Advertisement

ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ನೋಟಿಸ್‌ ನಷ್ಟ ವಸೂಲಿ ಸೂಕ್ತ ಕ್ರಮ

10:12 AM Dec 28, 2019 | Team Udayavani |

ಪೌರತ್ವ ಮಸೂದೆ ವಿರೋಧಿಸಿ ನಡೆದ ಪ್ರತಿಭಟನೆ ಮತ್ತು ಹಿಂಸಾಚಾರದ ಸಂದರ್ಭದಲ್ಲಿ ಸಾರ್ವಜನಿಕ ಸೊತ್ತುಗಳನ್ನು ನಾಶ ಮಾಡಿದವರಿಂದಲೇ ಅದರ ನಷ್ಟವನ್ನು ವಸೂಲು ಮಾಡಿಕೊಳ್ಳುವುದು ಸಮರ್ಪಕವಾದ ನಡೆ. ಉತ್ತರ ಪ್ರದೇಶ ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನೇ ಇಟ್ಟಿದೆ. ಈಗಾಗಲೇ 130ಕ್ಕೂ ಹೆಚ್ಚು ಮಂದಿಗೆ ಅಲ್ಲಿನ ಜಿಲ್ಲಾಡಳಿತಗಳು ವಸೂಲಿ ನೊಟೀಸ್‌ ಜಾರಿಗೊಳಿಸಿವೆ. ಇನ್ನೂ ಹಲವು ಮಂದಿಯ ಹೆಸರು ಪೊಲೀಸರ ಲಿಸ್ಟ್‌ನಲ್ಲಿದೆ. ಈ ಮೂಲಕ ಉತ್ತರ ಪ್ರದೇಶ ಸರಕಾರ ಗಲಭೆಕೋರರಿಗೆ ತಕ್ಕ ಪಾಠ ಕಲಿಸಲು ಮುಂದಾಗಿದೆ.

Advertisement

ಇದು ಜನರ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಎಂಬ ಮಾಮೂಲು ಆರೋಪಗಳನ್ನು ವಿಪಕ್ಷಗಳು ಮಾಡುತ್ತಿವೆ. ಆದರೆ ಯಾವ ರೀತಿ ಜನರ ಧ್ವನಿಯನ್ನು ಹತ್ತಿಕ್ಕಲಾಗಿದೆ ಎಂದು ಸ್ಪಷ್ಟವಾಗಿ ವ್ಯಾಖ್ಯಾನಿಸುತ್ತಿಲ್ಲ. ಸರಕಾರ ಜನರಿಗೆ ಪ್ರತಿಭಟನೆಗೆ ಅನುಮತಿ ನಿರಾಕರಿಸಿಲ್ಲ. ವಿರೋಧ ಮತ್ತು ಪ್ರತಿಭಟನೆ ಪ್ರಜಾತಂತ್ರದ ಅವಿಭಾಜ್ಯ ಅಂಗಗಳು. ಒಂದು ವೇಳೆ ಪ್ರತಿಭಟನೆ ನಡೆಸಲು ಅವಕಾಶ ಕೊಡದಿದ್ದರೆ ಜನರ ಧ್ವನಿಯನ್ನು ಅಡಗಿಸುವ ಪ್ರಯತ್ನ ಎನ್ನಬಹುದಿತ್ತು. ಆದರೆ ಪ್ರತಿಭಟನೆಯ ಹೆಸರಿನಲ್ಲಿ ಹಿಂಸಾಚಾರ ನಡೆಸುವುದು ಮತ್ತು ಸಾರ್ವಜನಿಕ ಸ್ವತ್ತುಗಳನ್ನು ಸುಡುವುದು ಈಗ ಒಂದು ಚಾಳಿಯಾಗಿ ಬದಲಾಗಿದೆ. ಮಂಗಳೂರಿನಲ್ಲೂ ಸಾರ್ವಜನಿಕ ಸೊತ್ತುಗಳಿಗೆ ಹಾನಿ ಮಾಡಲು ದೊಡ್ಡ ಮಟ್ಟದ ಸಂಚು ನಡೆದಿತ್ತು ಎನ್ನುವ ಅಂಶ ಬಯಲಾಗಿದೆ. ದಿಲ್ಲಿ, ಲಕ್ನೊ ಸೇರಿದಂತೆ ಹಲವು ನಗರಗಳಲ್ಲಿ ಪೌರತ್ವ ವಿರೋಧಿ ಪ್ರತಿಭಟನೆ ವೇಳೆ ಹಿಂಸಾಚಾರ ಮತ್ತು ಸೊತ್ತು ನಾಶ ನಡೆದಿದೆ.

