Advertisement

Prophet Muhammad (ಸ): ಸಮಾನತೆಯ ಹರಿಕಾರ- ಇಂದು ಪ್ರವಾದಿ ಮುಹಮ್ಮದರ ಜನ್ಮದಿನ

11:58 PM Sep 27, 2023 | Team Udayavani |

ಕತ್ತಲು ತುಂಬಿದ ಪರಿಸರ. ಆ ಸಮಾಜದಲ್ಲಿ ಅಸ್ಪೃಶ್ಯ ಎಂದು ಪರಿಗಣಿಸಲ್ಪಟ್ಟ ಕರ್ರಗಿನ ಮೈಬಣ್ಣದ ಬಿಲಾಲ್‌ ಒಂದು ಮೂಲೆಯಲ್ಲಿ ನಿಂತಿದ್ಧಾರೆ. ಅವರು ಕುರೈಶಿ ನಾಯಕ ಉಮಯ್ಯ ಬಿನ್‌ ಖಲಫ್ರ ಗುಲಾಮರಾಗಿದ್ದರು. ಒಂದು ದಿನ ಪ್ರವಾದಿ ಮುಹಮ್ಮದರು ನೇರವಾಗಿ ಬಂದು ಅವರನ್ನು ಆಲಂಗಿಸುತ್ತಾರೆ. ಮೇಲುಡುಪನ್ನು ಧರಿಸದೆ ಇದ್ದ ಬಿಲಾಲರಿಗೆ ಆ ಆಲಿಂಗನದಿದ ರೋಮಾಂಚನ ವಾಗುತ್ತದೆ. ಏಕೆಂದರೆ ಅವರ ಶರೀರವನ್ನು ಇದುವರೆಗೆ ಯಾರೂ ಸ್ಪರ್ಶಿಸಿರಲಿಲ್ಲ. ಪ್ರೀತಿಯ ಆಲಿಂಗನದಿಂದ ಮೂಕವಿಸ್ಮಿತರಾದ ಬಿಲಾಲರ ಬಾಯಿಯಿಂದ ಮಾತುಗಳು ಹೊರಡಲಿಲ್ಲ. ಜಗತ್ತಿನ ಜನರ ಪಾಲಿಗೆ ಅನುಗ್ರಹಿತರಾಗಿ ಆಗತರಾದ ದೈವಿಕ ಗ್ರಂಥಗಳಲ್ಲಿ ನಿಮಗೆ ಇವರಲ್ಲಿ ಮಾದರಿ ಇದೆ ಎಂದು ಪ್ರಸ್ತಾವಿಸಲ್ಪಟ್ಟ ಪ್ರವಾದಿ ಮುಹಮ್ಮದ(ಸ)ರ ಕುರಿತು ಅರಿತ ಬಿಲಾಲ್‌, ಮುಂದಿನ ದಿನಗಳಲ್ಲಿ ಅವರ ಅನುಯಾಯಿಯಾಗಿ ಮಾರ್ಪಡುತ್ತಾರೆ.

