Advertisement

ಬಗರ್‌ಹುಕುಂ ವಿಷಯ ಸದನದಲ್ಲಿ ಪ್ರಸ್ತಾಪ

02:29 PM Sep 10, 2019 | Team Udayavani |

ಚಿತ್ರದುರ್ಗ: ಹಲವು ವರ್ಷಗಳಿಂದ ನಡೆಯುತ್ತಿರುವ ಸಾಗುವಳಿ ಭೂಮಿಯ ಹಕ್ಕುಪತ್ರ ಹೋರಾಟಕ್ಕೆ ಸರಿಯಾದ ನ್ಯಾಯ ಸಿಕ್ಕಿಲ್ಲ. ಈ ಕುರಿತು ವಿಧಾನಸಭೆಯಲ್ಲಿ ಪ್ರಸ್ತಾಪಿಸುತ್ತೇನೆ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಭರವಸೆ ನೀಡಿದರು.

Advertisement

ನಗರದ ತರಾಸು ರಂಗಮಂದಿರದಲ್ಲಿ ಸೋಮವಾರ ನಡೆದ ಬಗರ್‌ಹುಕುಂ ಸಾಗುವಳಿದಾರರ ಸಮಾವೇಶ ಮತ್ತು ಪಾದಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಅರಣ್ಯ, ಬಗರ್‌ಹುಕುಂ ಸಾಗುವಳಿದಾರರು ಹಕ್ಕುಪತ್ರ ವಿತರಣೆಗೆ ಆಗ್ರಹಿಸಿ ಭಾನುವಾರ ಭರಮಸಾಗರದಿಂದ ಚಿತ್ರದುರ್ಗದವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದರು. ಸೋಮವಾರ ಪಾದಯಾತ್ರೆ ಚಿತ್ರದುರ್ಗ ತಲುಪಿದ ನಂತರ ಪ್ರತಿಭಟನಾಕಾರರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿ ಸಮಾವೇಶ ನಡೆಸಿದರು.

ಈ ವೇಳೆ ಮಾತನಾಡಿದ ಶಾಸಕರು, ಭೂಮಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಪೂರ್ಣ ಪ್ರಮಾಣದ ನ್ಯಾಯ ಸಿಕ್ಕಿಲ್ಲ. ಜತೆಗೆ ಹೊಸದಾಗಿ ಅರ್ಜಿ ಸಲ್ಲಿಸುವವರಿಗೆ ಕಾಲಾವಕಾಶ ನೀಡುವಂತೆ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇನೆ. ಗ್ರಾಮೀಣ ಮಟ್ಟದಲ್ಲಿ ಅರಣ್ಯ ಹಕ್ಕುಗಳ ಸಮಿತಿಗಳನ್ನು ರಚಿಸಿದರೆ ಅಲ್ಲಿ ಸಲ್ಲಿಕೆಯಾದ ಅರ್ಜಿಗಳನ್ನು ಅಧಿಕಾರಿಗಳ ಮಟ್ಟದಲ್ಲಿ ವಿಚಾರಣೆ ನಡೆಸಬೇಕು. ಈ ಸಮಿತಿಯಲ್ಲಿ ಚುನಾಯಿತ ಪ್ರತಿನಿಧಿಗಳ ಪಾತ್ರಕ್ಕಿಂತ ಅಕಾರಿಗಳ ಪಾತ್ರ ಅಕವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹಾಕುವ ಕೆಲಸವನ್ನು ಹೋರಾಟಗಾರರು ಮಾಡಬೇಕು. ನಿಮ್ಮ ಜತೆಗೆ ನಾವಿರುತ್ತೇವೆ ಎಂದರು.

