ಬೆಂಗಳೂರು: ತರಳಬಾಳು ಜಗದ್ಗುರು ಬೃಹನ್ಮಠದ ಡಾ| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಏಕವ್ಯಕ್ತಿ ಟ್ರಸ್ಟ್ ರಚಿಸಿ, ಮಠದ ಆಸ್ತಿಯನ್ನು ವರ್ಗಾಯಿಸಿಕೊಂಡಿದ್ದಾರೆ ಹಾಗೂ ಸರ್ವಾಧಿಕಾರಿ ಆಡಳಿತ ನಡೆಸುತ್ತಿದ್ದಾರೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ್ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
1977ರಲ್ಲಿ ಲಿಂಗೈಕೈರಾದ ಶಿವಕುಮಾರ ಸ್ವಾಮೀಜಿ ಮಠದ ಕಲಾಪಗಳ ಮೇಲ್ವಿಚಾರಣೆಗಾಗಿ “ಶ್ರೀಮತ್ ಸಾಧು ಸದ್ಧರ್ಮ ವೀರಶೈವ ಸಂಘ’ ಸ್ಥಾಪಿಸಿದ್ದರು.
ಈ ಸಂಘವು ಮಠದ ಆಡಳಿತದ ಬಗ್ಗೆ ಕೆಲವು ನಿಯಮಗಳನ್ನು ಹೊಂದಿದೆಯಾದರೂ ಅವುಗಳನ್ನು ಗಣನೆಗೆ ತೆಗೆದುಕೊಳ್ಳದೇ ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು 1990ರಲ್ಲಿ “ಶ್ರೀಮದುಜ್ಜಯಿನಿ ಸದ್ಧರ್ಮ ಸಿಂಹಾಸನ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ’ ಎಂಬ ಹೆಸರಿನಲ್ಲಿ ಏಕವ್ಯಕ್ತಿ ಟ್ರಸ್ಟ್ ಸ್ಥಾಪಿಸಿ, ಮಠದ ಆಸ್ತಿ ಹಾಗೂ ಮಠದ ಉತ್ತರಾಧಿಕಾರಿಗಳ ಆಯ್ಕೆ ಅಧಿಕಾರವನ್ನು ನಿಯಮಬಾಹಿರವಾಗಿ ತಮ್ಮ ವ್ಯಾಪ್ತಿಗೆ ತೆಗೆದುಕೊಂಡಿದ್ದಾರೆ. ಸುಮಾರು 30 ವರ್ಷಗಳವರೆಗೆ ಈ ಟ್ರಸ್ಟ್ ಡೀಡ್ ಅನ್ನು ಗೌಪ್ಯವಾಗಿ ಇಡಲಾಗಿದೆ ಎಂದು ದೂರಿದರು.
ಮಠದ ಆಸ್ತಿ ಕಬಳಿಸುವ ಪ್ರಯತ್ನದ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುತ್ತೇವೆ. ಸ್ವಾಮೀಜಿಯ ನಿವೃತ್ತಿ ಮತ್ತು ಟ್ರಸ್ಟ್ ಡೀಡ್ ವಿಚಾರ ಪ್ರಶ್ನಿಸಿದವರನ್ನು ಕುಡುಕರು ಎಂದು ತೇಜೋವಧೆ ಮಾಡಿರುವ ಸ್ವಾಮೀಜಿ ವಿರುದ್ಧವೂ ಮಾನನಷ್ಟ ಮೊಕದ್ದಮೆ ಹೂಡಲು ಚಿಂತನೆ ನಡೆಸಿದ್ದೇವೆ ಎಂದು ಬಿ.ಸಿ. ಪಾಟೀಲ್ ತಿಳಿಸಿದರು.