ಸಿನಿಮಾದ ಕಥೆ ಹಾಡುಗಳನ್ನು ಬೇಡುತ್ತೋ ಇಲ್ಲವೋ. ಆದರೆ, ಸಿನಿಮಾವನ್ನು ಜನರಿಗೆ ತಲುಪಿಸಲು ಹಾಡೊಂದು ಬೇಕು … ಹೀಗೆ ಚಿತ್ರರಂಗಕ್ಕೆ ಬರುವ ಅನೇಕರು ಯೋಚಿಸಿದ ಪರಿಣಾಮವೇ ಪ್ರಮೋಶನಲ್ ಸಾಂಗ್‌ಗಳು ಹುಟ್ಟಿಕೊಳ್ಳುತ್ತಿವೆ. ಈ ಹಿಂದೆ ಆರ್.ಚಂದ್ರು ತಮ್ಮ “ಕನಕ’ ಚಿತ್ರಕ್ಕೆ “ಎಣ್ಣೆ ನಿಮ್ದು ಊಟ ನಮ್ದು’ ಎಂಬ ಪ್ರಮೋಶನಲ್ ಸಾಂಗ್ ಮಾಡಿದ್ದರು.
ಆ ಹಾಡು ಹಿಟ್ ಆಗುತ್ತಿದ್ದಂತೆಯೇ ಅದನ್ನು ಚಿತ್ರೀಕರಿಸಿ ಸಿನಿಮಾದಲ್ಲಿ ಸೇರಿಸಿದ್ದಾರೆ. “ಲೌಡ್ ಸ್ಪೀಕರ್’ ಸಿನಿಮಾ ತಂಡ ಕೂಡಾ ಪ್ರಮೋಶನಲ್ ಹಾಡೊಂದನ್ನು ಬಿಡುಗಡೆ ಮಾಡಿದೆ. ಅದು “ಚಡ್ಡಿ ಒಳಗೆ ಇರುವೆ ಬಿಟ್ಕೊಳ್ಳಿ’. ಚಂದನ್ ಶೆಟ್ಟಿ ಹಾಡಿರುವ ಈ ಪ್ರಮೋಶನಲ್ ಹಾಡನ್ನು ಚಿತ್ರತಂಡ ಇತ್ತೀಚೆಗೆ ಬಿಡುಗಡೆ ಮಾಡಿದೆ. ಹಾಡುಗಳಿಗೆ ಎಲ್ಲಾ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುವ ಮೂಲಕ ಚಿತ್ರತಂಡ ಖುಷಿಯಾಗಿದೆ.
ಈ ಚಿತ್ರವನ್ನು ಶಿವತೇಜಸ್ ನಿರ್ದೇಶಿಸಿದ್ದಾರೆ. ಡಾ.ಕೆ.ರಾಜು ನಿರ್ಮಾಪಕರು. ಈ ಹಿಂದೆ ಇವರಿಬ್ಬರು ಜೊತೆಯಾಗಿ “ಧೈರ್ಯಂ’ ಸಿನಿಮಾ ಮಾಡಿದ್ದರು. ಈಗ “ಲೌಡ್ ಸ್ಪೀಕರ್’ ಮಾಡಿದ್ದಾರೆ. ಆರಂಭದಲ್ಲಿ ಚಿತ್ರಕ್ಕೆ ಯಾವುದೇ ಹಾಡು ಬೇಡ ಎಂದಿದ್ದರಂತೆ ನಿರ್ಮಾಪಕ ರಾಜು. ಆದರೆ, ಚಿತ್ರತಂಡದವರು ಪ್ರಮೋಶನಲ್ ಹಾಡಿದ್ದರೆ ಚೆನ್ನಾಗಿರುತ್ತದೆ ಎಂದು ಹೇಳಿದ ನಂತರ ಒಪ್ಪಿಕೊಂಡರಂತೆ.
ಅದು ಕೂಡಾ ಹಾಡನ್ನು ಫೈನಲ್ ಮಾಡುವ ಮೊದಲು ಅನೇಕರಿಗೆ ಕೇಳಿಸಿ, ಅವರ ಅಭಿಪ್ರಾಯ ಪಡೆದು ಆ ನಂತರ ಅಂತಿಮಗೊಳಿಸಿದ್ದಾರೆ. ಈ ಹಾಡನ್ನು ಪ್ರಮೋಶನಲ್ ಸಾಂಗ್ ಆಗಿಯೇ ಉಳಿಸಿಕೊಳ್ಳಲು ಚಿತ್ರತಂಡ ನಿರ್ಧರಿಸಿದೆ. ಕ್ಲೈಮ್ಯಾಕ್ಸ್ ಆಗಿ ಜನ ಸೀಟಿನಿಂದ ಮೇಲೆಳುವ ಹೊತ್ತಿಗೆ “ಚಡ್ಡಿ ಒಳಗೆ ಇರುವೆ ಬಿಟ್ಕೊಳ್ಳಿ’ ಹಾಡು ತೆರೆಮೇಲೆ ಬರಲಿದೆಯಂತೆ.
ಈ ಮೂಲಕ ಕೊನೆ ಕ್ಷಣದಲ್ಲೂ ಪ್ರೇಕ್ಷಕರನ್ನು ಹಿಡಿದಿಡುವ ಪ್ರಯತ್ನ ಚಿತ್ರತಂಡದ್ದು. “ಲೌಡ್ ಸ್ಪೀಕರ್’ ಚಿತ್ರ ಯುವ ಜನತೆ ಮೊಬೈಲ್‌ಗೆ ಎಷ್ಟೊಂದು ಅಂಟಿಕೊಂಡಿದ್ದಾರೆಂಬ ಅಂಶದೊಂದಿಗೆ ಸಾಗಲಿದೆಯಂತೆ. ಚಿತ್ರದಲ್ಲಿ ಅಭಿಷೇಕ್, ಅನುಷಾ, ದಿಶಾ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರ ಜೂನ್‌ನಲ್ಲಿ ತೆರೆಗೆ ಬರಲಿದೆ.