Advertisement

Karnataka ರಾಜ್ಯ ಸರಕಾರಿ ನೌಕರರ ಆಸ್ತಿ ಸಾರ್ವಜನಿಕ ಮಾಹಿತಿಗೆ

11:29 PM Mar 02, 2024 | |

ಬೆಂಗಳೂರು: ಸಚಿವಾಲಯ ಮತ್ತು ಪ್ರಮುಖ ಸರಕಾರಿ ಕಚೇರಿಗಳಲ್ಲಿ ಹೆಬ್ಬೆರಳು ಆಧಾರಿತ ಬಯೋಮೆಟ್ರಿಕ್‌ ಹಾಜರಾತಿ ವ್ಯವಸ್ಥೆ ಬದಲು ಮುಖ ಗುರುತಿಸುವಿಕೆ ಹಾಜರಾತಿ ವ್ಯವಸ್ಥೆ ಮಾಡಬಹುದು ಎಂದು ಕರ್ನಾಟಕ ಆಡಳಿತ ಸುಧಾರಣ ಆಯೋಗ-2 ಸರಕಾರಕ್ಕೆ ಶಿಫಾರಸು ಮಾಡಿದೆ.

Advertisement

ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ತನ್ನ 7ನೇ ವರದಿಯನ್ನು ಸಲ್ಲಿಸಿದ ಆಯೋಗದ ಅಧ್ಯಕ್ಷ ಟಿ.ಎಂ.ವಿಜಯ ಭಾಸ್ಕರ್‌, ಸಿಬಂದಿ ಮತ್ತು ಆಡಳಿತ ಸುಧಾರಣೆ, ಆರ್ಥಿಕ, ಕಾನೂನು, ಘಿಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ ಸಹಿತ 8 ಇಲಾಖೆಗಳಿಗೆ ಸಂಬಂಧಿಸಿದ 527 ಶಿಫಾರಸುಗಳನ್ನು ನೀಡಿದೆ. ಐಎಎಸ್‌ ಅಧಿಕಾರಿಗಳ ಸ್ಥಿರಾಸ್ತಿ ವಿವರಗಳನ್ನು ಕೇಂದ್ರ ಸರಕಾರವು ಸಾರ್ವಜನಿಕವಾಗಿ ಇಟ್ಟಂತೆ ಎ, ಬಿ ಮತ್ತು ಸಿ ಸಮೂಹದ ಸರಕಾರಿ ನೌಕರರು, ಮಂಡಳಿ, ನಿಗಮಗಳ ನೌಕರರ ಆಸ್ತಿ ಹಾಗೂ ಹೊಣೆಗಾರಿಕೆಗಳನ್ನು ಜಾಲತಾಣಗಳಲ್ಲಿ ಇಡಬಹುದು ಎಂದು ಸಲಹೆ ನೀಡಿದೆ.

ಒಂದೇ ಸಚಿವಾಲಯ, ಇಲಾಖೆಯ ಒಂದೇ ವಿಭಾಗದಲ್ಲಿ ಸರಕಾರಿ ನೌಕರರು ದೀರ್ಘ‌ಕಾಲ ಉಳಿಯುವುದರಿಂದ ಸಾಮರ್ಥ್ಯ ವರ್ಧನೆ ಆಗುತ್ತಿಲ್ಲ. ದೀರ್ಘ‌ಕಾಲದ ಉದ್ಯೋಗಿ ಗಳು ಪಟ್ಟಭದ್ರ ಹಿತಾಸಕ್ತಿ ಬೆಳೆಸಿಕೊಳ್ಳಬಹುದು. ಹೀಗಾಗಿ ಕನಿಷ್ಠ 1 ವರ್ಷದ ಕೂಲಿಂಗ್‌ ಆಫ್ ಅವಧಿ ಇರಬೇಕು.

ಹೊರಗುತ್ತಿಗೆ ನೌಕರರನ್ನು ಪ್ರತಿ 3-5 ವರ್ಷಗಳ ಸೇವೆ ಬಳಿಕ ಇಲಾಖೆಗಳ ನಡುವೆ ಬದಲಾಯಿಸಲು ಸಲಹೆ ನೀಡಲಾಗಿದೆ. ಎಲ್ಲ ಇಲಾಖೆಗಳಲ್ಲಿ ಖಾಲಿ ಇರುವ ಬೆರಳಚ್ಚುಗಾರರ ಹುದ್ದೆಗಳನ್ನು ರದ್ದುಪಡಿಸಿ ಬಹುನುರಿತ ಕೆಲಸಗಾರರು ಎಂದು ಮರುವಿನ್ಯಾಸ ಮಾಡಬಹುದು.