ಸರ್ಕಾರ ಇನ್ನೂ ಬಗರ್‌ಹುಕುಂ ಸಮಿತಿ ರಚಿಸಿಲ್ಲ. ಇದಕ್ಕೆ ನಾನೇ ಅಧ್ಯಕ್ಷನಾಗಿರುತ್ತೇನೆ. ಸಮಿತಿಗೆ ಸದಸ್ಯರನ್ನು ನೇಮಕ ಮಾಡಿದ ತಕ್ಷಣ ಸಭೆ ಕರೆಯುತ್ತೇನೆ. ಹಿಂದಿನ ಸರ್ಕಾರ ಯಾವುದೇ ಸಮಿತಿಗಳನ್ನು ರಚಿಸಿಲ್ಲ. ಈಗ ನಮ್ಮ ಸರ್ಕಾರ ಅಸ್ತಿತ್ವದಲ್ಲಿದ್ದು, ಶೀಘ್ರದಲ್ಲಿ ಸಮಿತಿ ರಚನೆ ಮಾಡಲಾಗುತ್ತದೆ ಎಂದು ಹೇಳಿದರು.

ಕೇಂದ್ರ ಸರ್ಕಾರ ಎಲ್ಲರಿಗೂ ಸೂರು ಕಲ್ಪಿಸಲು ಮುಂದಾಗಿದ್ದು, ಇದಕ್ಕಾಗಿ ಆಶ್ರಯ ಹಾಗೂ ಸ್ಲಂ ಪ್ರದೇಶಗಳಲ್ಲಿ ಮನೆ ನಿರ್ಮಾಣವಾಗಲಿವೆ. ಚಿತ್ರದುರ್ಗದಲ್ಲಿ ಮೂರು ಹಂತಸ್ತಿನವರೆಗೆ ಮನೆ ನಿರ್ಮಾಣ ಮಾಡಿ ಎಲ್ಲರಿಗೂ ಸೂರು ಒದಗಿಸಲಾಗುವುದು ಎಂದು ತಿಳಿಸಿದರು.

Advertisement

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಮುರುಘಾ ಮಠದ ಡಾ| ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಭೂಮಿ ಎಲ್ಲರಿಗೂ ಅತ್ಯಗತ್ಯ. ಭೂಮಿ ಇದ್ದರೆ ಬದುಕು ಎನ್ನುವ ಕಾಲ ಇದಾಗಿದೆ. ಹಲವು ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿರುವ ಭೂಮಿಯ ಹಕ್ಕುಪತ್ರ ಕೇಳುತ್ತಿರುವುದು ತಪ್ಪಲ್ಲ. ಆದರೆ ಎಷ್ಟು ದಿನ ಹೀಗೆ ಕೇಳುತ್ತಿರಬೇಕು. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಚಿವರ ಬಳಿ ನಿಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸುವುದಾಗಿ ಹೇಳಿದರು.

ಮಾನವ ಸರಪಳಿ: ಕಾರ್ಯಕ್ರಮಕ್ಕೂ ಮುನ್ನ ಪಾದಯಾತ್ರೆಯಲ್ಲಿ ನಗರಕ್ಕೆ ಆಗಮಿಸಿದ ಪ್ರತಿಭಟನಾಕಾರರು ಒನಕೆ ಓಬವ್ವ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ಕರ್ನಾಟಕ ಭೂ ಹಕ್ಕುದಾರರ ವೇದಿಕೆ, ಕರ್ನಾಟಕ ಶಾಂತಿ ಮತ್ತು ಸೌಹಾರ್ಧ ವೇದಿಕೆ, ಧಮ್ಮ ಸಾಂಸ್ಕೃತಿಕ ಕೇಂದ್ರ ಹಾಗೂ ಕರ್ನಾಟಕ ಬಂಜಾರ ಜನಜಾಗೃತಿ ಅಭಿಯಾನ ಸಮಿತಿಗಳು ನೇತೃತ್ವ ವಹಿಸಿಕೊಂಡಿದ್ದವು. ಕಾರ್ಯಕ್ರಮದಲ್ಲಿ ಕಸವನಹಳ್ಳಿ ರಮೇಶ್‌, ನಿಂಗಾ ನಾಯ್ಕ, ಅರುಣ್‌ಕುಮಾರ್‌, ವಿಶ್ವಸಾಗರ್‌, ಲಕ್ಷ್ಮೀಕಾಂತ್‌, ಹಾಲೇಶಪ್ಪ, ಲೋಲಾಕ್ಷಮ್ಮ, ಸಿದ್ಧಾ ನಾಯ್ಕ, ರಾಜಣ್ಣ, ಓಬಣ್ಣ, ಬಸವರಾಜ್‌ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next