ಪ್ರತಿಭಟನೆ ವೇಳೆ ಸಾರ್ವಜನಿಕ ಸೊತ್ತುಗಳನ್ನು ನಾಶ ಮಾಡುವವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಅವರಿಂದಲೇ ನಷ್ಟವನ್ನು ವಸೂಲು ಮಾಡಿಕೊಳ್ಳಬೇಕೆಂದು ಸುಪ್ರೀಂ ಕೋರ್ಟ್‌ ಕೂಡ ಹಲವು ಬಾರಿ ಹೇಳಿದೆ. 1984ರಲ್ಲಿ ಜಾರಿಗೆ ಬಂದಿರುವ ಸಾರ್ವಜನಿಕ ಸೊತ್ತುಗಳಿಗೆ ಹಾನಿ ಉಂಟು ಮಾಡುವುದನ್ನು ತಡೆಯುವ ಕಾಯಿದೆ ಸಾರ್ವಜನಿಕ ಸ್ವತ್ತುಗಳನ್ನು ನಾಶ ಮಾಡುವ ಇಲ್ಲವೆ ವಿರೂಪಗೊಳಿಸುವವರ ವಿರುದ್ಧ ಕಠಿನ ದಂಡನಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸ್ಪಷ್ಟವಾಗಿ ಹೇಳಿದೆ. ಐದು ವರ್ಷದ ತನಕ ಜೈಲು ಶಿಕ್ಷೆ ವಿಧಿಸಲು ಮತ್ತು ದಂಡ ಹಾಕಲು ಈ ಕಾಯಿದೆಯಲ್ಲಿ ಅವಕಾಶ ಇದೆ. ಬಂದ್‌, ಹರತಾಳ, ಮುಷ್ಕರ ಇತ್ಯಾದಿ ಸಂದರ್ಭಗಳಲ್ಲಿ ಪ್ರತಿಭಟನೆಕಾರರು ನಡೆಸುವ ದಾಂಧಲೆಗೆ ಇಂಥ ಪ್ರತಿಭಟನೆಗಳಿಗೆ ಕರೆಕೊಟ್ಟವರನ್ನೇ ಹೊಣೆಗಾರರನ್ನಾಗಿ ಮಾಡಬೇಕೆಂದೂ ಕೆಲವು ತೀರ್ಪುಗಳಲ್ಲಿ ಸುಪ್ರೀಂ ಕೋರ್ಟ್‌ ಹೇಳಿದೆ. ಹೀಗಾಗಿ ಸರಕಾರ ಮಾಡುವುದು ಕಾನೂನು ವ್ಯಾಪ್ತಿಯ ಕ್ರಮವೇ ಆಗಿದೆ.

