ರೇಬಿಸ್ ಲೈಸಾ ವೈರಸ್‌ನಿಂದ ತಲೆದೋರುವ ರೇಬಿಸ್ ಕಾಯಿಲೆಯನ್ನು ಸಾಮಾನ್ಯ ಪರಿಭಾಷೆಯಲ್ಲಿ ಹುಚ್ಚು ನಾಯಿ ರೋಗ ಎನ್ನುತ್ತಾರೆ. ಜಾಗತಿಕವಾಗಿ ಪ್ರತೀ ವರ್ಷ 60 ಸಾವಿರ ಮಂದಿ ಮತ್ತು ಭಾರತದಲ್ಲಿ 20 ಸಾವಿರ ಮಂದಿ ಈ ಮಾರಕ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಪ್ರತೀ ವರ್ಷ ಈ ಕಾಯಿಲೆಯ ವಿಚಾರವಾಗಿ ಅರಿವು ಮತ್ತು ಎಚ್ಚರಿಕೆ ಮೂಡಿಸುವುದಕ್ಕಾಗಿ ಸೆಪ್ಟಂಬರ್ 28ನ್ನು ಜಾಗತಿಕ ರೇಬಿಸ್ ದಿನವನ್ನಾಗಿ ಆಚರಿಸಲಾಗುತ್ತದೆ.
ರೇಬಿಸ್ ಖಾಯಿಲೆಯು ರೇಬಿಸ್ ಲೈಸಾವೈರಸ್ ((Lyssavirus)ನಿಂದ ಉಂಟಾಗುವಂತಹ ಮಾರಕ ಕಾಯಿಲೆ. ಆದರೆ ರೇಬಿಸ್ ಶಂಕಿತ ಪ್ರಾಣಿಗಳೊಂದಿಗಿನ ಸಂಪರ್ಕವಾದ ವ್ಯಕ್ತಿ ಸರಿಯಾದ ಸಮಯಕ್ಕೆ ಚಿಕಿತ್ಸೆಯನ್ನು ಪಡೆದರೆ ರೇಬಿಸ್ ಕಾಯಿಲೆಯನ್ನು ತಡೆಗಟ್ಟಬಹುದು.
WHO ಪ್ರಕಾರ ಪ್ರತಿ ವರ್ಷ ಜಾಗತಿಕವಾಗಿ ಸುಮಾರು 50ರಿಂದ 60 ಸಾವಿರ ಜನರು ರೇಬಿಸ್‌ಗೆ ತುತ್ತಾಗಿ ಸಾವಿಗೀಡಾಗುತ್ತಿದ್ದಾರೆ. ಅದರಲ್ಲಿ ಭಾರತದಲ್ಲಿ ಇಪ್ಪತ್ತು ಸಾವಿರ ಅಂದರೆ ⅓ರಷ್ಟು ಜನರು ಸಾವಿಗೀಡಾಗುತ್ತಿದ್ದಾರೆ.
ರೇಬಿಸ್ ಸೋಂಕುಪೀಡಿತ ಪ್ರಾಣಿಯು ಒಬ್ಬ ವ್ಯಕ್ತಿಗೆ ಕಚ್ಚಿದಾಗ ಅಥವಾ ಪರಚಿದಾಗ ಸೋಂಕು ಪೀಡಿತ ಪ್ರಾಣಿಯ ಲಾಲರಸ (ಎಂಜಲು, ಜೊಲ್ಲು) ದಲ್ಲಿರುವ ವೈರಾಣುವು ಕಚ್ಚಿದ ಸ್ಥಳದಿಂದ ನರಗಳ ಮೂಲಕ ಮೆದುಳಿಗೆ ತಲುಪುತ್ತದೆ. ಬಳಿಕ ಮೆದುಳು ಮತ್ತು ಬೆನ್ನುಹುರಿ ಉರಿಯೂತವನ್ನುಂಟು ಮಾಡಿ ರೇಬಿಸ್ ಕಾಯಿಲೆಯ ಲಕ್ಷಣಗಳು ಕಂಡುಬರುತ್ತವೆ. ನಾಯಿಗಳು ರೇಬಿಸ್ ಸೋಂಕಿನ ಮುಖ್ಯ ಮೂಲವಾಗಿವೆ. ಆದರೆ ಬೆಕ್ಕು , ಮಂಗ, ಬಾವಲಿ, ಹಸು, ಮೇಕೆ ಮತ್ತು ಯಾವುದೇ ಕಾಡು ಪ್ರಾಣಿಗಳ ಮೂಲಕ ಸೋಂಕು ಹರಡಬಹುದು. ಪ್ರಾಣಿಯ ಕಡಿತದ ಅನಂತರ ರೇಬಿಸ್ ಸೋಂಕಿನ ಚಿಹ್ನೆಗಳು ಮತ್ತು ಲಕ್ಷಣಗಳು ಸಾಮಾನ್ಯವಾಗಿ ಎರಡರಿಂದ ಮೂರು ತಿಂಗಳುಗಳಲ್ಲಿ ಕಂಡುಬರಬಹುದು. ಆದರೂ ಕೆಲವು ವ್ಯಕ್ತಿಗಳಲ್ಲಿ ಈ ರೋಗ ಲಕ್ಷಣಗಳು ಒಂದು ವಾರದಿಂದ ಒಂದು ವರ್ಷದ ಒಳಗೆ ಕಂಡುಬರಬಹುದು.