Advertisement

ನಿರಂತರವಾಗಿ ಓರ್ವ ಮನುಷ್ಯ ತನ್ನ ಯಜಮಾನನಿಂದ ಕಿರುಕುಳ ಅನುಭವಿಸುತ್ತಿರುವುದನ್ನು ಕಂಡು ಸಹಿಸಲಾಗದ ಮೃದು ಹೃದಯಿ ಪ್ರವಾದಿ ಮುಹಮ್ಮದ(ಸ)ರ ಗೆಳೆಯ ಅಬೂಬಕ್ಕರ್‌ ಸಿದ್ದೀಕ್‌ ಬಿಲಾಲ್‌ರನ್ನು ಅಪಾರ ಹಣ ಕೊಟ್ಟು ಖರೀದಿಸಿ ಸ್ವತಂತ್ರಗೊಳಿಸುತ್ತಾರೆ. ಅಬೂಬಕ್ಕರ್‌ ಆ ಸಮಾಜದ ಓರ್ವ ಪ್ರಸಿದ್ಧ ಬಟ್ಟೆ ವ್ಯಾಪಾರಿಯಾಗಿದ್ದರು. ಈ ಮೂಲಕ ಸಹೋದರತೆಗೆ, ಮನುಷ್ಯ ಸಮಾನತೆಗೆ ಹೊಸ ಭಾಷ್ಯ ಬರೆಯಲ್ಪಡು ತ್ತದೆ. ಬಿಲಾಲರು ತಮ್ಮ ಮುಂದಿನ ಜೀವನ ವನ್ನು ಪ್ರವಾದಿಯ ಸಾನಿಧ್ಯದಲ್ಲಿ ಕಳೆಯುತ್ತಾರೆ. ಪ್ರವಾದಿ ಮುಹಮ್ಮದರು ಪ್ರಥಮ ಆದಾನ್‌ (ನಮಾಝಿಗಾಗಿ ಜನರನ್ನು ಆಹ್ವಾನಿಸುವ ಕರೆ) ಕೊಡುವ ಸೌಭಾಗ್ಯವನ್ನು ಬಿಲಾಲರಿಗೆ ನೀಡು ತ್ತಾರೆ. ಇವರು ಇತಿಹಾಸದ ಪ್ರಥಮ ಮುಅದ್ದಿನ್‌ ಎಂದು ಗುರು ತಿಸಲ್ಪಡುತ್ತಾರೆ. ಹಂತ ಹಂತವಾಗಿ ಗುಲಾಮಗಿರಿಯನ್ನೇ ನಿರ್ನಾಮ ಗೊಳಿಸಿದ ಶ್ರೇಯಸ್ಸು ಪ್ರವಾದಿ ಮುಹಮ್ಮದ(ಸ)ರಿಗೆ ಸಲ್ಲುತ್ತದೆ.

ಮನುಷ್ಯರೆಲ್ಲರೂ ಸಮಾನರು
ಮನುಷ್ಯರೆಲ್ಲರೂ ಸಮಾನರು ಎಂಬುದು ಪ್ರವಾದಿ ಮುಹಮ್ಮದರ ಬೋಧನೆಗಳ ಪೈಕಿ ಬಹಳ ಪ್ರಮುಖವಾದದ್ದು. ಮನುಷ್ಯನನ್ನು ದೇವನು ಗೌರವಾರ್ಹವಾಗಿ ಸೃಷ್ಟಿಸಿದ್ಧಾನೆ. ಸಮಾನತೆ ಇರುವಲ್ಲಿ ಗೌರವವಿರುತ್ತದೆ. ಗೌರವದ ವಾತಾವರಣ ಇದ್ದರೆ ಅದು ಪ್ರಾಮಾಣಿಕ ಪ್ರೀತಿಗೆ ಕಾರಣವಾಗುತ್ತದೆ. ಪ್ರವಾದಿ ಮುಹಮ್ಮದರ ಬೋಧನೆಯ ಪ್ರಕಾರ ಮನುಷ್ಯರೆಲ್ಲರೂ ದೇವನ ಕುಟುಂಬವಾಗಿದ್ಧಾರೆ. ಸಮಾನತೆ ಎಂಬುದು ಮನುಷ್ಯನ ಜನ್ಮಸಿದ್ಧ ಹಕ್ಕು ಎಂದವರು ಪ್ರತಿಪಾದಿಸಿದರು. ಆದುದರಿಂದ ಚರ್ಮದ ಬಣ್ಣ, ಹುಟ್ಟಿದ ಸ್ಥಳ, ಜನಾಂಗ, ಹುಟ್ಟಿದ ದೇಶ ಇವುಗಳ ಆಧಾರದಲ್ಲಿ ಯಾರೊಂದಿಗೂ ಅಸಮಾನತೆಯನ್ನು ತೋರಿಸುವಂತಿಲ್ಲ. ಏಕೆಂದರೆ ಇವುಗಳ ಆಯ್ಕೆಯಲ್ಲಿ ಮನುಷ್ಯನ ಪಾಲಿಲ್ಲ. ಮನುಷ್ಯರೆಲ್ಲರೂ ಒಬ್ಬ ದೇವನ ಸೃಷ್ಟಿಗಳು. ಎಲ್ಲರ ಆದಿಪಿತ ಮತ್ತು ಆದಿಮಾತೆ ಒಬ್ಬರೇ ಆಗಿದ್ಧಾರೆ. ನಾವೆಲ್ಲರೂ ಪರಸ್ಪರ ಸಹೋದರ ಸಹೋದರಿಯರು. ಧರ್ಮನಿಷ್ಠೆಯು ಇತರರ ಮೇಲೆ ದಬ್ಟಾಳಿಕೆ ನಡೆಸಲು ಸ್ವತಹ ದೈವತ್ವಕ್ಕೇರಲು ಅವಕಾಶವನ್ನು ಕೊಡುವುದಿಲ್ಲ. ಶ್ರೇಷ್ಠತೆಗೆ ಆಧಾರ ದೇವ ಭಕ್ತಿ ಮಾತ್ರವಾಗಿದೆ.

