಕಡೆಗಳಲ್ಲಿಯೂ ಪಾದಾಚಾರಿ ಸೇತುವೆರಚನೆ ಮಾಡಲು, ಬ್ಲಿಂಕರ್, ರಿಫ್ಲೆಕ್ಟರ್, ರಸ್ತೆ ಇಕ್ಕೆಲಗಳಲ್ಲಿ ಮೆಷ್‌ಗಳನ್ನು ಅಳವಡಿಸಲು ಹಾಗೂ ಎಲ್ಲ ರಸ್ತೆ ಸುರಕ್ಷತಾ ಕ್ರಮಕೈಗೊಳ್ಳಲು ಹೆದ್ದಾರಿ ಅಧಿಕಾರಿಗಳಿಗೆ ಸೂಚಿಸಲಾಗುವುದು.   
ಡಾ| ಸಂಜೀವ ಎಂ. ಪಾಟೀಲ್‌, ಉಡುಪಿ ಎಸ್‌ಪಿ

Advertisement

ಚೇತನ್‌ ಪಡುಬಿದ್ರಿ

Advertisement

Udayavani is now on Telegram. Click here to join our channel and stay updated with the latest news.

Next