ಪ್ರತಿಭಟನೆ, ಮುಷ್ಕರ, ಬಂದ್‌ಗಳ ಸಂದರ್ಭದಲ್ಲಿ ಯಾರೂ ದೇಶವನ್ನು ಒತ್ತೆಯಿಟ್ಟುಕೊಳ್ಳಬಾರದು ಹಾಗೂ ಈ ಸಂಬಂಧ ಸ್ಪಷ್ಟವಾದ ಮಾರ್ಗಸೂಚಿಗಳನ್ನು ರೂಪಿಸಬೇಕೆಂದು 2016ರಲ್ಲಿ ಸುಪ್ರೀಂ ಕೋರ್ಟ್‌ ನ್ಯಾಯಾಧೀಶ ಜೆ.ಎಸ್‌.ಖೇಹರ್‌ ಅವರ ನೇತೃತ್ವದ ನ್ಯಾಯಪೀಠ ಹೇಳಿತ್ತು. ಯಾವ ಪಕ್ಷ ಅಥವಾ ಸಂಘಟನೆಯೇ ಆಗಲಿ, ಪ್ರತಿಭಟನೆ ಶಾಂತಿಯುತವಾಗಿರಬೇಕು. ಸಾರ್ವಜನಿಕ ಸೊತ್ತುಗಳನ್ನು ನಾಶಪಡಿಸಿದರೆ ಪ್ರತಿಭಟನೆ ನಡೆಸಿದ ಪಕ್ಷ ಅಥವಾ ಸಂಘಟನೆಗಳನ್ನೇ ಹೊಣೆ ಮಾಡಿ ಅವರಿಂದ ನಷ್ಟವನ್ನು ವಸೂಲು ಮಾಡಬೇಕೆಂದು ಹಿಂಸಾಚಾರ ಮತ್ತು ಸೊತ್ತು ವ್ಯಾಪಕವಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ನ್ಯಾ| ಖೇಹರ್‌ ಖಾರವಾಗಿಯೇ ಹೇಳಿದ್ದರು. ಆದರೆ ನ್ಯಾಯಪೀಠ ಈ ಆದೇಶ ನೀಡಿ ಮೂರು ವರ್ಷಗಳೇ ಆಗಿದ್ದರೂ ಇಂಥ ಮಾರ್ಗಸೂಚಿ ಇನ್ನೂ ರಚನೆಯಾಗಿಲ್ಲ.ಆದರೆ ಹಿಂಸಾಚಾರ ಮತ್ತು ಸಾರ್ವಜನಿಕ ಸೊತ್ತುಗಳನ್ನು ನಾಶ ಮಾಡುವ ಮೂಲಕ ಪ್ರತಿಭಟನೆಕಾರರು ತಮ್ಮ ನೈತಿಕತೆಯನ್ನು ಕಳೆದುಕೊಂಡಿದ್ದಾರೆ.

ವ್ಯಾಪಕವಾಗಿ ಹಿಂಸಾಚಾರ ನಡೆಯುವ ಸಂದರ್ಭದಲ್ಲಿ ಗಲಭೆಕೋರರನ್ನು ಗುರುತಿಸುವುದು ದೊಡ್ಡ ಸವಾಲಿನ ಕೆಲಸ. ಸುತ್ತಮುತ್ತಲಿರುವ ಸಿಸಿಟಿವಿಗಳು ಹಾಗೂ ಇನ್ನಿತರರು ಶೂಟಿಂಗ್‌ ಮಾಡಿದ ವೀಡಿಯೊ ಚಿತ್ರಿಕೆಗಳೇ ಈ ಸಂದರ್ಭದಲ್ಲಿ ಪ್ರಮುಖ ಸಾಕ್ಷ್ಯಗಳಾಗುತ್ತವೆ. ಇವುಗಳ ನಡುವೆ ನಕಲಿ ವೀಡಿಯೊಗಳು ನುಸುಳಿಕೊಳ್ಳುವ ಅಪಾಯಗಳೂ ಇವೆ. ಹೀಗಾಗಿ ಕಾನೂನು ಪಾಲಕರು ಗರಿಷ್ಠ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಾದ ಅಗತ್ಯವಿದೆ. ಗಲಭೆಕೋರರನ್ನು ಗುರುತಿಸಿ ನಷ್ಟ ವಸೂಲು ಮಾಡುವುದು ಸೇಡಿನ ಕ್ರಮವಾಗಬಾರದು. ಬದಲಾಗಿ ತಪ್ಪನ್ನು ಮನವರಿಕೆ ಮಾಡಿ ಮುಂದೆ ಇಂಥ ತಪ್ಪು ಮಾಡದಂಥ ಎಚ್ಚರಿಕೆಯಾಗಬೇಕು. ಈ ಕ್ರಮವನ್ನು ಕೈಗೊಳ್ಳುವಾಗ ಯಾವುದೇ ಬೇಧಭಾವಗಳಿಗೆ ಅವಕಾಶ ಕೊಡಬಾರದು.

Advertisement
Advertisement

Udayavani is now on Telegram. Click here to join our channel and stay updated with the latest news.

Next