ಆರಾಧನೆಗಳಲ್ಲಿ ಸಮಾನತೆಯ ಪ್ರಾಯೋಗಿಕ ನಿದರ್ಶನಗಳು
ಸಮಾನತೆ ಎಂಬುದು ಕೇವಲ ಗ್ರಂಥಗಳಲ್ಲಿ ಮಾತಿಗೆ ಸೀಮಿತ ವಾಗಿದ್ದರೆ ಸಾಲದು. ಪ್ರಾಯೋಗಿಕವಾಗಿ ಜಾರಿಗೆ ಬರಬೇಕು. ಪ್ರವಾದಿ ಮುಹಮ್ಮದರು ಕಲಿಸಿಕೊಟ್ಟ ಆರಾಧನೆಗಳಲ್ಲಿ ಸಮಾನತೆಯ ದರ್ಶನವಾಗುತ್ತದೆ. ದಿನಕ್ಕೆ ಐದು ಬಾರಿ ಸಾಮೂಹಿಕವಾಗಿ ನಿರ್ವಹಿಸುವ ನಮಾಝನ್ನೇ ತೆಗೆದುಕೊಂಡರೂ ಅಲ್ಲಿ ಎಲ್ಲರೂ ಭುಜಕ್ಕೆ ಭುಜ ತಾಗಿಸಿ ನಿಲ್ಲುತ್ತಾರೆ. ಸಾಷ್ಟಾಂಗವೆರಗುವಾಗ ಹಿಂದಿನ ಸಾಲಿನಲ್ಲಿ ಆ ಊರಿನ ಅರಸ ಬಂದು ನಿಂತಿದ್ದರೂ ಅವನ ಮುಂದಿನ ಸಾಲಿನಲ್ಲಿ ಎದುರುಬದಿ ನಿಂತ ವ್ಯಕ್ತಿ ಕೂಲಿಯಾಳಾಗಿದ್ದರು ಅವನ ಕಾಲಿನ ಹಿಂಭಾಗದ ಬಳಿಯೇ ಇವನ ಹಣೆಯು ಬಂದು ತಲುಪು ತ್ತದೆ. ಇದು ನಾನು ಶ್ರೇಷ್ಠ ಎಂಬ ಅಹಂ ಅನ್ನು ಇಲ್ಲವಾಗಿಸುತ್ತದೆ. ಇಲ್ಲಿ ಮೇಲು-ಕೀಳು ಶ್ರೀಮಂತ-ಬಡವ ಎಂಬ ಭೇದ-ಭಾವವೇ ನಾಸ್ತಿಯಾಗುತ್ತದೆ. ದೇವನ ಆಸ್ಥಾನದಲ್ಲಿ ಎಲ್ಲರೂ ಸಮಾನರು.