ಸಕಾಲ ಸೇವೆ ಕೊಡದಿದ್ದರೆ ಪರಿಹಾರ ಹೆಚ್ಚಳ
ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಲು ಹಾಗೂ ಎನ್‌ಒಸಿ ನೀಡಲು ಎಂಡ್‌-ಟು-ಎಂಡ್‌ ಆನ್‌ಲೈನ್‌ ವ್ಯವಸ್ಥೆಯನ್ನು ಸಿಇಜಿ ಅಥವಾ ಸೇವಾಸಿಂಧು ಅಭಿವೃದ್ಧಿಪಡಿಸಿ, ಕಾರ್ಯಗತ ಗೊಳಿಸಬಹುದು. ರಾಜ್ಯ ತಂತ್ರಾಂಶ ಕೇಂದ್ರವು ಎಲ್ಲ ಇಲಾಖೆ, ನಿಗಮ, ಮಂಡಳಿಗಳಲ್ಲಿ 6 ತಿಂಗಳಿಗೊಮ್ಮೆ ಸೈಬರ್‌ ಸುರಕ್ಷೆಯ ತಪಾಸಣೆ ಕೈಗೊಳ್ಳಬೇಕು. ಪ್ರತಿಯೊಂದು ಸರಕಾರಿ ಜಾಲತಾಣಕ್ಕೆ ಒಬ್ಬ ತಾಂತ್ರಿಕ ಸಲಹೆಗಾರರನ್ನು ನೇಮಿಸ ಬಹುದು. ಸಕಾಲ ಯೋಜನೆಯಡಿ ನಿಗದಿತ ಸಮಯದಲ್ಲಿ ಸೇವೆ ಒದಗಿಸದಿದ್ದರೆ, 1 ದಿನದ ವಿಳಂಬಕ್ಕೆ 250 ರೂ. ಪರಿಹಾರ ನೀಡುವಂತೆ ತಿದ್ದುಪಡಿ ಮಾಡಬಹುದು ಹಾಗೂ ಗರಿಷ್ಠ 25 ಸಾವಿರ ರೂ. ಪರಿಹಾರಕ್ಕೂ ಶಿಫಾರಸು ಮಾಡಿದೆ.

Advertisement

ಎಲ್ಲಕ್ಕೂ 4ಜಿ ವಿನಾಯಿತಿ ಬೇಡ
ಕೆಟಿಪಿಪಿ ಕಾಯ್ದೆ ಸೆಕ್ಷನ್‌ 4(ಜಿ)ಅಡಿಯಲ್ಲಿ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ, ನಿರ್ಮಿತ ಕೇಂದ್ರ, ಕಿಯೋನಿಕ್ಸ್‌ ಮುಂತಾದ ಸಂಸ್ಥೆಗಳಿಗೆ ವಿನಾಯಿತಿ ನೀಡುತ್ತಿದ್ದು, ಯಾವುದೇ ಒಂದು ಆರ್ಥಿಕ ವರ್ಷದಲ್ಲಿ ರಾಜ್ಯ ಮಟ್ಟದ ಒಂದು ಸಂಸ್ಥೆಗೆ 50 ಅಥವಾ 100 ಕೋ. ರೂ. ಹಾಗೂ ಜಿಲ್ಲಾಮಟ್ಟದ ಸಂಸ್ಥೆಗೆ 25 ಕೋ. ರೂ. ಮೀರಿದ ಕಾಮಗಾರಿಗಳಿಗೆ ವಿನಾಯಿತಿ ನೀಡಬಾರದು. ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 5 ಲಕ್ಷ ರೂ.ಗಿಂತ ಕಡಿಮೆ ವೆಚ್ಚದ ಕಾಮಗಾರಿಗಳನ್ನು ಗ್ರಾ. ಪಂ. ಅಥವಾ ನಗರ ಸ್ಥಳೀಯ ಸಂಸ್ಥೆಯೇ ಅನುಷ್ಠಾನ ಮಾಡಬಹುದು.

