ಬೆಂಗಳೂರು: ಸೂಕ್ತ ದಾಖಲೆ, ಅಗತ್ಯ ಮಾಹಿತಿ ಒಳಗೊಂಡಂತೆ ನಿಯಮಾನುಸಾರ ಆನ್‌ಲೈನ್‌ನಲ್ಲಿ ವಿವರ ಸಲ್ಲಿಸಿ ಶುಲ್ಕ ಪಾವತಿಸಿದರೆ 48 ಗಂಟೆಯಲ್ಲೇ ಆಸ್ತಿ ನೋಂದಣಿ ಮಾಡಿಕೊಳ್ಳಬಹುದು. ಪಾಸ್‌ಪೋರ್ಟ್ ಪಡೆಯುವ ಮಾದರಿಯಲ್ಲೇ ಆಸ್ತಿ ನೋಂದಣಿ ವ್ಯವಸ್ಥೆ ಇದಾಗಿದೆ!
ಆಸ್ತಿ ನೋಂದಣಿ ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳ ಹಾವಳಿ, ಅನಗತ್ಯ ವಿಳಂಬ, ಕಚೇರಿಗಳ ಅಲೆದಾಟ ತಪ್ಪಿಸುವ ಸಲುವಾಗಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು “ನೋಂದಣಿ ಪೂರ್ವ ಮಾಹಿತಿ ದಾಖಲೀಕರಣ’ (ಪಿಆರ್‌ಡಿ) ವ್ಯವಸ್ಥೆ ಜಾರಿಗೆ ಸಿದ್ಧತೆ ನಡೆಸಿದೆ. ಆನ್‌ಲೈನ್‌ನಲ್ಲಿ ಸಲ್ಲಿಸುವ ದಾಖಲೆಗಳು, ಶುಲ್ಕ ಪಾವತಿ ಸಮಪರ್ಕವಾಗಿದ್ದರೆ 48 ಗಂಟೆಯಲ್ಲೇ ಸಂಬಂಧಪಟ್ಟ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಆಸ್ತಿ ನೋಂದಣಿ ಪೂರ್ಣಗೊಳ್ಳಲಿದೆ.
ಸದ್ಯದಲ್ಲೇ ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ನೂತನ ವ್ಯವಸ್ಥೆಯನ್ನು ಜಾರಿಗೊಳಿಸಲು ನಿರ್ಧರಿಸಿರುವ ಇಲಾಖೆ, ಸ್ಪಂದನೆ ಆಧರಿಸಿ ರಾಜ್ಯಾದ್ಯಂತ ವಿಸ್ತರಿಸಲಿದೆ. ಉದ್ದೇಶಿತ ಹೊಸ ವ್ಯವಸ್ಥೆ ಯಶಸ್ವಿಯಾಗಿ ನಡೆದರೆ ಮಧ್ಯವರ್ತಿಗಳ ಹಾವಳಿ, ಇತರರ ನೆರವು ಪಡೆಯದೆ ಖರೀದಿದಾರರೇ ನೇರವಾಗಿ ಆಸ್ತಿ ಖರೀದಿಸಿ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ.
ರಾಜ್ಯದಲ್ಲಿ ವಾರ್ಷಿಕವಾಗಿ 20 ಲಕ್ಷಕ್ಕೂ ಹೆಚ್ಚು ಆಸ್ತಿ ನೋಂದಣಿಯಾಗುತ್ತವೆ. ಇದರಲ್ಲಿ ಶೇ.70ರಷ್ಟು ಬೆಂಗಳೂರಿನಲ್ಲೇ ನೋಂದಣಿಯಾಗುತ್ತದೆ. ಹಾಗಾಗಿ, ವರ್ಷದ ಬಹುಪಾಲು ದಿನಗಳಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆ ನಡೆಯುತ್ತಿರುತ್ತದೆ. ಆದರೆ, ಈ ಪ್ರಕ್ರಿಯೆಯನ್ನು ಆಸ್ತಿಯ ಖರೀದಿದಾರರು ಏಕಾಂಗಿಯಾಗಿ ಕೈಗೊಳ್ಳಲು ಸಾಧ್ಯವಿಲ್ಲ ಎಂಬಂತಹ ಸ್ಥಿತಿ ಇದೆ. ಅಂದರೆ ಅಗತ್ಯ ದಾಖಲೆ ಹೊಂದಿಸಿಕೊಳ್ಳುವುದು, ಆಸ್ತಿಯ ಪ್ರಸ್ತುತ ಮಾರ್ಗಸೂಚಿ ದರದ ಮಾಹಿತಿ ಪಡೆಯುವುದು, ನಿಗದಿತ ಶುಲ್ಕದ ವಿವರ ತಿಳಿದು ಡಿ.ಡಿ. ಪಡೆಯುವುದರ ಜತೆಗೆ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಇಡೀ ದಿನ ಖುದ್ದಾಗಿ ಹಾಜರಿದ್ದು ನೋಂದಾಯಿಸಿಕೊಳ್ಳಬೇಕಿದೆ. ಇದರಿಂದ ಸಮಯ, ಹಣ ಪೋಲಾಗುತ್ತಿದೆ. ಇದನ್ನು ತಪ್ಪಿಸುವ ಸಲುವಾಗಿ ಮುದ್ರಾಂಕ ಮತ್ತು ನೋಂದಣಿ ಇಲಾಖೆ ಕುಳಿತಲ್ಲೇ ಆನ್‌ಲೈನ್‌ನಲ್ಲಿ ವಿವರ ಸಲ್ಲಿಸಿ ನಿಗದಿತ ದಿನದಲ್ಲಿ, ಕೆಲವೇ ನಿಮಿಷಗಳಲ್ಲಿ ಆಸ್ತಿ ನೋಂದಣಿ ಮಾಡಿಕೊಳ್ಳುವಂತಹ “ನೋಂದಣಿ ಪೂರ್ವ ಮಾಹಿತಿ ದಾಖಲೀಕರಣ’ ವ್ಯವಸ್ಥೆ ಜಾರಿಗೆ ಬರಲಿದೆ.