ಅದೇ ರೀತಿ ಪವಿತ್ರ ಹಜ್‌ ಕರ್ಮವನ್ನು ನೆರವೇರಿಸುವಾಗಲೂ ವಿಶ್ವ ಸಹೋದರತೆ, ಸಮಾನತೆಯ ಪ್ರತ್ಯಕ್ಷ ದರ್ಶನವಾಗುತ್ತದೆ. ಜಗತ್ತಿನ ದಶ ದಿಕ್ಕುಗಳಿಂದ ಜನರು ಬರುತ್ತಾರೆ. ಎಲ್ಲ ಬಣ್ಣದವರು, ದೇಶದವರು, ಭಾಷೆಯವರು ಪರಸ್ಪರ ಎಲ್ಲ ಕರ್ಮಗಳನ್ನು ಜತೆಯಾಗಿ ನಿರ್ವಹಿಸುತ್ತಾರೆ. ಯಾವುದೇ ಅಸಮಾನತೆಯ ಪ್ರದರ್ಶನಕ್ಕೆ ಇಲ್ಲಿ ಎಳ್ಳಷ್ಟು ಅವಕಾಶವಿಲ್ಲ. ಅಸಮಾನತೆಯ ಪ್ರದರ್ಶನವು ಮನುಷ್ಯನ ಅಜ್ಞಾನದ ಕಾರಣದಿಂದ ನಡೆಯುತ್ತದೆ.

Advertisement

ಸ್ತ್ರೀ-ಪುರುಷ ಸಮಾನತೆ
ಮನುಷ್ಯರೆಲ್ಲರೂ ಸಮಾನರು ಎಂದಾದ ಮೇಲೆ ಸ್ತ್ರೀ-ಪುರುಷರು ಸಮಾನರಾಗಿದ್ಧಾರೆ. ಸ್ತ್ರೀಯು ಸಮಾನತೆಗೆ ಅರ್ಹಳೇ ಎಂಬುದು ಹಿಂದಿನಿದಲೂ ಚರ್ಚೆಯಾಗುತ್ತಾ ಬಂದಿರುವ ವಿಷಯ. ಈ ನಿಟ್ಟಿನಲ್ಲಿ ಪ್ರವಾದಿ ಮುಹಮ್ಮದರ ಬೋಧನೆಗಳು ಸಮಾಜದ ಕಣ್ಣು ತೆರೆಸು ವುದಕ್ಕೆ ಪರ್ಯಾಪ್ತವಿದೆ. ಎಲ್ಲ ಕಾಲ ಗಳಲ್ಲಿಯೂ ಪ್ರವಾದಿ ಮುಹಮ್ಮದರು ಸ್ತ್ರೀ ವಿಮೋಚಕ ರೆಂದೇ ಪರಿಗಣಿಸ ಲ್ಪಟ್ಟಿದ್ದರು. ದೇವನ ಮುಂದೆ ಸ್ತ್ರೀ-ಪುರುಷ ಎಂಬ ಭೇದಭಾವವಿಲ್ಲ. “ಪುರುಷನಾಗಿರಲಿ ಸ್ತ್ರೀಯಾಗಿರಲಿ ಯಾರು ಸತ್ಕರ್ಮವೆಸಗುವನೋ ಅವನು ಸತ್ಯ ವಿಶ್ವಾಸಿಯಾಗಿದ್ದರೆ, ಅವನಿಗೆ ನಾವು ಇಹಲೋಕದಲ್ಲಿ ಪರಿಶುದ್ಧ ಜೀವನವನ್ನು ದಯಪಾಲಿಸುವೆವು ಮತ್ತು ಇಂತಹವರಿಗೆ ಪರಲೋಕದಲ್ಲಿ ಅವರ ಅತ್ಯುತ್ತಮ ಕರ್ಮಗಳ ಅನುಸಾರ ಪ್ರತಿಫ‌ಲ ನೀಡಲ್ಪಡುವುದು’ (ಪವಿತ್ರ ಕುರ್‌ಆನ್‌: 16: 97)

