Advertisement

ಪ್ರಾಪರ್ಟಿ ಕಾರ್ಡ್‌: ಅನಿಶ್ಚಿತತೆ ಮುಂದುವರಿಕೆ; ಜನರಲ್ಲಿ ಗೊಂದಲ

11:47 AM Jun 25, 2020 | mahesh |

ಮಹಾನಗರ: ಮಂಗಳೂರು ನಗರದಲ್ಲಿ ಪ್ರಾಪರ್ಟಿ ಕಾರ್ಡ್‌ ಕಡ್ಡಾಯ ಕುರಿತಂತೆ ಅನಿಶ್ಚಿತತೆ ಮುಂದುವರಿದಿದ್ದು, ನಗರದ ಜನತೆಯನ್ನು ಗೊಂದಲಕ್ಕೆ ಸಿಲುಕಿಸಿದೆ. ಪ್ರಸ್ತುತ ಆಸ್ತಿ ನೋಂದಣಿಗೆ ಪ್ರಾಪರ್ಟಿ ಕಾರ್ಡ್‌ ಕಡ್ಡಾಯವನ್ನು ರಾಜ್ಯ ಸರಕಾರ ಮುಂದಿನ ಆದೇಶದವರೆಗೆ ಮುಂದೂಡಿಕೆ ಮಾಡಿದೆ. ಆದರೆ, ಮುಂದಕ್ಕೆ ಇದು ಕಡ್ಡಾಯವಾಗಲಿದೆಯೇ ಅಥವಾ ಕೈಬಿಡಲಾಗುತ್ತದೆಯೇ ಎಂಬ ಬಗ್ಗೆ ಇನ್ನೂ ಸ್ಪಷ್ಟ ನಿಲುವು ಸರಕಾರದ ಕಡೆಯಿಂದ ವ್ಯಕ್ತವಾಗದಿರುವ ಹಿನ್ನೆಲೆಯಲ್ಲಿ ಪ್ರಾಪರ್ಟಿ ಕಾರ್ಡ್‌ನ ಭವಿಷ್ಯವನ್ನು ಅಡಕತ್ತರಿಯಲ್ಲಿ ಸಿಲುಕಿಸಿದ್ದು, ಇದರ ಪ್ರಸ್ತುತತೆಯ ಬಗ್ಗೆಯೇ ಇದೀಗ ಪ್ರಶ್ನೆ ಹುಟ್ಟು ಹಾಕಿದೆ.

Advertisement

“ಮಂಗಳೂರು ನಗರದಲ್ಲಿ ಯುಪಿಒಆರ್‌ ಯೋಜನೆಯಡಿಯಲ್ಲಿ ಆಸ್ತಿಗಳ ನೋಂದಣಿ ಸಮಯದಲ್ಲಿ ಪ್ರಾಪರ್ಟಿ ಕಾರ್ಡ್‌ ಕಡ್ಡಾಯ ಗೊಳಿಸಿರುವ ಬಗ್ಗೆ ಸಾರ್ವಜನಿಕರಿಂದ, ಸ್ಥಳೀಯ ಸಂಸ್ಥೆಗಳಿಂದ ಸಾಕಷ್ಟು ಆಕ್ಷೇಪಣೆಗಳು ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಸಮಸ್ಯೆಗಳು ಪೂರ್ಣ ಪ್ರಮಾಣದಲ್ಲಿ ಬಗೆಹರಿಯುವ ತನಕ ಹಾಲಿ ಇರುವ ಯೋಜನೆಯನ್ನು ಮುಂದೂಡಿ ಮಂಗಳೂರು ನಗರದಲ್ಲಿ ಆಸ್ತಿ ನೋಂದಣಿ ಸಂದರ್ಭದಲ್ಲಿ ಪ್ರಾಪರ್ಟಿ ಕಾರ್ಡ್‌ ಕಡ್ಡಾಯಗೊಳಿಸಿರುವುದಕ್ಕೆ ಮುಂದಿನ ಆದೇಶದವರೆಗೆ ವಿನಾಯತಿ ನೀಡಲಾಗಿದೆ’ ಎಂದು 2019ರ ಅಕ್ಟೋಬರ್‌ 11ರಂದು ಕಂದಾಯ ಇಲಾಖೆಯ ಜಂಟಿ ಕಾರ್ಯ ದರ್ಶಿಯವರು (ಭೂಮಿ, ಯುಪಿಒಆರ್‌ ಹಾಗೂ ಮುಜರಾಯಿ ಇಲಾಖಾ) ಹೊರಡಿಸಿದ್ದ ಆದೇಶ ತಿಳಿಸಿತ್ತು. ಮುಂದೂಡಿಕೆ ಆದೇಶ ಹೊರಬಿದ್ದು ಸುಮಾರು ಎಂಟು ತಿಂಗಳು ಕಳೆದಿದ್ದು, ಮುಂದಿನ ಕ್ರಮಗಳ ಬಗ್ಗೆ ಯಾವುದೇ ನಿರ್ಧಾರ ಸರಕಾರದ ಕಡೆಯಿಂದ ಆಗಿಲ್ಲ.

