ಬನಹಟ್ಟಿ; ಅವಳಿ ನಗರದ ಸೂಕ್ಷ್ಮಮತ್ತು ಅತೀ ಸೂಕ್ಷ್ಮಪ್ರದೇಶಗಳಲ್ಲಿ ಅಳವಡಿಕೆ ಮಾಡಲಾದ ಸಿಸಿ ಕ್ಯಾಮೆರಾ ನಿಷ್ಕ್ರಿಯ ಯಗೊಂಡಿದ್ದು, ಅದನ್ನು ಪುನಾರಂಭಿಸಲು ಅಧಿಕಾರಿಗಳು ಗಮನಹರಿಸುತ್ತಿಲ್ಲ.
2013ರಲ್ಲಿ ನಗರಸಭೆ ಅನುದಾನದಡಿಯಲ್ಲಿ ಬನಹಟ್ಟಿಯ ಗಾಂಧಿ ವೃತ್ತದ ಎತ್ತರದ ಕಟ್ಟಡದಲ್ಲಿ ಕೇವಲ ಒಂದೇ ಒಂದು ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು. ಆದರೆ, ಅದು ಕೇವಲ ಬೆರಳೆಣಿಕೆ ತಿಂಗಳುಗಳವರೆಗೆ ಕಾರ್ಯ ನಿರ್ವಹಿಸಿ ಬಳಿಕ ನಿಷಿ¢ಯಗೊಂಡಿದೆ. ಬನಹಟ್ಟಿ ಬಸ್ ನಿಲ್ದಾಣದಿಂದ ವೈಭವ ಚಿತ್ರಮಂದಿರದವರೆಗೂ ಅಹಿತಕರ ಘಟನೆ
ಮತ್ತು ಕಳ್ಳತನ ನಡೆದರೆ ಅಳವಡಿಸಲಾದ ಸಿಸಿ ಕ್ಯಾಮೆರಾದಲ್ಲಿ ಸಂಗ್ರಹವಾಗುತ್ತದೆ. ಆದರೆ, ಸಿಸಿ ಕ್ಯಾಮೆರಾ ದುರಸ್ತಿ ಹಂತದಲ್ಲಿರುವುದರಿಂದ ಯಾವುದೇ ಘಟನೆಗಳ ಚಿತ್ರ ಸೆರೆಯಾಗದ ಕಾರಣ ಪ್ರಮುಖ ಘಟನೆಗಳ ತನಿಖೆಗೆ ತೊಂದರೆಯಾಗುತ್ತಿದೆ.
ಬನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಟ್ಟು 11 ಸೂಕ್ಷ್ಮ ಕೇಂದ್ರಗಳೆಂದು ಗುರುತಿಸಲಾಗಿದೆ. ಪೆಂಡಾರಿ ಗಲ್ಲಿ, ಗಾಂಧಿ ವೃತ್ತ, ಬಸ್ ನಿಲ್ದಾಣದ ಆವರಣ, ಮಜದೂರಬಾಯಿ ಕಟ್ಟಡ, ಶನಿವಾರ ಪೇಟ್ ಪ್ರಮುಖ ರಸ್ತೆ, ಭಗೀರಥ ಸರ್ಕಲ್, ನೂಲಿನ ಗಿರಣಿ ಸರ್ಕಲ್, ತಮ್ಮಣ್ಣಪ್ಪಾ ಸರ್ಕಲ್, ಜಾಮಿಯಾ ಮಸೀದಿ ಕ್ರಾಸ್, ಭಗತ್ ಸಿಂಗ್ ನಾಮಫಲಕದ ಸರ್ಕಲ್, ಬನಹಟ್ಟಿ ಮಂಗಳವಾರ ಪೇಟ್‌ನ ನಡುಚೌಕ್ ಸೇರಿ 11 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ನಗರಸಭೆ ಪೌರಾಯುಕ್ತರಿಗೆಪತ್ರ ಕೂಡಾ ಬರೆಯಲಾಗಿದೆ.
ಸಿಸಿ ಕ್ಯಾಮೆರಾ ಅಳವಡಿಸುವುದರಿಂದ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಗೆ ಅನುಕೂಲವಾಗುತ್ತದೆ. ಈ ಹಿಂದೆ ನಾನು ಮಹಾಲಿಂಗಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ನಗರದ ಪ್ರಮುಖ ಪ್ರದೇಶದಲ್ಲಿ ನಗರಸಭೆ ಅನುದಾನದಡಿಯಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದು, ಅನುಕೂಲವಾಗಿದೆ. ಬನಹಟ್ಟಿ ನಗರದಲ್ಲೂ ಅಳವಡಿಸಲು ಶಾಸಕರ ಗಮನಕ್ಕೆ ತರಲಾಗಿದೆ ಎನ್ನುತ್ತಾರೆ ಬನಹಟ್ಟಿ ಪಿಎಸ್‌ಐ ರವಿಕುಮಾರ ಧರ್ಮಟ್ಟಿ.
ಈಗಿರುವ ಹಳೆ ಸಿಸಿ ಕ್ಯಾಮೆರಾ ದುರಸ್ತಿ ಮಾಡಲು ವೆಚ್ಚವಾಗುತ್ತದೆ ಎಂದು ದುರಸ್ತಿಗಾರರು ತಿಳಿಸಿದ್ದಾರೆ. ಈಗ ಮತ್ತೆ ತಂತ್ರಜ್ಞಾನ ಬದಲಾಗಿದ್ದು, ನೂತನ ತಂತ್ರಜ್ಞಾನ ಹೊಂದಿದ ಸಿಸಿ ಕ್ಯಾಮೆರಾ ಅಳವಡಿಸಲು ತೇರದಾಳ ಹಾಗೂ ರಬಕವಿ ನಗರಸಭೆ ಹಾಗೂ ಪುರಸಭೆಗಳಿಗೆ ಪ್ರಸ್ತಾವನೆ ಕಳುಹಿಸಲಾಗುವುದು
. – ಅಶೋಕ ಸದಲಗಿ, ಸಿಪಿಐ ಬನಹಟ್ಟಿ ವೃತ್ತ