ಪ್ರಾಣಿಯ ಕಡಿತದ ಅನಂತರ ಗಾಯದ ಚಿಕಿತ್ಸೆ :
- ಪ್ರಾಥಮಿಕ ಚಿಕಿತ್ಸೆ : ಗಾಯವನ್ನು ತತ್‌ಕ್ಷಣವೇ ಹರಿಯುವ ನೀರು, ಸೋಪು ಮೂಲಕ ಕನಿಷ್ಠ ಹದಿನೈದು ನಿಮಿಷಯಗಳ ಕಾಲ ಸ್ವಚ್ಛಗೊಳಿಸುವುದರಿಂದ ರೇಬಿಸ್ ವೈರಾಣುಗಳನ್ನು ನಿಷ್ಕ್ರಿಯಗೊಳಿಸಬಹುದು.
- ಮಾನದಂಡಗಳನ್ನು ಪೂರೈಸುವ ಪ್ರಬಲ ಮತ್ತು ಪರಿಣಾಮಕಾರಿ ರೇಬಿಸ್ ಲಸಿಕೆ ಹಾಗೂ ಅಗತ್ಯವೆನಿಸಿದರೆ ರೇಬಿಸ್ ಇಮ್ಯೂನೋಗ್ಲೋಬ್ಯುಲಿನ್ ನೀಡಲಾಗುತ್ತದೆ.
- ಒಂದು ವೇಳೆ ನಾಯಿ, ಬೆಕ್ಕು , ಹಸುವಿನಂಥ ಸಾಕು ಪ್ರಾಣಿಗಳಾಗಿದ್ದರೆ, ಅವುಗಳನ್ನು ಪ್ರತ್ಯೇಕವಾಗಿರಿಸಿ ಸರಿಸುಮಾರು ಹತ್ತು ದಿನಗಳ ಕಾಲ ರೇಬಿಸ್ ಸೋಂಕಿನ ಲಕ್ಷಣಗಳನ್ನು ಗಮನಿಸಬಹುದು.
- ರೇಬಿಸ್ ಶಂಕಿತ ಪ್ರಾಣಿಗಳೊಂದಿಗಿನ ಸಂಪರ್ಕದ ತೀವ್ರತೆಯ ಆಧಾರದ ಮೇಲೆ ಚಿಕಿತ್ಸೆ ಮತ್ತು ರೋಗ ನಿರೋಧಕವನ್ನು ಈ ಕೆಳಕಂಡಂತೆ ವರ್ಗೀಕರಿಸಲಾಗಿದೆ.
ಸೋಂಕು ಪೀಡಿತನ ಆರೋಗ್ಯದ ಗಂಭೀರ ಚಿಹ್ನೆ ಮತ್ತು ಲಕ್ಷಣಗಳು :
ಗೊಂದಲ, ನೀರಿನ ಭಯ (ಹೈಡ್ರೋಫೋಬಿಯಾ), ಗಾಳಿಯ ಭಯ (ಏರೋಫೋಬಿಯಾ) ಹಾಗೂ ಹೃದಯ ಮತ್ತು ಉಸಿರಾಟದಲ್ಲಿ ಸ್ತಂಭನ ಉಂಟಾಗಿ ಸಾವು ಸಂಭವಿಸುತ್ತದೆ.
