ಬೆಂಗಳೂರು: ಪದವಿಪೂರ್ವ ಕಾಲೇಜು ಉಪನ್ಯಾಸಕರ ಹುದ್ದೆಗೆ ಭಡ್ತಿ ಹೊಂದಲು ಪ್ರೌಢಶಾಲಾ ಶಿಕ್ಷಕರಿಗೆ ಸ್ನಾತಕೋತ್ತರ ಪದವಿಯಲ್ಲಿ ನಿಗದಿಪಡಿಸಿರುವ ಕನಿಷ್ಠ ಅಂಕಗಳನ್ನು ಸರಕಾರ ಶೇ. 55ರಿಂದ ಶೇ. 50ಕ್ಕೆ ಇಳಿಕೆ ಮಾಡಿದೆ.
ಈ ಸಂಬಂಧ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು, ಇದರಿಂದ ಹೆಚ್ಚು ಪ್ರೌಢಶಾಲಾ ಶಿಕ್ಷಕರಿಗೆ ಪದವಿಪೂರ್ವ ಉಪನ್ಯಾಸಕರಾಗಿ ಭಡ್ತಿ ಹೊಂದಲು ಅವಕಾಶ ಸಿಗಲಿದೆ. ಆ ಮೂಲಕ ಪ.ಪೂ.ಕಾಲೇಜಿನಲ್ಲಿಯ ಶಿಕ್ಷಕರ ಕೊರತೆಯೂ ನೀಗಲಿದೆ.
ಸಂಪುಟ ಸಭೆ ಅನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಎಚ್.ಕೆ. ಪಾಟೀಲ್, ಪದವಿಪೂರ್ವ ಉಪನ್ಯಾಸಕರ ಹುದ್ದೆಗೆ ಭಡ್ತಿ ಪಡೆಯಲು ಪ್ರೌಢಶಾಲಾ ಶಿಕ್ಷಕರು ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇ.55 ಅಂಕಗಳನ್ನು ಪಡೆದಿರಬೇಕು. ಈಗ ಅದನ್ನು ಪರಿಷ್ಕರಿಸಿ ಕನಿಷ್ಠ ಅಂಕಗಳ ಪ್ರಮಾಣವನ್ನು ಶೇ.50ಕ್ಕೆ ಸೀಮಿತಗೊಳಿಸಲಾಗಿದೆ ಎಂದರು.
ಅಲ್ಲದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಥವಾ ಕೇಂದ್ರಿಕೃತ ದಾಖಲಾತಿ ಘಟಕ ಅಥವಾ ಕರ್ನಾಟಕ ಲೋಕಸೇವಾ ಆಯೋಗಗಳನ್ನು ಉಪನ್ಯಾಸಕರ ವೃಂದದ ಆಯ್ಕೆ ಪ್ರಾಧಿಕಾರ’ ಎಂದು ನಿಗದಿಪಡಿಸಲು ಮತ್ತು ಉಪನ್ಯಾಸಕ ವೃಂದದ ನೇರ ನೇಮಕಾತಿಗೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ ಮಾತ್ರ ಕನಿಷ್ಠ ಶೇ. 50ರಷ್ಟು ಅಂಕಗಳನ್ನು ನಿಗದಿಪಡಿಸಲು ಸಂಪುಟ ಒಪ್ಪಿದೆ. ಈ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಸ್ತಾವನೆ ಸಲ್ಲಿಸಿತ್ತು ಎಂದು ಎಚ್.ಕೆ. ಪಾಟೀಲ್ ತಿಳಿಸಿದರು.
2017-18ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದ ಎಲ್ಲ ಅಭ್ಯರ್ಥಿಗಳಿಗೆ 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಒಂದು ಬಾರಿಗೆ ವಯೋಮಿತಿಯ ನಿರ್ಬಂಧವನ್ನು ಸಡಿಲಿಸಿ ಹೆಚ್ಚುವರಿ ವಿಶೇಷ ಅವಕಾಶವನ್ನು ನೀಡುವ ಕುರಿತ ಆದೇಶಕ್ಕೆ ಘಟನೋತ್ತರ ಅನುಮೋದನೆ ನೀಡಲಾಗಿದೆ.
ಇದು 2017-18ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಹುದ್ದೆ ಯ ನೇಮಕಾತಿಗೆ ಅರ್ಜಿ ಸಲ್ಲಿಸಿದ್ದ ಎಲ್ಲ ಅಭ್ಯರ್ಥಿಗಳಿಗೂ ಅನ್ವಯವಾಗಲಿದೆ ಎಂದು ತಿಳಿಸಿದರು.
ಅನಿಮೇಶನ್ ಕ್ಷೇತ್ರ
ಉತ್ತೇಜನಕ್ಕೆ ಕೇಂದ್ರ
ಅನಿಮೇಶನ್ ಕ್ಷೇತ್ರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸುಮಾರು 16 ಕೋಟಿ ರೂ. ವೆಚ್ಚದಲ್ಲಿ ಉತ್ಕೃಷ್ಟತಾ ಕೇಂದ್ರ ಆರಂಭಿಸಲು ಸಂಪುಟ ತೀರ್ಮಾನಿಸಿದೆ ಎಂದು ಎಚ್.ಕೆ. ಪಾಟೀಲ್ ತಿಳಿಸಿದರು.