Advertisement

ಅರಸು ಭವನ-ವೀರಶೈವ ಹಾಸ್ಟೇಲ್‌ ನಿವೇಶನಕ್ಕೆ ಪ್ರಸ್ತಾಪ

10:59 AM Apr 01, 2022 | Team Udayavani |

ಆಳಂದ: ಪಟ್ಟಣದಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಕೆ, ಸ್ವತ್ಛತೆ, ಕಸ ವಿಲೇವಾರಿ, ಚರಂಡಿ ನಿರ್ವಹಣೆ ಸೇರಿದಂತೆ ವಾರ್ಡ್‌ ಸಮಸ್ಯೆಗಳಿಗೆ ಸ್ಪಂದಿಸದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು ಒತ್ತಾಯಿಸಿದರು.

Advertisement

ಪುರಸಭೆಯಲ್ಲಿ ಗುರುವಾರ ಅಧ್ಯಕ್ಷೆ ರಾಜಶ್ರೀ ಶ್ರೀಶೈಲ ಖಜೂರಿ ಅಧ್ಯಕ್ಷತೆಯಲ್ಲಿ ಕರೆದ ಆಡಳಿತ ಮಂಡಳಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪರಿಸರ ಅಭಿಯಂತರರು ಸದಸ್ಯರ ಯಾವುದೇ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಸಿಬ್ಬಂದಿ ಮೊಬೈಲ್‌ ಯಾವಾಗಲೂ ಸ್ವಿಚ್‌ ಆಫ್‌ ಆಗಿರುತ್ತದೆ. ಆದ್ದರಿಂದ ಇವರನ್ನೆಲ್ಲ ಕೂಡಲೇ ಅಮಾನತು ಮಾಡಬೇಕು ಎಂದು ಸದಸ್ಯ ಮೃತ್ಯುಂಜಯ ಆಲೂರ, ಆಸೀಫ್‌ ಚೌಸ್‌, ಸೋಮಶೇಖರ ಹತ್ತರಕಿ ಇನ್ನಿತರರು ಆಗ್ರಹಿಸಿದರು.

ವಾರ್ಡ್‌ 1ರಲ್ಲಿ ಕೊಳವೆ ಬಾವಿ ತೋಡಿ ನಾಲ್ಕು ತಿಂಗಳಾದರೂ ಮೋಟಾರ್‌ಗೆ ವಿದ್ಯುತ್‌ ಸಂಪರ್ಕ ಒದಗಿಸಿಲ್ಲ ಎಂದು ಮಹಿಳಾ ಸದಸ್ಯೆ ಸಭೆ ಗಮನಕ್ಕೆ ತಂದರು. ಈ ಕುರಿತು ಕ್ರಮಕ್ಕೆ ಮುಖ್ಯಾಧಿಕಾರಿಗಳು ಸೂಚಿಸಿದರು.

ಸದಸ್ಯೆ ಆಸ್ಮೀತಾ ಚಿಟಗುಪ್ಪಕರ್‌ ಮಾತನಾಡಿ, ರಜ್ವಿರೋಡ್‌ನಿಂದ ಆರ್ಯ ಸಮಾಜದ ಮಂದಿರದ ವರೆಗೆ ನಳಕ್ಕೆ ನೀರು ಕಲ್ಪಿಸುವಂತೆ ಒತ್ತಾಯಿಸಿದರು.

ಸದಸ್ಯ ಶ್ರೀಶೈಲ ಪಾಟೀಲ, ಮೃತ್ಯುಂಜಯ ಆಲೂರೆ, ಅಕ್ರಮ ನಳ ಕಡಿತಗೊಳಿಸಬೇಕು. ಟ್ಯಾಕ್ಸ್‌ ವಸೂಲಾತಿ ಹೆಚ್ಚಿಸಬೇಕು ಎಂದು ಹೇಳಿದರು. ಕಾಂಗ್ರೆಸ್‌ ಸದಸ್ಯೆ ಕವಿತಾ ಸಂಜಯ ನಾಯಕ, 14ನೇ ಹಣಕಾಸಿನ ವಾರ್ಡ್‌ಗೆ ಪರಿಶಿಷ್ಟ ಜಾತಿ ಅನುದಾನ ನೀಡುವಂತೆ ಆಗ್ರಹಿಸಿದರು.

Advertisement

ಉಪಾಧ್ಯಕ್ಷ ಈರಣ್ಣಾ ಹತ್ತರಕಿ ಮಾತನಾಡಿ, ಸಿಬ್ಬಂದಿ ಕರ್ತವ್ಯದಿಂದ ನುಣಿಚಿಕೊಂಡರೆ ಸಹಿಸಿಕೊಳ್ಳುವುದಿಲ್ಲ. ವಾರ್ಡ್‌ಗಳಿಗೆ ಭೇಟಿ ನೀಡಿ ಮೂಲಸೌಲಭ್ಯ ಕಲ್ಪಿಸಬೇಕು ಎಂದರು.