ಆರಂಭಿಕ ರೋಗ ಲಕ್ಷಣಗಳು : ಆರಂಭಿಕವಾಗಿ ಒಬ್ಬ ರೇಬಿಸ್ ಸೋಂಕು ಪೀಡಿತ ವ್ಯಕ್ತಿಯಲ್ಲಿ ಜ್ವರ, ನೋವು ಹಾಗೂ ಗಾಯದ ಸ್ಥಳದಲ್ಲಿ ಮುಳ್ಳು ಚುಚ್ಚಿದ ಹಾಗೆ ಅಸಾಮಾನ್ಯ ಅಥವಾ ವಿವರಿಸಲಾಗದ ಜುಮ್ಮೆನಿಸುವಿಕೆ ಮತ್ತು ಸುಡುವ ಸಂವೇದನೆ ಕಂಡುಬರುತ್ತದೆ. ಹಾಗೆಯೇ ಸೋಂಕು ಪೀಡಿತ ವ್ಯಕ್ತಿಯಲ್ಲಿ ಆತಂಕ ಮತ್ತು ದೇಹಾಲಸ್ಯವು ಕೂಡ ಕಂಡುಬರಬಹುದು.
ರೇಬಿಸ್ ತಡೆಗಟ್ಟಲು ತೆಗೆದುಕೊಳ್ಳಬಹುದಾದ ಕ್ರಮಗಳು :
- ನಿಮ್ಮ ಸಾಕು ಪ್ರಾಣಿಗಳಿಗೆ ನಿಯಮಿತ ಮತ್ತು ನವೀಕೃತ ವ್ಯಾಕ್ಸಿನೇಶನ್ (ಲಸಿಕೆ) ನೀಡುವುದು.
- ಪ್ರಾಣಿಗಳ ನಿಯಂತ್ರಣಕ್ಕೆ ಇಲಾಖೆಗೆ ಕರೆ ಮಾಡಿ ಮತ್ತು ಲಸಿಕೆ ಹಾಕದ ಮತ್ತು ಅನಾರೋಗ್ಯದಿಂದ ಬಳಲುತ್ತಿರುವ ನಿಮ್ಮ ನೆರೆಹೊರೆಯ ಎಲ್ಲ ಪ್ರಾಣಿಗಳ ಬಗ್ಗೆ ಮಾಹಿತಿ ನೀಡುವುದು.
- ಪ್ರಾಣಿಗಳ ಕಡಿತವನ್ನು ಸೋಪ್ ಮತ್ತು ನೀರಿನಿಂದ ತೊಳೆಯಿರಿ.
- ರೇಬಿಸ್ ಕಾಯಿಲೆಯ ಚಿಕಿತ್ಸೆಗಾಗಿ ನಿಮ್ಮ ಆರೋಗ್ಯ ಪೂರೈಕೆದಾರರನ್ನು ತತ್‌ಕ್ಷಣ ಸಂಪರ್ಕಿಸಿ.
- ಸಾಕು ಪ್ರಾಣಿಗಳನ್ನು ಹೊಂದಿದವರು ಅಥವಾ ಸಾಕು ಪ್ರಾಣಿಗಳನ್ನು ಪಾಲನೆ-ಪೋಷಣೆ ಮಾಡು ವವರು ಮುಂಚಿತವಾಗಿ ರೇಬಿಸ್ ಲಸಿಕೆಯನ್ನು ಪಡೆಯುವುದು ಉತ್ತಮ.