ಸರಕಾರದ ಆದೇಶದ ಪ್ರಕಾರ ಈ ಯೋಜನೆಯನ್ನು ಮುಂದೂಡಿಕೆ ಮಾಡಲಾಗಿದೆ ಹೊರತು ಕೈಬಿಟ್ಟಿಲ್ಲ. ಇದೇ ವೇಳೆ ನಗರದಲ್ಲಿ ಮುಂದಿನ ದಿನಗಳಲ್ಲಿ ಪ್ರಾಪರ್ಟಿ ಕಾರ್ಡ್‌ ಆಸ್ತಿ ನೋಂದಣಿಗೆ ಮತ್ತೇ ಕಡ್ಡಾಯವಾಗಲಿದೆಯೇ ಅಥವಾ ಕೈಬಿಡಲಿದೆಯೇ ಎಂಬ ಬಗ್ಗೆಯೂ ಸ್ವಷ್ಟ ನಿಲುವು ವ್ಯಕ್ತಪಡಿಸಿಲ್ಲ. ಇದರಿಂದಾಗಿ, ಪ್ರಸ್ತುತ ಪ್ರಾಪರ್ಟಿ ಕಾರ್ಡ್‌ ಪ್ರಕ್ರಿಯೆ ಗಣನೀಯ ಕುಸಿದಿದೆ. ದಿನವೊಂದಕ್ಕೆ ಸರಾಸರಿ 8ರಿಂದ 10 ಅರ್ಜಿಗಳು ಮಾತ್ರ ಬರುತ್ತಿವೆ, ಕಾರ್ಡ್‌ ಕಡ್ಡಾಯ ನಿಯಮದ ಅನುಷ್ಠಾನದಲ್ಲಿದ್ದ ಅವಧಿಯಲ್ಲಿ ದಿನವೊಂದಕ್ಕೆ ಸುಮಾರು 250 ಪ್ರಾಪರ್ಟಿ ಕಾರ್ಡ್‌ಗಳನ್ನು ನೀಡಲಾಗುತ್ತಿದ್ದರೆ, ಇದೀಗ ಇದರ ಸಂಖ್ಯೆ ದಿನವೊಂದಕ್ಕೆ ಸರಸಾರಿ 20ಕ್ಕೆ ಕುಸಿದಿದೆ.

ಗೊಂದಲದ ಸ್ಥಿತಿ
ಮಂಗಳೂರು ನಗರದಲ್ಲಿ ಆಸ್ತಿ ನೋಂದಣಿಗೆ ಪ್ರಾಪರ್ಟಿ ಕಾರ್ಡ್‌ ಕಡ್ಡಾಯವಾದ ಬಳಿಕ ಒಟ್ಟು ಇದು 4 ಬಾರಿ ಜಾರಿ ಮತ್ತು ಮುಂದೂಡಿಕೆ ಕಂಡಿದೆ. ಸರಕಾರ ಕಡ್ಡಾಯ ಮಾಡಿದ ಸಂದರ್ಭದಲ್ಲೆಲ್ಲ ಪ್ರಾಪರ್ಟಿ ಕಾರ್ಡ್‌ ಕಚೇರಿಯಲ್ಲಿ ಭಾರೀ ಜನ ಸಂದಣಿ ಕಂಡು ಬಂದಿತ್ತು. ಪರಿಣಾಮ ಮೂಲಸೌಕರ್ಯ ಕೊರತೆ ತಲೆದೋರಿ ಪ್ರಕ್ರಿಯೆಲ್ಲಿ ಅಸ್ತವ್ಯಸ್ತಗೊಂಡು ಸಾರ್ವಜನಿಕರು ಸಮಸ್ಯೆ ಅನುಭವಿಸಬೇಕಾಗಿ ಬಂದಿತ್ತು. ಇದೆ ಕಾರಣಕ್ಕೆ ಕಳೆದ ಅಕ್ಟೋಬರ್‌ನಲ್ಲಿ ಪ್ರಾಪರ್ಟಿ ಕಾರ್ಡ್‌ ಕಡ್ಡಾಯವನ್ನು ಮುಂದಿನ ಆದೇಶದವರೆಗೆ ಮತ್ತೆ ಮುಂದೂಡಲಾಗಿತ್ತು. ಒಂದೊಮ್ಮೆ ಸರಕಾರ ದಿಢೀರ್‌ ಆದೇಶ ಹೊರಡಿಸಿ ಮತ್ತೆ ಪ್ರಾಪರ್ಟಿ ಕಾರ್ಡ್‌ ಕಡ್ಡಾಯಗೊಳಿಸಿದರೆ ಆಗ ಇದೇ ಸಮಸ್ಯೆ ಪುನರಾವರ್ತನೆಯಾಗುವ ಸಾಧ್ಯತೆಯಿದೆ.

ವಸ್ತುಸ್ಥಿತಿ
ಮಂಗಳೂರು ನಗರದಲ್ಲಿ 2020ರ ಜೂ. 19ರ ವರೆಗೆ ಸರ್ವೆ ಮಾಡಿರುವ 1,59,500 ಆಸ್ತಿಗಳಲ್ಲಿ 86,229 ಆಸ್ತಿಗಳ ದಾಖಲೆಪತ್ರಗಳನ್ನು ಈವರೆಗೆ ಸಂಗ್ರಹಿಸಲಾಗಿದೆ. ಪ್ರಸ್ತುತ ಮಂಗಳೂರು ನಗರದಲ್ಲಿ ಆಸ್ತಿಗಳ ಸಂಖ್ಯೆ 2 ಲಕ್ಷ ಮೀರಿದ್ದು, “ಇ’ ಖಾತೆಯ ಬಳಿಕ ನಿಖರ ಅಂಕಿ-ಅಂಶ ಲಭ್ಯವಾಗಲಿದೆ. ದಾಖಲೆ ಪತ್ರ ಸಂಗ್ರಹಿಸಿದ ಆಸ್ತಿಗಳಲ್ಲಿ 64528 ಕರಡು ಕಾರ್ಡ್‌ಗಳನ್ನು ಸಿದ್ಧಪಡಿಸಿ ಅದರಲ್ಲಿ 45,029 ಅಂತಿಮಗೊಂಡು 41,800 ಕಾರ್ಡ್‌ಗಳನ್ನು ವಿತರಿಸಲಾಗಿದೆ. ಸುಮಾರು 21,000 ಕಾರ್ಡ್‌ಗಳು ಸಿದ್ಧಗೊಳ್ಳುವ ಪ್ರಕ್ರಿಯೆಯಲ್ಲಿವೆ. ಸರ್ವೆ ಮಾಡಿರುವ ಆಸ್ತಿಗಳ ಪೈಕಿ ಇನ್ನೂ 72,771 ದಾಖಲೆ ಸಂಗ್ರಹಕ್ಕೆ ಬಾಕಿಯಿದ್ದು, ಒಟ್ಟಾರೆಯಾಗಿ 94,472 ಆಸ್ತಿಗಳಿಗೆ ಪ್ರಾಪರ್ಟಿ ಕಾರ್ಡ್‌ ಆಗಬೇಕಾಗಿದೆ. ಪ್ರಸ್ತುತ ಆಸ್ತಿಗಳ ಸಂಖ್ಯೆಯಲ್ಲಿ ವೃದ್ಧಿಯಾಗಿರುವ ಹಿನ್ನೆಲೆಯಲ್ಲಿ ಇದರ ಸಂಖ್ಯೆ ಸುಮಾರು 1.5 ಲಕ್ಷ ಮೀರಲಿದೆ.

Advertisement

ಪ್ರಕ್ರಿಯೆ ಚಾಲನೆಯಲ್ಲಿದೆ
ಈಗಾಗಲೇ ದಾಖಲೆ ಸಂಗ್ರಹಿಸಿ ಅಳತೆ ಮಾಡಿರುವ ಆಸ್ತಿಗಳ ಕಾರ್ಡ್‌ಗಳನ್ನು ಸಿದ್ಧಪಡಿಸುವುದರ ಜತೆಗೆ ದಾಖಲೆ ಸಂಗ್ರಹ ಮಾಡಿರುವ ಆಸ್ತಿಗಳ ಸರ್ವೆ ಕಾರ್ಯವನ್ನು ಮಾಡಲಾಗುತ್ತಿದೆ. ಕಾರ್ಡ್‌ ಕಡ್ಡಾಯಕ್ಕೆ ಮುಂದಿನ ಆದೇಶದವರೆಗೆ ವಿನಾಯಿತಿ ನೀಡಿರುವುದರಿಂದ ಮಾಡಿಸುವವರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಈಗಾಗಲೇ, ದಾಖಲೆಗಳನ್ನು ಸಂಗ್ರಹಿಸಿರುವ ಆಸ್ತಿಗಳ ಅಳತೆ ಕಾರ್ಯದಲ್ಲಿ ಸರ್ವೆಯರ್‌ಗಳು ನಿರತರಾಗಿದ್ದಾರೆ.
-ಪ್ರಸಾದಿನಿ, ಭೂಮಾಪನ ಇಲಾಖೆ ಸಹಾಯಕ ನಿರ್ದೇಶಕರು, ದ.ಕ.

Advertisement

Udayavani is now on Telegram. Click here to join our channel and stay updated with the latest news.

Next