ಹೆಣ್ಣು ಮಗು ಜನಿಸುವುದನ್ನು ಇಷ್ಟಪಡದ ಸಮಾಜದಲ್ಲಿ ಹೆಣ್ಣು ಮಗು ಜೀವಂತವಿರಲಿಕ್ಕಾಗಿ ಹೋರಾಟ ನಡೆಸಿದ ಮಹಾನುಭಾವರು ಪ್ರವಾದಿ ಮುಹಮ್ಮದ್‌. ಹೆಣ್ಣು ಗಂಡು ಮಕ್ಕಳ ಮಧ್ಯೆ ಭೇದಭಾವ ಮಾಡಬಾರದು. ಅವಳಿಗೂ ಉತ್ತಮ ಶಿಕ್ಷಣ-ತರಬೇತಿ ನೀಡಬೇಕು. ವಿವಾಹ ಪ್ರಾಯಕ್ಕೆ ತಲುಪಿದಾಗ ಅವಳ ಅನುಮತಿ ಇಲ್ಲದೆ ಅವಳ ಇಷ್ಟಕ್ಕೆ ವಿರುದ್ಧವಾಗಿ ವಿವಾಹ ಮಾಡಿಕೊಡುವಂತಿಲ್ಲ. ಅವಳಿಗಿಷ್ಟ ವಿಲ್ಲದ ವಿವಾಹ ಸಂಬಂಧದಲ್ಲಿ ಮುಂದುವರಿಯುವಂತೆ ಅವಳನ್ನು ಬಲಪಡಿಸುವಂತಿಲ್ಲ. ಅವಳು ಉದ್ಯೋಗವನ್ನು ಮಾಡಬಹುದು. ವ್ಯಾಪಾರವನ್ನು ಮಾಡಬಹುದು. ಆಡಳಿತದಲ್ಲಿ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಬಹುದು. ಆಕೆಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಕಡ್ಡಾಯವಾಗಿ ಪಾಲನ್ನು ನೀಡಬೇಕು ಇತ್ಯಾದಿಗಳನ್ನು ಪ್ರತಿ
ಪಾದಿಸಿದ್ದು ಮಾತ್ರವಲ್ಲ ಕೇವಲ 23 ವರ್ಷಗಳ ಸಣ್ಣ ಅವಧಿಯಲ್ಲಿ ಇವೆಲ್ಲವುಗಳನ್ನು ಪ್ರಾಯೋಗಿಕವಾಗಿ ಜಾರಿಗೆ ತಂದು ಒಂದು ಮಾದರಿ ಸಮಾಜವನ್ನು ನಿರ್ಮಿಸಿ ತೋರಿಸಿದವರು ಪ್ರವಾದಿ ಮುಹಮ್ಮದ್‌.

ಮಕ್ಕಳೊಂದಿಗೂ ಸಮಾನತೆಯ ವರ್ತನೆ
ಮಕ್ಕಳ ಮಧ್ಯೆ ಭೇದ ಭಾವ ಮಾಡಬಾರದು, ಸಮಾನತೆಯಿಂದ ವರ್ತಿಸಬೇಕು ಎಂಬುದಾಗಿ ಪ್ರವಾದಿ ಮುಹಮ್ಮದರು ಆದೇಶಿಸಿದ್ಧಾರೆ. ಒಮ್ಮೆ ಓರ್ವ ವ್ಯಕ್ತಿ ತನ್ನ ಒಬ್ಬ ಪುತ್ರನಿಗೆ ಮಾತ್ರ ವಿಶೇಷ ಸವಲತ್ತು ಒದಗಿಸಿರುವುದನ್ನು ಪ್ರವಾದಿಯವರ ಬಳಿ ಪ್ರಸ್ತಾವಿಸಿದಾಗ ಅದನ್ನು ಹಿಂದೆಗೆದುಕೊಳ್ಳುವಂತೆ ಹಾಗೂ ಎಲ್ಲ ಮಕ್ಕಳೊಂದಿಗೆ ಸಮಾನತೆಯ ವರ್ತನೆಯನ್ನು ತೋರಿಸಬೇಕು ಎಂಬುದಾಗಿ ಉಪದೇಶಿಸಿದರು. ಪ್ರವಾದಿ ಮುಹಮ್ಮದರ ಈ ಎಲ್ಲ ಬೋಧನೆ, ಮಾರ್ಗದರ್ಶನ, ಅನುಷ್ಠಾನದ ಮಾದರಿಗಳೆಲ್ಲವೂ ಇಂದಿಗೂ ಪ್ರಸ್ತುತವಾಗಿವೆ.

ಸಬೀಹಾ ಫಾತಿಮಾ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next