ಮನುಷ್ಯರಲ್ಲಿ ರೇಬಿಸ್ ರೋಗದ ಲಕ್ಷಣಗಳೇನು?: ರೇಬಿಸ್ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಳ್ಳಲು ಸಾಮಾನ್ಯವಾಗಿ 2-3 ತಿಂಗಳು ತಗಲುತ್ತವೆ. ಆದರೆ ದೇಹದಲ್ಲಿ ಗಾಯವಾದ ಸ್ಥಳ ಮತ್ತು ದೇಹವನ್ನು ಪ್ರವೇಶಿಸಿದ ವೈರಾಣುಗಳ ಪ್ರಮಾಣದ ಆಧಾರದಲ್ಲಿ 1 ವಾರದಿಂದ 1 ವರ್ಷದ ವರೆಗೂ ಬದಲಾಗಬಹುದು. ಪ್ರಾಥಮಿಕ ಲಕ್ಷಣಗಳಲ್ಲಿ ಸಾಮಾನ್ಯ ದೇಹ ದಣಿವು ಅಥವಾ ಕಿರಿಕಿರಿ, ಜ್ವರ ಅಥವಾ ತಲೆನೋವು ಮತ್ತು ಗಾಯ ಸ್ಥಳದಲ್ಲಿ ಅಸಹಜ ಚುಚ್ಚಿದ ಅನುಭವ ಅಥವಾ ಉರಿಯ ಅನುಭವ ಕಾಣಿಸಿಕೊಳ್ಳಬಹುದು.ರೇಬಿಸ್‌ನ ವೈದ್ಯಕೀಯ ಲಕ್ಷಣಗಳು ಕಾಣಿಸಿಕೊಂಡ ಬಳಿಕ ಕಾಯಿಲೆಯು ಮಾರಣಾಂತಿಕವಾಗಿರುತ್ತದೆ, ಚಿಕಿತ್ಸೆಯು ಲಕ್ಷಣಗಳನ್ನು ಆಧರಿಸಿ ಇರುತ್ತದೆ. ರೇಬಿಸ್ ಒಂದು ವಿಧವಾದ ಆಕ್ರಮಣಕಾರಿ ವಿಧದಲ್ಲಿ ಅತಿಯಾದ ಚಟುವಟಿಕೆ, ಉದ್ರೇಕ, ಹೈಡ್ರೊಫೋಬಿಯಾ (ನೀರಿನ ಭಯ) ಮತ್ತು ಕೆಲವೊಮ್ಮೆ ಏರೊಫೋಬಿಯಾ (ತಾಜಾ ಗಾಳಿಯ ಭಯ) ಕಂಡುಬರುತ್ತದೆ. ಕೆಲವು ದಿನಗಳ ಬಳಿಕ ಹೃದಯಾಘಾತದಿಂದ ಮೃತ್ಯು ಉಂಟಾಗುತ್ತದೆ. ಪ್ಯಾರಾಲಿಟಿಕ್ ರೇಬಿಸ್‌ನಲ್ಲಿ ಗಾಯ ಉಂಟಾ ದಲ್ಲಿಂದ ಆರಂಭಿಸಿ ಸ್ನಾಯುಗಳು ಕ್ರಮೇಣ ಪಕ್ಷವಾತಕ್ಕೀಡಾಗುತ್ತ ಬರುತ್ತವೆ. ಆರಂಭದಲ್ಲಿ ಕೋಮಾ ಮತ್ತು ಆ ಬಳಿಕ ಶ್ವಾಸಾಂಗ ವೈಫಲ್ಯ ಮೃತ್ಯುವಿಗೆ ಕಾರಣವಾಗುತ್ತದೆ.
ರೇಬಿಸ್ ಗುಣಪಡಿಸಲು ಸಾಧ್ಯವೇ? : ನಾಯಿಗಳಿಗೆ ಲಸಿಕೆ ಹಾಕಿಸುವ ಮೂಲಕ ಮನುಷ್ಯರನ್ನು ಉಳಿಸಬಹುದು. ರೇಬಿಸ್ ಶತ ಪ್ರತಿಶತ ಲಸಿಕೆಯ ಮೂಲಕ ತಡೆಯಬಹುದಾದ ಕಾಯಿಲೆಯಾಗಿದೆ. ರೇಬಿಸ್ ನಿಯಂತ್ರಿಸಿ ಮನುಷ್ಯರನ್ನು ಉಳಿಸುವುದಕ್ಕೆ ನಾಯಿಗಳಿಗೆ ಸಾಮೂಹಿಕ ಲಸಿಕೆ ಪ್ರಯೋಗ ಅತ್ಯುತ್ತಮ ಕ್ರಮವಾಗಿದೆ. ಇದಲ್ಲದೆ, ಸಾರ್ವಜನಿಕ ಅರಿವು, ಆರೋಗ್ಯ ಶಿಕ್ಷಣ ಮತ್ತು ಚಿಕಿತ್ಸೆಯ ಲಭ್ಯತೆ ಮತ್ತು ಅದು ಕೈಗೆಟಕುವಂತಿರುವುದು ರೇಬಿಸ್ ನಿಯಂತ್ರಣ ಮತ್ತು ತಡೆಗೆ ಪ್ರಧಾನ ಕಾರ್ಯತಂತ್ರಗಳಾಗಿವೆ. ರೇಬಿಸ್ ಕಾಯಿಲೆಯ ಬಗ್ಗೆ ತಿಳಿವಳಿಕೆ, ಸಾಕುಪ್ರಾಣಿಗಳಿಗೆ ಲಸಿಕೆ ಹಾಕಿಸುವುದು, ಸಾಕುಪ್ರಾಣಿಗಳನ್ನು ಇತರ ಪ್ರಾಣಿಗಳ ಆಕ್ರಮಣದಿಂದ ತಡೆಯುವುದು, ಎಲ್ಲೆಲ್ಲೋ ತಿರುಗಾಡಲು ಬಿಡದೆ ಇರುವುದು, ಬೀಡಾಡಿ ಪ್ರಾಣಿಗಳ ಬಗ್ಗೆ ಸ್ಥಳೀಯಾಡಳಿತಗಳಿಗೆ ಮಾಹಿತಿ ನೀಡುವುದು, ಮನೆ, ಕೊಟ್ಟಿಗೆ ಇತ್ಯಾದಿಗಳಲ್ಲಿ ಬಾವಲಿಗಳು ವಾಸಿಸದಂತೆ ನೋಡಿಕೊಳ್ಳುವುದು ಇತ್ಯಾದಿ ಕ್ರಮಗಳು ಸಾಕುಪ್ರಾಣಿಗಳನ್ನು ರೇಬಿಸ್ ಸೋಂಕಿನಿಂದ ರಕ್ಷಿಸಿಕೊಳ್ಳಲು ಅನುಸರಿಸಬೇಕಾದ ಕ್ರಮಗಳಾಗಿವೆ.
ರೇಬಿಸ್ ತಗಲುವ ಅಪಾಯ ಯಾರಿಗೆ ಹೆಚ್ಚಿರುತ್ತದೆ? : ಕೆಲವು ಸನ್ನಿವೇಶಗಳು ರೇಬಿಸ್ ವೈರಾಣು ಸೋಂಕಿಗೆ ತುತ್ತಾಗುವ ಅಪಾಯ ಹೆಚ್ಚಿಸುತ್ತವೆ. ಕಾಡಿನ ಸನಿಹ ವಾಸಿಸುವವರು, ಅಪಾಯ ಹೆಚ್ಚಿರುವ ಪ್ರದೇಶಗಳಿಗೆ ಪ್ರಯಾಣಿಸುವವರು, ಕಾಡಿನಲ್ಲಿ ಆಗಾಗ ವಾಸಿಸುವುದು ಮತ್ತು ವನ್ಯಜೀವಿಗಳಸಂಪರ್ಕಕ್ಕೆ ಬರುವುದು, ಲಸಿಕೆ ಹಾಕದ ಪ್ರಾಣಿಗಳ ಜತೆಗೆ ಆಟವಾಡುವ ಮಕ್ಕಳು ಮತ್ತು ಸಜೀವ ರೇಬಿಸ್ ವೈರಾಣುಗಳುಳ್ಳ ಮಾದರಿಗಳನ್ನು ನಿರ್ವಹಿಸುವ ಪ್ರಯೋಗಾಲಯ ತಜ್ಞರು ಹೆಚ್ಚು ಅಪಾಯ ಹೊಂದಿರುತ್ತಾರೆ.
ಡಾ| ವೀಣಾ ಕಾಮತ್
ಪ್ರೊಫೆಸರ್, ಕಮ್ಯುನಿಟಿ ಮೆಡಿಸಿನ್ ವಿಭಾಗ
ಕೊಆರ್ಡಿನೇಟರ್, ಸೆಂಟರ್ ಫಾರ್ ವ್ಯಾಕ್ಸಿನ್ ಸ್ಟಡೀಸ್
ಡಾ| ಚೈತ್ರಾ ರಾವ್
ಅಸೊಸಿಯೇಟ್ ಪ್ರೊಫೆಸರ್, ಕಮ್ಯುನಿಟಿ ಮೆಡಿಸಿನ್ ವಿಭಾಗ, ಕೊಆರ್ಡಿನೇಟರ್, ಟ್ರಾವೆಲ್ ಮೆಡಿಸಿನ್ ವಿಭಾಗ
ಡಾ| ಸಂದೇಶ್ ಕುಮಾರ್ ಎಂ.ಆರ್.
ಸ್ಟಡಿ ಫಿಸಿಶಿಯನ್, ಸೆಂಟರ್ ಫಾರ್ ವ್ಯಾಕ್ಸಿನ್ ಸ್ಟಡೀಸ್, ಕೆಎಂಸಿ, ಮಾಹೆ, ಮಣಿಪಾಲ