ಮಧ್ಯ ಪ್ರವೇಶಿಸಿದ ಮುಖ್ಯಾಧಿಕಾರಿ ವಿಜಯ ಮಹಾಂತೇಶ ಹೂಗಾರ, ಮುಂದೆ ಇಂಥ ಸಮಸ್ಯೆ ಬಾರದಂತೆ ನೋಡಿಕೊಳ್ಳಲಾಗುವುದು. ಕಾಲಾವಕಾಶ ನೀಡಬೇಕು ಎಂದಾಗ ಸದಸ್ಯರು ಸುಮ್ಮನಾದರು. ಪಟ್ಟಣದಲ್ಲಿ ಡಾ| ದೇವರಾಜ ಅರಸು ಭವನ ನಿರ್ಮಾಣ, ವೀರಶೈವ ಸಮಾಜದ ವಸತಿ ನಿಲಯ ಕಟ್ಟಡಕ್ಕೆ ಸಿಎ ಸೈಟ್‌ (ನಿವೇಶನ) ನೀಡಲು ಮೇಲಧಿಕಾರಿಗಳ ಪ್ರಸ್ತಾವನೆ ಕಳುಹಿಸಿ ಒಪ್ಪಿಗೆ ಪಡೆಯಲು ಸಭೆಯಲ್ಲಿ ಅನುಮೋದಿಸಲಾಯಿತು.

ಶಿವಪುತ್ರ ನಡಗೇರಿ, ಲಕ್ಷ್ಮಣ ಝಳಕಿಕರ್‌ ಮಾತನಾಡಿ, ಡಾ| ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ 1.50ಕೋಟಿ ರೂ. ಅನುದಾನವಿದೆ. ಆದರೆ ಇದುವರೆಗೂ ಸಿಎ ಸೈಟ್‌ ಒದಗಿಸಿಲ್ಲ ಏಕೆ ಎಂದು ಪ್ರಶ್ನಿಸಿದರು. ಇದೇ ವೇಳೆ ಪುರಸಭೆಯ ಅನುಪಯುಕ್ತ ವಾಹನಗಳು ಮತ್ತು ಇತರೆ ವಸ್ತುಗಳ ಇ-ಹರಾಜು ಮಾಡಲು ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು. ನಂತರ ಪಟ್ಟಣದ ಅಗತ್ಯ ಸ್ಥಳಗಳಲ್ಲಿ ಸುಲಭ ಶೌಚಾಲಯ ನಿರ್ಮಾಣಕ್ಕೆ ಸ್ಥಳ ಒದಗಿಸಲು ಹಾಗೂ ಗುತ್ತಿಗೆ ಆಧಾರದ ಮೇಲೆ ಕಂಪ್ಯೂಟರ್‌ ನಿರ್ವಾಹಕರ ನೇಮಕಾತಿಗೆ ನಿರ್ಧರಿಸಲಾಯಿತು.

14ನೇ ಹಣಕಾಸು 2019-20ನೇ ಸಾಲಿನ 15 ಲಕ್ಷ ರೂ. ಕ್ರಿಯಾ ಯೋಜನೆ, ಘಟನೋತ್ತರ ಅನುಮೋದನೆ, 15ನೇ ಹಣಕಾಸಿನ ಟಿಂಡರ್‌ ಕರೆಯಲು ಒಪ್ಪಿಗೆ ನೀಡಲಾಯಿತು. ಖಂಡೋಬಾ ದೇವಸ್ಥಾನ, ಮಾಲ್ಗಣಾಧಿಧೀಶ್ವರ, ವಾಸುದೇವಾಯ ದೇವಸ್ಥಾನ ಕಟ್ಟಡಕ್ಕೆ ಪರವಾನಗಿ ನೀಡುವ ಕುರಿತು ಪ್ರಸ್ತಾವಕ್ಕೆ ದಾಖಲೆಗಳಿದ್ದರೆ ನಿಯಮಾನುಸಾರ ಕ್ರಮ ಕೈಗೊಳ್ಳಲು ಸದಸ್ಯರು ಸೂಚಿಸಿದರು.

ಎಲ್ಲ ವಾರ್ಡ್‌ಗಳಿಗೆ ಬೀದಿ ದೀಪ ಅಳವಡಿಕೆ 2020-21-2022ನೇ ಸಾಲಿನ 15ನೇ ಹಣಕಾಸಿನ ಪರಿಷ್ಕೃತ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಯಿತು. ಬಾಕಿ ಉಳಿದ ಬಿಲ್‌ ಪಾವತಿಗೆ ಅನುಮೋದನೆ ಕಲ್ಪಿಸಲಾಯಿತು.

ವೈಹಿದ್‌ ಜರ್ದಿ, ಅಮಜದ್‌ ಅಲಿ ಖರ್ಜಗಿ, ಸಂತೋಷ ಹೂಗಾರ, ವಿಜಯಲಕ್ಷ್ಮೀ ಷಣ್ಮುಖ, ಶಭಾನಾಬೇಗಂ ಮೀರು, ಕನ್ಯಾಕುಮಾರಿ ಪೂಜಾರಿ ಹಾಗೂ ಇತರ ಸದಸ್ಯರು, ವ್ಯವಸ್ಥಾಪಕ ಶಂಭುಲಿಂಗ ಕಿನ್ನೆ, ಕಿರಿಯ ಅಭಿಯಂತರ ಜಗದೀಶ, ಪರಿಸರ ಅಭಿಯಂತರ ರವಿಕಾಂತ ಮಿಸ್ಕಿನ್‌, ಸಿಬ್ಬಂದಿ ಅಂಬರಾಯ ಲೋಕಾಣೆ, ನೈರ್ಮಲ್ಯ ನಿರೀಕ್ಷಕ ಲಕ್ಷ್ಮಣ ತಳವಾರ, ರಾಘವೇಂದ್ರ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next