ಮೈಸೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಆ.14ರವರೆಗೆ ತಡೆಯಾಜ್ಞೆ ನೀಡಿರುವುದರಿಂದ ಹಿಂಬಡ್ತಿ ಮತ್ತು ಮುಂಬಡ್ತಿ ನೀಡಿಕೆ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಾಲಯದ ಗಡುವು ಮುಗಿದ ಬಳಿಕ ನ್ಯಾಯಾಲಯದ ಅನುಮತಿ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಈ ವಿಷಯದಲ್ಲಿ ಯಾವುದೇ ಗೊಂದಲ ಬೇಡ ಎಂದು ಹೇಳಿದರು.
ಒಂದೇ ಶಾಲೆಯಲ್ಲಿ ಹತ್ತು ವರ್ಷ ಪೂರೈಸಿದ ಶಿಕ್ಷಕರನ್ನು ಬೇರೆಡೆಗೆ ವರ್ಗಾಯಿಸುವ ಪ್ರಕ್ರಿಯೆ ಆರಂಭವಾಗಿದೆ. ಶಿಕ್ಷಕರ ವರ್ಗಾವಣೆಗೆ ಎ, ಬಿ ಮತ್ತು ಸಿ ವಲಯ ಎಂದು ಗುರುತಿಸಲಾಗಿದ್ದು, ಎ ವಲಯದಲ್ಲಿ ಜಿಲ್ಲಾ ಮತ್ತು ತಾಲೂಕು ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವ ಶಿಕ್ಷಕರು ಕಡ್ಡಾಯವಾಗಿ ಬಿ ಅಥವಾ ಸಿ ವಲಯಕ್ಕೆ ವರ್ಗಾವಣೆಗೊಂಡು ಸೇವೆ ಸಲ್ಲಿಸಬೇಕು.
ಈ ಸಂಬಂಧ ಆನ್‌ಲೈನ್ ಪ್ರಕ್ರಿಯೆ ಆರಂಭವಾಗಿದ್ದು, ವರ್ಗಾವಣೆಗೆ ಸದ್ಯದಲ್ಲಿಯೇ ಕೌನ್ಸೆಲಿಂಗ್ ನಡೆಯಲಿದೆ ಎಂದು ಅವರು ತಿಳಿಸಿದರು. ಪ್ರಾಥಮಿಕ ಹಂತದಲ್ಲಿ ಇಂಗ್ಲಿಷ್ ಭಾಷೆ ಕಲಿಸುವ ಸಂಬಂಧ ಯಾರಿಂದಲೂ ಯಾವುದೇ ತಕರಾರು ವ್ಯಕ್ತವಾಗಿಲ್ಲ. ಆದರೆ,ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡುವುದಕ್ಕೆ ಮಾತ್ರ ವಿರೋಧವಿದೆ. ಆದ್ದರಿಂದ ಇಂಗ್ಲಿಷನ್ನು ಭಾಷೆಯಾಗಿ ಕಲಿಸಲು ಯಾವುದೇ ಅಡ್ಡಿ ಇಲ್ಲ ಎಂದರು.