ಪ್ರಮುಖ ಶಿಫಾರಸುಗಳು
– ಮರಳು, ಜೆಲ್ಲಿ, ಮುರ್ರಂ, ಗ್ರಾನೈಟ್‌ ಅನ್ನು ಜಿಎಸ್‌ಟಿ ಜಿಎಸ್‌ಟಿ ಕಾಯ್ದೆಯ ಸೆಕ್ಷನ್‌ 9(3) ಮತ್ತು 9 (4)ಅಡಿಯಲ್ಲಿ ಮಾರಾಟಗಾರರ ಬದಲು ಖರೀದಿದಾರರಿಂದ ತೆರಿಗೆ ಪಡೆಯುವ ರಿವರ್ಸ್‌ ಚಾರ್ಜ್‌ ಕಾರ್ಯವಿಧಾನದಡಿ ಅಧಿಸೂಚನೆ ಹೊರಡಿಸಬಹುದು.
– ನಿರ್ಮಾಣ ಕ್ಷೇತ್ರದಲ್ಲಿ ತೆರಿಗೆ ವಂಚಿಸಿದವರಿಗೆ ವಂಚಿಸಿದ ತೆರಿಗೆಯ ಐದು ಪಟ್ಟು ದಂಡ ವಿಧಿಸಬಹುದು.
– ಜಿಎಸ್‌ಟಿ ಇಲಾಖೆಯಂತೆ ರಾಜ್ಯದಲ್ಲೂ ತೆರಿಗೆ ವಂಚಕರನ್ನು ಹಿಡಿದು, ಕನಿಷ್ಠ 3 ಕೋ. ರೂ.ವರೆಗೆ ತೆರಿಗೆ, ದಂಡ, ಬಡ್ಡಿ ವಸೂಲಿ ಮಾಡುವ ಅಧಿಕಾರಿಗಳಿಗೆ ಬಹುಮಾನ ನೀಡಬಹುದು.
– ಅಕ್ರಮ ಮದ್ಯ ಮಾರಾಟ, ದಾಸ್ತಾನು, ಸಾಗಣೆ, ಕಲಬೆರಕೆದಾರರು, ಮಾದಕವಸ್ತು ಅಪರಾಧಿಗಳು, ಜೂಜುಕೋರರು, ಗೂಂಡಾಗಳು, ಅನೈತಿಕ ಸಂಚಾರ ಅಪರಾಧಿ, ಕೊಳೆಗೇರಿ ಕಬಳಿಕೆದಾರರು, ಕಳ್ಳಸಾಗಾಣಿಕೆದಾರರಿಗೆ ಪ್ರಸ್ತುತ ವಿಧಿಸುತ್ತಿರುವ ದಂಡದ ಪ್ರಮಾಣವನ್ನು ಪರಿಷ್ಕರಿಸಲೂ ಅಬಕಾರಿ ಇಲಾಖೆಗೆ ಶಿಫಾರಸು ಮಾಡಿದೆ.
– ಅನುದಾನಿತ ಶಿಕ್ಷಕರು, ವಿಶ್ವವಿದ್ಯಾನಿಲಯ, ನಿಗಮ, ಮಂಡಳಿ ಇತ್ಯಾದಿಗಳ ನೌಕರರಿಗೆ ಕುಟುಂಬ ಕಲ್ಯಾಣ ನಿಧಿಯ ವಂತಿಗೆ ದರವನ್ನು ಕನಿಷ್ಠ ಸಂಬಳದ ಶೇಕಡಾವಾರು ಹೆಚ್ಚಿಸಬೇಕು. ಮಾಸಿಕ ಕೊಡುಗೆಯನ್ನು 1,000 ರೂ.ಗೆ ಹೆಚ್ಚಿಸಬಹುದು. ಮರಣ ಪರಿಹಾರವನ್ನು 10 ಲಕ್ಷ ರೂ.ಗೆ ಹೆಚ್ಚಿಸಬಹುದು.
– ಜನನ, ಮರಣ ಪ್ರಮಾಣಪತ್ರಕ್ಕಾಗಿ 1 ವರ್ಷದ ಬಳಿಕ ನೋಂದಣಿ ವಿಳಂಬವಾದರೆ ಆಸ್ಪತ್ರೆ ಅಧಿಕಾರಿಗಳೇ ಜವಾಬ್ದಾರಿ ವಹಿಸಿಕೊಂಡು ಇದಕ್ಕೆ ವಿಧಿಸುವ ದಂಡದ ಮೊತ್ತವನ್ನೂ ಹೆಚ್ಚಳ ಮಾಡಬಹುದು.

Advertisement

Udayavani is now on Telegram. Click here to join our channel and stay updated with the latest news.

Next