ಕಾರ್ಯ ನಿರ್ವಹಣೆ ಹೇಗೆ?: ನೂತನ ವ್ಯವಸ್ಥೆಯಡಿ ಖರೀದಿದಾರರು ತಾವು ಖರೀದಿಸುವ ಆಸ್ತಿಯ ಅಳತೆ, ವಿಳಾಸ ವಿವರ ದಾಖಲಿಸಿ ಆನ್‌ಲೈನ್‌ನಲ್ಲಿ ಸಲ್ಲಿಸಬೇಕು. ಇದನ್ನು ಉಪನೋಂದಣಾಧಿಕಾರಿ ಸಮರ್ಪಕ ಎಂದು ದೃಢೀಕರಿಸಿದ ಬಳಿಕ ನಿಗದಿತ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಿ ತಾವು ಬಯಸುವ ದಿನದಂದು ನೊಂದಣಿ ಮಾಡಿಕೊಳ್ಳುವ ಸಮಯ ದಾಖಲಿಸಬೇಕು.
ಅದನ್ನು 24 ಗಂಟೆಯೊಳಗೆ ಸಂಬಂಧಪಟ್ಟ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಪರಿಶೀಲಿಸಲಾಗುತ್ತದೆ. ಖರೀದಿದಾರ ವಿವರ, ದಾಖಲೆ, ಶುಲ್ಕ ಮೊತ್ತ ಸಮರ್ಪಕವಾ ಗಿದ್ದರೆ ಮುಂದಿನ ಪ್ರಕ್ರಿಯೆಗೆ ಪರಿಗಣಿಸಲಾಗುತ್ತದೆ. ಖರೀದಿದಾರರು ಆಯ್ಕೆ ಮಾಡಿದ ದಿನ ಸಂಬಂಧ ಪಟ್ಟ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಆನ್‌ಲೈನ್‌ನಲ್ಲಿ ಸಲ್ಲಿಸಿರುವ ದಾಖಲೆಗಳನ್ನು ಪ್ರದರ್ಶಿಸಬೇಕು. ಖಾತಾ, ಕರಾರು ಪತ್ರ, ಆಸ್ತಿ ತೆರಿಗೆ ಪಾವತಿ ವಿವರಗಳನ್ನು ತಾಳೆ ಹಾಕುವ ಅಧಿಕಾರಿಗಳು ಸಮರ್ಪಕವಾಗಿರುವುದು ದೃಢಪಟ್ಟರೆ 15ರಿಂದ 20 ನಿಮಿಷದಲ್ಲಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
ಒಂದೊಮ್ಮೆ ಖರೀದಿದಾರರು ಸಲ್ಲಿಸಿರುವ ಮಾಹಿತಿಯಲ್ಲಿ ಗೊಂದಲ, ಮಾರ್ಗಸೂಚಿ ದರದಲ್ಲಿ ವ್ಯತ್ಯಯ, ಇತರೆ ಲೋಪಗಳಿ ದ್ದರೆ ಆ ಬಗ್ಗೆ ಅಧಿಕಾರಿಗಳು ಆನ್‌ಲೈನ್‌ನಲ್ಲೇ ಮಾಹಿತಿ ರವಾನಿಸಲಿದ್ದಾರೆ. ಅದನ್ನು ಸರಿಪಡಿಸಿ ಸಲ್ಲಿಸಿದರೆ ಉಳಿದ ಪ್ರಕ್ರಿಯೆಗಳು ಸುಗಮವಾಗಿ ನಡೆಯಲಿ.
ಬೆಂಗಳೂರಿನಲ್ಲಿ ಪ್ರಾಯೋಗಿಕ ಜಾರಿ ಪ್ರಾಯೋಗಿಕವಾಗಿ ಬೆಂಗಳೂರಿನ 43 ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೂತನ ವ್ಯವಸ್ಥೆ ಜಾರಿಯಾಗಲಿದೆ. ಅದರ ಕಾರ್ಯನಿರ್ವಹಣೆಯನ್ನು ಗಮನಿಸಿ ಮುಂದೆ ರಾಜ್ಯಾದ್ಯಂತ ವಿಸ್ತರಿಸಲಾಗುವುದು. ಒಟ್ಟಾರೆ ಪಾಸ್‌ಪೋರ್ಟ್ ಪಡೆಯುವ ಮಾದರಿಯಲ್ಲಿ ಆಸ್ತಿ ನೋಂದಣಿ ವ್ಯವಸ್ಥೆ ಜಾರಿಯಾಗಲಿದೆ.
ಪಿಆರ್‌ಡಿ ವ್ಯವಸ್ಥೆಯಡಿ ಆಸ್ತಿದಾರರು ತಾವಿರುವ ಸ್ಥಳದಲ್ಲೇ ಖರೀದಿಸುವ ಆಸ್ತಿಗೆ ಸಂಬಂಧಪಟ್ಟ ದಾಖಲೆ ಸಲ್ಲಿಸಿ, ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಿ ಲಭ್ಯವಿರುವ ದಿನಾಂಕದಲ್ಲಿ ಆಸ್ತಿ ನೋಂದಣಿಗೆ ಸಮಯ ಕಾಯ್ದಿರಿಸಬಹುದು.
ಡಾ.ಕೆ.ವಿ. ತ್ರಿಲೋಕ್‌ಚಂದ್ರ, ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತ.